ಮನೋರಂಜನೆ

ನಾನು ಯುದ್ದವನ್ನು ಬೆಂಬಲಿಸುವುದಿಲ್ಲ, ಆದರೆ ದೇಶ ಭಕ್ತೆ!! ಪಾಕ್ ಯುವತಿಗೆ ಪ್ರಿಯಾಂಕ!

Pinterest LinkedIn Tumblr


ಭಾರತೀಯ ಸೇನೆಯನ್ನು ಪ್ರಶಂಸಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ಕಂ ಹಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಅವರನ್ನು ಸಮಾರಂಭವೊಂದರಲ್ಲಿ ತರಾಟೆಗೆ ತೆಗೆದುಕೊಂಡ ಪಾಕಿಸ್ಥಾನಿ ಯುವತಿಗೆ ಬಾಲಿವುಡ್ ನಟಿ ಸರಿಯಾದ ಪ್ರತ್ಯುತ್ತರ ನೀಡುವ ಮೂಲಕ ತನ್ನ ದೇಶದ ಕುರಿತಾಗಿ ತನಗಿರುವ ಭಾವನೆಯನ್ನು ಜಾಹೀರುಗೊಳಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಿನಲ್ಲಿ ನಟಿ ಪ್ರಿಯಾಂಕ ಛೋಪ್ರಾ ಅವರು ಟ್ವೀಟ್ ಒಂದನ್ನು ಮಾಡಿದ್ದರು ಅದರಲ್ಲಿ ಅವರು ಭಾರತೀಯ ಸೇನೆಯನ್ನು ಉದ್ದೇಶಿಸಿ ‘ಜೈ ಹಿಂದ್’ ಎಂದು ಬರೆದುಕೊಂಡಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ಶನಿವಾರದಂದು ಅಮೆರಿಕಾದ ಲಾಸ್ ಏಂಜಲ್ಸ್ ನಲ್ಲಿ ನಡೆದ ಬ್ಯೂಟಿಕಾನ್ ಸಮಾಂಭದಲ್ಲಿ ಪಾಕಿಸ್ಥಾನಿ ಯುವತಿಯೊಬ್ಬಳು ಪ್ರಿಯಾಂಕ ಅವರನ್ನು ಎಲ್ಲರೆದುರೇ ತರಾಟೆಗೆ ತೆಗೆದುಕೊಂಡಳು.

ವಿಶ್ವಸಂಸ್ಥೆಯ ಶಾಂತಿ ಕಾರಣಕ್ಕಾಗಿನ ‘ಸದುದ್ದೇಶ ರಾಯಭಾರಿ’ಯಾಗಿದ್ದುಕೊಂಡು ನೀವು ಈ ರೀತಿಯ ಟ್ವೀಟ್ ಮಾಡುವುದು ಎಷ್ಟರಮಟ್ಟಿಗೆ ಸರಿ ಮಾತ್ರವಲ್ಲದೇ ನಿಮ್ಮ ಈ ಟ್ವೀಟ್ ಪಾಕಿಸ್ಥಾನವನ್ನು ಅಣು ಯುದ್ದಕ್ಕೆ ಪ್ರೇರೇಪಿಸುವಂತಿದೆ, ಓರ್ವ ಪಾಕಿಸ್ಥಾನಿಯಾಗಿ ನಾನೂ ಸಹಿತ ಸಾವಿರಾರು ಜನರು ನಿಮ್ಮನ್ನು ಓರ್ವ ನಟಿಯಾಗಿ ಇಷ್ಟಪಡುತ್ತೇವೆ. ಆದರೆ ನೀವು ಈ ರೀತಿ ಉತ್ತೇಜನಕಾರಿ ಹೆಳಿಕೆಗಳನ್ನು ನೀಡುವುದು ಸರಿಯೇ..?’ ಎಂದು ಆ ಪಾಕ್ ಯುವತಿ ಪ್ರಿಯಾಂಕರನ್ನು ಪ್ರಶ್ನಿಸುತ್ತಾಳೆ.

ಯುವತಿಯ ಈ ಎಲ್ಲಾ ಆರೋಪ ಭರಿತ ಪ್ರಶ್ನೆಗಳನ್ನು ಶಾಂತವಾಗಿ ಕೇಳಿಸಿಕೊಂಡ ಪ್ರಿಯಾಂಕ ಛೋಪ್ರಾ ಬಳಿಕ ಪಾಕ್ ಯುವತಿಗೆ ಹೀಗೆ ಉತ್ತರಿಸುತ್ತಾರೆ, ‘ನಾನೋರ್ವ ಭಾರತೀಯಳಾಗಿದ್ದೇನೆ, ನನಗೆ ಪಾಕಿಸ್ಥಾನದಲ್ಲೂ ಬಹಳಷ್ಟು ಜನ ಸ್ನೇಹಿತರಿದ್ದಾರೆ. ನಾನೇನೂ ಯುದ್ಧದ ಕುರಿತಾಗಿ ಆಸೆ ಇಟ್ಟುಕೊಂಡವಳಲ್ಲ.. ಆದರೆ ನಾನು ದೇಶಭಕ್ತೆ ಎನ್ನುವುದು ಮಾತ್ರ ನಿಜ. ಆದರೆ ನನ್ನ ಈ ಟ್ವೀಟ್ ನಿಂದ ನನ್ನನ್ನು ಪ್ರೀತಿಸುವವರಿಗೆ ನೋವಾಗಿದ್ದರೆ ಕ್ಷಮಿಸಿ ಬಿಡಿ..’ ಎಂದು ಶಾಂತವಾಗಿಯೇ ಉತ್ತರಿಸುತ್ತಾರೆ.

‘ನಾವೆಲ್ಲರೂ ನಮ್ಮ ಜೀವನದಲ್ಲಿ ಒಂದು ಮಧ್ಯಮ ಮಾರ್ಗವನ್ನು ಅನುಸರಿಸಬೇಕಾಗುತ್ತದೆ. ಅದನ್ನೂ ನೀವೂ ಒಪ್ಪುತ್ತೀರಿ ಎಂದು ನಾನು ಭಾವಿಸುತ್ತೇನೆ. ಅದಕ್ಕೆ ನೀವಿಲ್ಲಿ ನನ್ನನ್ನು ಪ್ರಶ್ನಿಸಿದ ರೀತಿಯೇ ಸಾಕ್ಷಿ. ನಾವೆಲ್ಲಾ ಇಲ್ಲಿ ಜೀವಿಸುತ್ತಿರುವುದು ಪ್ರೀತಿಯಿಂದಲೇ, ದ್ವೇಷಕ್ಕೆ ನಮ್ಮಲ್ಲಿ ಜಾಗವಿಲ್ಲ’ ಎಂದು ಬಳಿಕ ಪ್ರಿಯಾಂಕ ಅವರು ಆ ಯುವತಿಯನ್ನು ಸಮಾಧಾನಪಡಿಸಿದ್ದಾರೆ.

ಆದರೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತನ್ನ ಮೇಲೆ ‘ಯುದ್ಧ ದಾಹಿ’ ಎಂಬ ಗಂಭೀರವಾದ ಆರೋಪವನ್ನು ಸಾಂಪ್ರದಾಯಿಕ ಎದುರಾಳಿ ರಾಷ್ಟ್ರದ ಯುವತಿಯೊಬ್ಬಾಕೆ ಮಾಡಿದರೂ ತನ್ನ ದೇಶವನ್ನು ಸಮರ್ಥಿಸಿಕೊಂಡದ್ದು ಮಾತ್ರವಲ್ಲದೇ ತನ್ನನ್ನು ‘ದೇಶಭಕ್ತೆ’ ಎಂದು ಹೆಳಿಕೊಂಡ ವಿಚಾರ ಇದೀಗ ಪ್ರಿಯಾಂಕ ಛೋಪ್ರಾ ಅವರ ಮೇಲಿನ ಗೌರವವನ್ನು ಹೆಚ್ಚಾಗಿಸಿದೆ.

Comments are closed.