ಮನೋರಂಜನೆ

‘ಯುವರತ್ನ’ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ ಅಪ್ಪು-ಶಿವಣ್ಣ !

Pinterest LinkedIn Tumblr

‘ರಾಜಕುಮಾರ’ ಜೋಡಿ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಗೂ ಸಂತೋಷ್ ಆನಂದ್​ರಾಮ್ ಅವರ ‘ಯುವರತ್ನ’ ಚಿತ್ರ ನಾನಾ ಕಾರಣಗಳಿಂದ ಸಖತ್ ಸೌಂಡ್ ಮಾಡುತ್ತಿದೆ. ಕಳೆದ ಒಂದು ತಿಂಗಳಿಂದ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಪಾತ್ರವರ್ಗದಿಂದ ಸಿನಿಮಾ ಗಮನ ಸೆಳೆದಿತ್ತು. ಆದರೀಗ ಇದೆಲ್ಲವನ್ನು ಮೀರಿಸುವಂತೆ ಹೊಸ ಟಾಕ್​ವೊಂದನ್ನು ಗಾಂಧಿನಗರದಲ್ಲಿ ಸೃಷ್ಟಿಯಾಗಿದೆ.

ಅದೇನೆಂದರೆ ‘ಯುವರತ್ನ’ದಲ್ಲಿ ಪವರ್ ಸ್ಟಾರ್ ಜತೆ ಸೆಂಚುರಿ ಸ್ಟಾರ್ ಕೈ ಜೋಡಿಸಲಿರುವುದು. ಅಂದರೆ ಒಂದೇ ಚಿತ್ರದಲ್ಲಿ ರಾಜ್​ ಕುಡಿಗಳು ಒಂದಾಗ್ತಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಸದ್ಯ ಕೇಳಿ ಬರುತ್ತಿರುವ ಸುದ್ದಿಗಳಲ್ಲಿ ಹೊಸ ಹವಾ ಸೃಷ್ಟಿಸಿರುವುದು ಪುನೀತ್ ರಾಜ್​ಕುಮಾರ್ ಹಾಗೂ ಶಿವರಾಜ್​ ಕುಮಾರ್ ‘ಯುವರತ್ನ’ದಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬುದು. ಈ ಸುದ್ದಿ ಕೇಳಿ ದೊಡ್ಮನೆ ಅಭಿಮಾನಿಗಳು ಹೌಹಾರಿದ್ದರು.

ಆದರೆ ಇಂತಹದೊಂದು ಸುದ್ದಿಯ ಜಾಡು ಹಿಡಿದು ಹೊರಟರೆ ಸಿಗುವ ಉತ್ತರವೇ ಬೇರೆ. ‘ಯುವರತ್ನ’ದಲ್ಲಿ ಪುನೀತ್ ರಾಜ್​ಕುಮಾರ್ ಶಿವಣ್ಣನ ಅಭಿಮಾನಿಯಾಗಿ ಕಾಣಿಸಲಿದ್ದಾರಂತೆ. ಚಿತ್ರದಲ್ಲಿ ಬರುವ ಸನ್ನಿವೇಶವೊಂದರಲ್ಲಿ ‘ಓಂ’ ಚಿತ್ರದ ಪೋಸ್ಟರ್​ ಕೂಡ ಕಾಣಿಸಲಿದೆ. ಹಾಗೆಯೇ ಥಿಯೇಟರ್​ ಸೀನ್​ವೊಂದರಲ್ಲಿ ಶಿವಣ್ಣ ಪರದೆಯೊಳಗಿನ ಪರದೆಯಲ್ಲಿ ಬರಲಿದ್ದಾರಂತೆ.

ಈ ಸನ್ನಿವೇಶದ ಚಿತ್ರೀಕರಣದ ವೇಳೆ ‘ಓಂ’ ಚಿತ್ರದ ಪೋಸ್ಟರ್ ಒಳಗೊಂಡ ಫೋಟೋವೊಂದು ವೈರಲ್ ಆಗಿದೆ. ಇದರಿಂದ ‘ಯುವರತ್ನ’ದಲ್ಲಿ ಶಿವರಾಜ್​ ಕುಮಾರ್ ಇರಲಿದ್ದಾರೆಂಬ ವಂದತಿಗಳು ಗಾಂಧಿನಗರದಲ್ಲಿ ಹಬ್ಬಿದೆ. ಅದೇನೇಯಾದರು ‘ಯುವರತ್ನ’ದಲ್ಲಿ ‘ಸತ್ಯ’ನಾಗಿ ಪರೋಕ್ಷವಾಗಿ ಶಿವಣ್ಣ ಬಂದು ಹೋಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ ರಾಜ್​ವಂಶ ಫ್ಯಾನ್ಸ್​.

ಸದ್ಯ ‘ಯುವರತ್ನ’ ಚಿತ್ರದ ಚಿತ್ರೀಕರಣದಲ್ಲಿ ಅಪ್ಪು ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿ ಅಪ್ಪು ಕಾಲೇಜು ಸ್ಟೂಡೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂತೋಷ್​ ಆನಂದ್​ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ನಾಯಕಿಯಾಗಿ ಸಾಯೆಷಾ ಸೈಗಲ್ ಬಣ್ಣ ಹಚ್ಚುತ್ತಿದ್ದಾರೆ. ಹಾಗೆಯೇ ಚಿತ್ರದ ಪ್ರಮುಖ ಪಾತ್ರದಲ್ಲಿ ಡಾಲಿ ಧನಂಜಯ್, ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಕಾಣಿಸಿಕೊಳ್ಳುತ್ತಿದೆ.

Comments are closed.