ಮನೋರಂಜನೆ

ನಟಿ ಶ್ರೀದೇವಿ ಸಾವು ಕೊಲೆ: ಕುತೂಹಲಕ್ಕೆ ಎಡೆಮಾಡಿಕೊಟ್ಟ ಕೇರಳ ಡಿಜಿಪಿ ಹೇಳಿಕೆ

Pinterest LinkedIn Tumblr

ನಟಿ ಶ್ರೀದೇವಿ ಮೃತಪಟ್ಟು ವರ್ಷ ಕಳೆದರೂ ಅವರ ಸಾವಿನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಕೆಲವರು ಇದೊಂದು ಆಕಸ್ಮಿಕ ಸಾವು ಎಂಬುದನ್ನು ಬಲವಾಗಿ ನಂಬಿದರೆ, ಇನ್ನೂ ಕೆಲವರು ಇದೊಂದು ಸಂಚಿತ ಕೊಲೆ ಎಂದು ಹೇಳುತ್ತಿದ್ದಾರೆ. ಈ ವಿಚಾರ ಈಗ ತಣ್ಣಗಾಗಿದೆ. ಆದರೆ, ಕೇರಳ ಡಿಜಿಪಿ (ಕಾರಾಗೃಹ) ರಿಷಿರಾಜ್​ ಸಿಂಗ್​ ಶ್ರೀದೇವಿಯವರದ್ದು ಆಕಸ್ಮಿಕ ಸಾವಲ್ಲ, ಅದೊಂದು ಕೊಲೆ ಎಂದು ಹೇಳಿರುವ ವಿಚಾರ ಈಗ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ವಿಧಿವಿಜ್ಞಾನ ತಜ್ಞ ಡಾ. ಉಮಾದಥನ್​ ಶ್ರೀದೇವಿ ಸಾವಿನ ಬಗ್ಗೆ ರಿಷಿರಾಜ್​ ಜೊತೆ ಮಾತುಕತೆ ನಡೆಸಿದ್ದರಂತೆ. “ನಾನು ಉಮಾದಥನ್ ಜೊತೆ ಶ್ರೀದೇವಿ ಸಾವಿನ ವಿಚಾರ ಮಾತನಾಡಿದ್ದೆ. ಈ ವೇಳೆ ಅವರು ಇದೊಂದು ಆಕಸ್ಮಿಕ ಸಾವಲ್ಲ, ಕೊಲೆ ಇರಬಹುದು ಎಂದು ಶಂಕಿಸಿದ್ದರು,” ಎಂದಿದ್ದಾರೆ ರಿಷಿರಾಜ್​.

“ಒಂದು ಅಡಿ ನೀರಿರುವ ಬಾತ್​ ಟಬ್​ನಲ್ಲಿ ಯಾರೂ ಮುಳುಗಿ ಸಾಯುವುದಿಲ್ಲ ಎಂದು ಉಮಾದಥನ್​ ನನ್ನ ಬಳಿ ಹೇಳಿದ್ದರು. ಟಬ್​ನಲ್ಲಿ ಕಡಿಮೆ ನೀರಿತ್ತು. ಹಾಗಾಗಿ ಯಾರೋ ಅವರ ಮುಖವನ್ನು ಗಟ್ಟಿಯಾಗಿ ಒತ್ತಿ ನೀರಿನಲ್ಲಿ ಮುಳುಗಿಸಿರಬೇಕು. ಹಾಗಿದ್ದಾಗ ಮಾತ್ರ ಸಾವು ಸಂಭವಿಸುತ್ತದೆ ಎಂದು ಅವರು ಹೇಳಿಕೊಂಡಿದ್ದರು,” ಎಂಬುದಾಗಿ ರಿಷಿರಾಜ್​ ತಿಳಿಸಿದ್ದಾರೆ. ಉಮಾದಥನ್​ ಇತ್ತೀಚೆಗೆ ಮೃತಪಟ್ಟಿದ್ದರು.

ಸದ್ಯ ಈ ಹೇಳಿಕೆ ಚರ್ಚೆಗೆ ಎಡೆಮಾಡಿಕೊಟ್ಟಿದೆ. ನಿಜಕ್ಕೂ ಅಂದು ನಡೆದಿದ್ದು ಕೊಲೆಯೇ ಎನ್ನುವ ಪ್ರಶ್ನೆ ಮತ್ತೆ ಉದ್ಭವಿಸಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಶ್ರಿದೇವಿ ಪತಿ ಬೋನಿ ಕಪೂರ್​, ಮೂರ್ಖರು ಇಂಥ ಹೇಳಿಕೆಯನ್ನು ನೀಡುತ್ತಿರುತ್ತಾರೆ ಎಂದಿದ್ದಾರೆ. 2018 ಫೆ.24ರಂದು ಶ್ರೀದೇವಿ ದುಬೈನ ಹೋಟೆಲ್​ ಒಂದರಲ್ಲಿ ಬಾತ್​ಟಬ್​ನಲ್ಲಿ ಮುಳುಗಿ ಮೃತಪಟ್ಟಿದ್ದರು.

Comments are closed.