ಮನೋರಂಜನೆ

ರಶ್ಮಿಕಾ ಮಂದಣ್ಣ ಸಂಭಾವನೆ ಹೆಚ್ಚಳ!

Pinterest LinkedIn Tumblr


ಬೆಂಗಳೂರು: ಕಡಿಮೆ ಅವಧಿಯಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ. ಸದ್ಯ ಅವರು ಸ್ಟಾರ್ ಹೀರೋಗಳ ಮೊದಲ ಆಯ್ಕೆ. ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ ಮಿಂಚುತ್ತಿದ್ದಾರೆ. ಹೀಗಿರುವಾಗಲೇ ಸಂಭಾವನೆ ವಿಚಾರದಲ್ಲಿಯೂ ರಶ್ಮಿಕಾ ಈಗ ಸುದ್ದಿಯಲ್ಲಿದ್ದಾರೆ. ವೃತ್ತಿಜೀವನ ಪ್ರಗತಿಯತ್ತ ಸಾಗುತ್ತಿದ್ದಂತೆಯೇ ಸಂಭಾವನೆಯನ್ನೂ ಏರಿಸಿಕೊಂಡಿದ್ದಾರೆ.

ಈ ಮೊದಲು ಒಂದು ಚಿತ್ರಕ್ಕೆ 40 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದ ರಶ್ಮಿಕಾ, ಈಗ ಕೈಯಲ್ಲಿರುವ ಹಲವು ಪ್ರಾಜೆಕ್ಟ್​ಗಳಿಗೆ ತಲಾ 80 ಲಕ್ಷ ರೂ. ಪಡೆಯುತ್ತಿದ್ದಾರಂತೆ! ಅಚ್ಚರಿ ಅನಿಸಿದರೂ ನಿಜ ಎನ್ನುತ್ತಿವೆ ಟಾಲಿವುಡ್ ಮೂಲಗಳು. ಅಷ್ಟೊಂದು ಸಂಭಾವನೆ ಬಯಸುವುದಕ್ಕೂ ಕೆಲವೊಂದಿಷ್ಟು ಕಾರಣಗಳಿವೆ.

ಆ ಕಾರಣ; ಸ್ಟಾರ್ ನಾಯಕರ ಸಿನಿಮಾಗಳು. ಹೌದು, ರಶ್ಮಿಕಾ ಒಪ್ಪಿಕೊಂಡ ಎಲ್ಲ ಸಿನಿಮಾಗಳಲ್ಲಿ ಸ್ಟಾರ್ ಹೀರೋಗಳೇ ಇದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು, ಕಾರ್ತಿ, ನಿತಿನ್ ಜತೆಗೆ ರಶ್ಮಿಕಾ ನಟಿಸುವುದು ಕನ್ಪಮ್ರ್ ಆಗಿದೆ. ಏನಿಲ್ಲವೆಂದರೂ ಈ ನಟರ ಸಿನಿಮಾಗಳು ಬಾಕ್ಸ್ ಆಫೀಸ್​ನಲ್ಲಿ ಕೋಟಿ ಕೋಟಿ ಹಣ ಗಳಿಕೆ ಮಾಡುತ್ತವೆ. ಜತೆಗೆ ಅವರ ಸಂಭಾವನೆಯೂ ಕೋಟಿಯ ಮೇಲೆ ಇರುತ್ತದೆ ಎಂಬುದು ಗೊತ್ತಿರುವ ಸಂಗತಿ. ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ರಶ್ಮಿಕಾ ಸಂಭಾವನೆ ಹೆಚ್ಚು ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಜತೆಗೆ ‘ಗೀತ ಗೋವಿಂದಂ’ ಚಿತ್ರದ ಯಶಸ್ಸು, ಕನ್ನಡದಲ್ಲಿ ‘ಯಜಮಾನ’ ಚಿತ್ರಕ್ಕೆ ಸಿಕ್ಕ ಸ್ಪಂದನೆ, ಬಿಡುಗಡೆಗೂ ಮುನ್ನ ಹೈಪ್ ಸೃಷ್ಟಿಸಿರುವ ‘ಡಿಯರ್ ಕಾಮ್ರೆಡ್’ ಹೀಗೆ ಈ ಎಲ್ಲ ಚಿತ್ರಗಳು ರಶ್ಮಿಕಾಗೆ ಒಳ್ಳೆಯ ಹೆಸರು ತಂದುಕೊಟ್ಟಿವೆ. ಅದೂ ಸಹ ಸಂಭಾವನೆ ಏರಿಕೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಒಂದು ವೇಳೆ ಒಪ್ಪಿಕೊಂಡ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಮಾಯಿ ಮಾಡಿದ್ದೇ ಹೌದಾದರೆ, ಮುಂದಿನ ದಿನಗಳಲ್ಲಿ ರಶ್ಮಿಕಾ ಸಂಭಾವನೆ ಕೋಟಿ ದಾಟಿದರೂ ಅಚ್ಚರಿ ಪಡಬೇಕಿಲ್ಲ! ಸದ್ಯ ಕನ್ನಡದ ‘ಪೊಗರು’ ಸೇರಿ ಪರಭಾಷೆಯ ಸಿನಿಮಾಗಳ ಚಿತ್ರೀಕರಣ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.

Comments are closed.