ಬೆಂಗಳೂರು: ಸೂಜಿದಾರ ಚಿತ್ರದಲ್ಲಿ ತಮ್ಮ ಪಾತ್ರವನ್ನು ಸರಿಯಾಗಿ ಬಿಂಬಿಸಿಲ್ಲ, ಅಲ್ಲದೇ ತಮ್ಮ ಜೊತೆ ಚರ್ಚಿಸದೇ ನಿರ್ದೇಶಕರು ಕಥೆಯನ್ನು ತಿರುಚಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಸೂಜಿದಾರ ಚಿತ್ರತಂಡ ಹರಿಪ್ರಿಯಾ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು ನೀಡಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹರಿಪ್ರಿಯಾ ಅವರು ಅನಗತ್ಯವಾಗಿ ನಮ್ಮ ಹಾಗೂ ಚಿತ್ರತಂಡದ ಮೇಲೆ ಆರೋಪ ಮಾಡುತ್ತಿದ್ದಾರೆ. ಚಿತ್ರ ತೆರೆಕಂಡ ಮೂರೇ ದಿನಕ್ಕೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ. ಅಲ್ಲದೇ ಅವರ ಹೇಳಿಕೆಯಿಂದಾಗಿ ಕಳೆದ ಮೂರು ದಿನಗಳಿಂದ ಚಿತ್ರದ ಕಲೆಕ್ಷನ್ ಕೂಡ ಕಡಿಮೆಯಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಹರಿಪ್ರಿಯಾ ಅವರು ಚಿತ್ರದ ಬಗ್ಗೆ ನೀಡಿರುವ ಹೇಳಿಕೆ ಖಂಡನಾರ್ಹವಾದದ್ದು, ನಮ್ಮ ಫೋನ್ ಕರೆಯನ್ನು ಅವರು ಸ್ವೀಕರಿಸುತ್ತಿಲ್ಲ. ಚಿತ್ರತಂಡದ ವಿರುದ್ಧ ನಟಿ ಹರಿಪ್ರಿಯಾ ಅವರು ಅನಗತ್ಯವಾಗಿ ಆರೋಪ ಮಾಡುತ್ತಿದ್ದು, ಅವರಿಂದ ಸಿನಿಮಾಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
ನಟಿ ಹರಿಪ್ರಿಯಾ ಅವರಿಗೆ ಬಹುಶಃ ಇಗೋ ಸಮಸ್ಯೆ ಇರಬಹುದು. ಚಿತ್ರತಂಡ ನಡೆಸಿದ ಯಾವುದೇ ಸುದ್ದಿಗೋಷ್ಠಿಗೂ ಅವರು ಬಂದು ಬೆಂಬಲ ನೀಡಿಲ್ಲ. ಆದರೆ ಚಿತ್ರ ಉತ್ತಮ ಗಳಿಕೆ ಮಾಡುತ್ತಿರುವ ವೇಳೆಯೇ ಇಂತಹ ಆರೋಪ ಮಾಡಿದ್ದಾರೆ. ಇದರಿಂದ ಚಿತ್ರದ ಗಳಿಕೆ ಮೇಲೆ ಪರಿಣಾಮ ಬೀರಿದೆ. ಅಲ್ಲದೇ ನಮ್ಮ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಚಿತ್ರದ ನಿರ್ಮಾಪಕರಿಗೆ ಹೆಚ್ಚು ನಷ್ಟ ಆಗಿದೆ ಎಂದಿದ್ದಾರೆ.
ಇದೇ ವೇಳೆ ಹರಿಪ್ರಿಯಾ ಅವರ ಆರೋಪಕ್ಕೆ ಸ್ಪಷ್ಟ ನೀಡಿರುವ ನಿರ್ದೇಶಕರು, ಸಿನಿಮಾ ಕಥೆಯನ್ನೂ ನಾವು ತಿರುಚಿಲ್ಲ. ಚಿತ್ರದ ಬೇರೆ ಪಾತ್ರಗಳು ಹೈಲೈಟ್ ಆಗಿರುವುದು ಅವರಿಗೆ ಸಮಸ್ಯೆ ಆಗಿದೆ. ನಮ್ಮ ಚಿತ್ರತಂಡ ಹೊಸಬರ ತಂಡವಾಗಿದ್ದು, ಆದ್ದರಿಂದಲೇ ಅಸಡ್ಡೆ ತೋರಿದ್ದಾರೆ. ಆದ್ದರಿಂದ ತಮ್ಮ ಹೇಳಿಕೆಯ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದರು.
ಒಂದೊಮ್ಮೆ ಸಿನಿಮಾ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಚಿತ್ರತಂಡ ನಮ್ಮ ಎದುರು ಪ್ರಸ್ತಾಪ ಮಾಡಿ ಬಗೆಹರಿಸಕೊಳ್ಳಬಹುದಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ವಿವಾದ ಮಾಡಿದ್ದಾರೆ. ಸಿನಿಮಾ ಒಪ್ಪಿಕೊಳ್ಳುವ ಮುನ್ನ ಸಿನಿಮಾ ಕಥೆ ಹೇಳಿದ್ದೇವೆ. ಚಿತ್ರದ ಸ್ಕ್ರಿಪ್ಟ್ ಮಾದರಿಯನ್ನು ನೀಡಿದ್ದೇವೆ. ಕಳೆದ ವರ್ಷ ವರಮಹಾಲಕ್ಷಿ ಹಬ್ಬದಲ್ಲಿ ಅವರಿಗೆ ಚಿತ್ರತಂಡದ ಬಗ್ಗೆ ವೈಮನಸ್ಸು ಆರಂಭವಾಗಿತ್ತು. ಅವರ ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ಬಂದಿತ್ತು. ಆ ಬಳಿಕ ನಾವು ಚಿತ್ರದ ಎಲ್ಲಾ ಪಾತ್ರಧಾರಿಗಳ ಪರಿಚಯಿಸುವ ಪೋಸ್ಟರ್ ರಿಲೀಸ್ ಮಾಡಿದ್ದೇವು. ಇದರಿಂದ ಅವರಿಗೆ ಇರುಸು ಮುರಿಸು ಆಗಿದೆ. ಚಿತ್ರದ ಪೋಸ್ಟರ್ ನಲ್ಲಿ ಅವರು ಒಬ್ಬರೇ ಇರಬೇಕು ಎಂಬ ಆಸೆ ಇತ್ತು. ಅದಕ್ಕಾಗಿಯೇ ಸಿನಿಮಾ ಪ್ರೆಸ್ ಮೀಟ್‍ಗೆ ಬರಬೇಕಾದರೆ ಸಹ ನಟಿ ಚೈತ್ರಾ ಬರಬಾರದು ಎಂದು ತಿಳಿಸಿದ್ದರು ಎಂದು ಆರೋಪಿಸಿದರು.
ಇತ್ತೀಚಿಗಷ್ಟೇ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಆಡಿಯೋ ಲಾಂಚ್ ವೇಳೆ ಹರಿಪ್ರಿಯಾ ಚಿತ್ರತಂಡದ ಬಗ್ಗೆ ತಮ್ಮ ಅಸಮಾಧಾನ ಹೊರಹಾಕಿದ್ದರು.