ಮನೋರಂಜನೆ

ನಟ ಅಜಯ್ ದೇವಗನ್‌ಗೆ ಕ್ಯಾನ್ಸರ್ ರೋಗಿ ಮಾಡಿದ ಮನವಿಯನ್ನೊಮ್ಮೆ ನೋಡಿ…

Pinterest LinkedIn Tumblr

ಬಾಲಿವುಡ್ ಸ್ಟಾರ್ ಹೀರೋ ಅಜಯ್ ದೇವಗನ್‌ಗೆ ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಭಿಮಾನಿಯೊಬ್ಬ ಮನವಿ ಮಾಡಿಕೊಂಡಿದ್ದಾರೆ. ರಾಜಸ್ಥಾನ ಮೂಲದ ನಾನಕರಾಮ್ ಎಂಬುವವರು ಟೀ ಸ್ಟಾಲ್ ನಡೆಸುತ್ತಿದ್ದಾರೆ. ಇಬ್ಬರು ಮಕ್ಕಳ ತಂದೆ ಆಗಿರುವ ನಾನಕ್‍ರಾಮ್‌ಗೆ ಅಜಯ್ ದೇವಗನ್ ಎಂದರೆ ಎಲ್ಲಿಲ್ಲದ ಅಭಿಮಾನ. ಈಗ ಈ ಅಭಿಮಾನಿ ಅಜಯ್ ದೇವಗನ್‌ರಲ್ಲಿ ಒಂದು ಮನವಿ ಮಾಡಿದ್ದಾರೆ.

ಹೊಗೆಸೊಪ್ಪಿಗೆ ಸಂಬಂಧಿಸಿದ ಜಾಹೀರಾತುಗಳಲ್ಲಿ ದಯವಿಟ್ಟು ಅಭಿನಯಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ನಲವತ್ತು ವರ್ಷದ ನಾನಕ್‍ರಾಮ್. ಹೊಗೆಸೊಪ್ಪಿನ ಉತ್ಪನ್ನಗಳನ್ನು ಬಳಸಿದ ಕಾರಣ ತನಗೀಗ ಕ್ಯಾನ್ಸರ್ ಸೋಕಿದೆ ಎಂದಿದ್ದಾರೆ.

ಅಜಯ್ ದೇವಗನ್ ಯಾವ ಹೊಗೆಸೊಪ್ಪಿನ ಉತ್ಪನ್ನಕ್ಕೆ ಪ್ರಚಾರ ರಾಯಭಾರಿಯಾಗಿದ್ದರೋ ಅದನ್ನೇ ಅವರು ಬಳಸುತ್ತಿದ್ದ ಎಂದು ನಾನಾಕ್‌ರಾಮ್ ಕುಟುಂಬಿಕರು ತಿಳಿಸಿದ್ದಾರೆ. ಆ ಹೊಗೆಸೊಪ್ಪಿನ ಉತ್ಪನ್ನವೇ ಈಗ ಕ್ಯಾನ್ಸರ್‌ಗೆ ಕಾರಣವಾಗಿದೆ ಎಂದಿದ್ದಾರೆ.

ನಟ ಅಜಯ್ ದೇವಗನ್‌ಗೆ ಅವರ ನೋವನ್ನು, ನಡೆದ ದುರಂತವನ್ನು ತಿಳಿಸುವ ಸಲುವಾಗಿ ನಾನಕ್‌ರಾಮ್ ಕುಟುಂಬಿಕರು 1000 ಕರಪತ್ರಗಳನ್ನು ಮುದ್ರಿಸಿ ಸಂಗನೇರ್, ಜಗತ್‌ಪುರಾದಲ್ಲಿನ ಗೋಡೆಗಳಿಗೆ ಅಂಟಿಸಿದ್ದಾರೆ. ಮದ್ಯ, ಸಿಗರೇಟ್, ಹೊಗೆಸೊಪ್ಪು ದೇಹಕ್ಕೆ ತುಂಬಾ ಹಾನಿಕರ, ಅದನ್ನು ನಟರು ಯಾರೂ ಪ್ರಚಾರ ಮಾಡಬೇಡಿ ಎಂದು ಕರಪತ್ರದಲ್ಲಿ ನಾನಕ್‍ರಾಮ್ ವಿನಂತಿಸಿಕೊಂಡಿದ್ದಾರೆ.

“ಅಜಯ್ ದೇವಗನ್ ನಟಿಸಿರುವ ಬ್ರಾಂಡ್ ಹೊಗೆಸೊಪ್ಪನ್ನು ನಮ್ಮ ತಂದೆ ಕೆಲವು ವರ್ಷಗಳಿಂದ ಬಳಸುತ್ತಿದ್ದಾರೆ. ಆ ಕಾರಣ ಈಗ ಅವರಿಗೆ ಕ್ಯಾನ್ಸರ್ ಸೋಕಿದೆ. ಅಷ್ಟು ದೊಡ್ಡ ತಾರೆಯಾಗಿದ್ದು ಇಂತಹ ಹೊಗೆಸೊಪ್ಪು ಉತ್ಪನ್ನಗಳಿಗೆ ಪ್ರಚಾರ ಮಾಡಬಾರದು ಎಂದು ನಮ್ಮ ತಂದೆ ಭಾವಿಸಿದರು. ಹಾಗಾಗಿ ಹೊಗೆಸೊಪ್ಪಿನ ಉತ್ಪನ್ನಗಳನ್ನು ಪ್ರಚಾರ ಮಾಡಬೇಡಿ ಎಂಬ ನಮ್ಮ ಪ್ರಯತ್ನವನ್ನು ಅಜಯ್ ದೇವಗನ್‌ಗೆ ಮುಟ್ಟಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ನಾನಕ್‌ರಾಮ್ ಪುತ್ರ ದಿನೇಶ್ ಮೀನಾ ತಿಳಿಸಿದರು. ಈ ಬಗ್ಗೆ ಅಜಯ್ ದೇವನ್ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕು.

ಸದ್ಯಕ್ಕೆ ನಾನಕ್‍ರಾಮ್ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಅವರು ಮಾತನಾಡುವ ಸ್ಥಿತಿಯಲ್ಲಿಲ್ಲ. ಮೊದಲು ಟೀ ಮಾರುತ್ತಿದ್ದ ಅವರು ಈಗ ಜೈಪುರದ ಸಂಗನೇರ್‌ನಲ್ಲಿ ಹಾಲನ್ನು ಮಾರುತ್ತಿದ್ದಾರೆ.

Comments are closed.