ಇಂದು ಕನ್ನಡದ ಕಣ್ಮಣಿ ಕರುನಾಡ ಮುತ್ತು ವರನಟ ಡಾ.ರಾಜ್ಕುಮಾರ್ರವರ 90ನೇ ವರ್ಷದ ಜನ್ಮದಿನ. 1929ರ ಏಪ್ರಿಲ್ 24 ರಂದು ಹುಟ್ಟಿದ್ದ ರಾಜಕುಮಾರ ಏಪ್ರಿಲ್ 12 2006 ರಲ್ಲಿ ಅಂತಿಮ ವಿದಾಯ ಹೇಳಿದ್ದರು. ಇದರ ನಡುವೆ 200 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ತನು ಮನ ತಣಿಸುವಲ್ಲಿ ರಾಜಣ್ಣ ಯಶಸ್ವಿಯಾಗಿದ್ದರು.
1954 ರಿಂದ ತಮ್ಮ ಸಿನಿ ಪಯಣ ಆರಂಭಿಸಿದ್ದ ನಟಸಾರ್ವಭೌಮ ಕೊನೆಯ ಬಾರಿ ಬಣ್ಣ ಹಚ್ಚಿದ್ದು 2000ರಲ್ಲಿ ತೆರೆಕಂಡಂತಹ ‘ಶಬ್ಧವೇಧಿ’ ಎಂಬ ಸಿನಿಮಾದಲ್ಲಿ. ಈ ಬಳಿಕ ಯಾವುದೇ ಚಿತ್ರಗಳಲ್ಲಿ ವರನಟ ಕಾಣಿಸಿಕೊಂಡಿರಲಿಲ್ಲ. ತಮ್ಮ ಮೂವರು ಮಕ್ಕಳೊಂದಿಗೆ ಅಭಿನಯಿಸಬೇಕೆಂಬ ಮಹದಾಸೆ ಹೊಂದಿದ್ದರು ಅದನ್ನು ಈಡೇರಿಸುವಂತಹ ನಿರ್ದೇಶಕರು ಸಿಗದಿದ್ದದು ನಮ್ಮ ಚಿತ್ರರಂಗದ ದುರಾದೃಷ್ಟ.
‘ಶಬ್ಧವೇಧಿ’ ಸಿನಿಮಾದ ಬಳಿಕ ಇನ್ಯಾವುದೇ ಸಿನಿಮಾದ ಬಗ್ಗೆ ಅಣ್ಣಾವ್ರು ಆಸಕ್ತಿವಹಿಸಲ್ಲವೇ ಎಂಬುದನ್ನು ಕೆದಕಿದಾಗ ಒಂದಷ್ಟು ಕುತೂಹಲಕಾರಿ ಸಂಗತಿಗಳು ಸಿಗುತ್ತದೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ’ ಎಂಬ ಗೋಪಾಲಕೃಷ್ಣ ಅಡಿಗರ ಕವಿತೆಯ ಸಾಲಿನ ಮೊದಲ ಭಾಗವನ್ನು ಟೈಟಲ್ ಆಗಿಸಿ ಅಭಿನಯಿಸಲು ‘ರಸಿಕರ ರಾಜ’ ತಯಾರಾಗಿದ್ದರು.
‘ಇರುವುದೆಲ್ಲವ ಬಿಟ್ಟು’ ಎಂಬ ಶೀರ್ಷಿಕೆಯನ್ನಿರಿಸಿ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವರನಟನಿಗೆ ಕಥೆ ಹೇಳಿದ್ದರು. ಚಿತ್ರದ ಶೀರ್ಷಿಕೆಯನ್ನೇ ತುಂಬಾ ಮೆಚ್ಚಿಕೊಂಡಿದ್ದ ಡಾ.ರಾಜ್ ಈ ಸಿನಿಮಾದಲ್ಲಿ ಅಭಿನಯಿಸಲು ಆಸಕ್ತಿ ತೋರಿಸಿದ್ದರಂತೆ. ಆದರೆ ಅನಾರೋಗ್ಯ ಹಾಗೂ ಮತ್ತಿತರ ಕಾರಣಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ.
ಇತ್ತೀಚೆಗೆ ‘ಇರುವುದೆಲ್ಲವ ಬಿಟ್ಟು’ ಎಂಬ ಶೀರ್ಷಿಕೆಯಲ್ಲಿ ಕಾಂತ ಕನ್ನಲ್ಲಿ ಚಿತ್ರವೊಂದನ್ನು ನಿರ್ದೇಶಿಸಿದ್ದರು. ಈ ಸಿನಿಮಾ ನೋಡಿದ ಕೆ.ಎಂ.ಎಫ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎ.ಎಸ್. ಪ್ರೇಮನಾಥ್ ಖುದ್ದು ನಿರ್ದೇಶಕರ ಬಳಿ ಈ ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದರಂತೆ. ಡಾ.ರಾಜ್ ಕುಟುಂಬದ ಜೊತೆ ತೀರಾ ನಿಕಟ ಸಂಪರ್ಕ ಹೊಂದಿರುವ ಪ್ರೇಮ್ನಾಥ್, ‘ಇರುದೆಲ್ಲವ ಬಿಟ್ಟು’ ಎಂಬ ಚಿತ್ರದಲ್ಲಿ ಅಣ್ಣಾವ್ರ ಬಣ್ಣ ಹಚ್ಚಬೇಕಿತ್ತು. ಆದರೆ ನಮ್ಮೆಲ್ಲರ ದುರಾದೃಷ್ಟ ವಿಭಿನ್ನ ಶೀರ್ಷಿಕೆಯಲ್ಲಿ ಅದ್ಭುತ ಸಿನಿಮಾ ನೋಡುವ ಭಾಗ್ಯ ನಮ್ಮದಾಗಲಿಲ್ಲ ಎಂದು ತಿಳಿಸಿದ್ದರು. ಶಬ್ಧವೇಧಿಯ ಇನ್ಸ್ಪೆಕ್ಟರ್ ಸಂದೀಪ್ ನಮ್ಮ ಪಾಲಿನ ಕೊನೆಯ ರಾಜಣ್ಣ ಆಗಿಬಿಟ್ಟಿತು.
ಒಂದು ವೇಳೆ ಅಣ್ಣಾವ್ರು ಈಗಲೂ ನಮ್ಮೊಂದಿಗಿದ್ದು, ‘ಇರುವುದೆಲ್ಲವ ಬಿಟ್ಟು’ ಎಂಬ ಶೀರ್ಷಿಕೆಯಲ್ಲಿ ಅವರು ಅಭಿನಯದ ಚಿತ್ರವೊಂದು ಮೂಡಿಬಂದರೆ ಹೇಗಿರುತ್ತೆ? ಆ ಟೈಟಲ್, ವರನಟನ ಅಭಿನಯ…ಪಾತ್ರದಲ್ಲಿನ ತಲ್ಲೀನತೆ..ಶೀರ್ಷಿಕೆಗೆ ನ್ಯಾಯ ಒದಗಿಸಬಲ್ಲ ಅಭಿನಯ ಚತುರ…ಹೂಂಹುಂ ಅಣ್ಣಾವ್ರವಿಗೆ ಅಣ್ಣಾವ್ರೇ ಸಾಟಿ ಎನ್ನುವುದು ಇದೇ ಕಾರಣಕ್ಕೆ ಅಲ್ಲವೇ.