ಮನೋರಂಜನೆ

‘ಕರ್ಣ’ನಾಗಿ ರೀ ಎಂಟ್ರಿ ಕೊಡಲಿರುವ ರಕ್ಷಿತ್ ಶೆಟ್ಟಿ

Pinterest LinkedIn Tumblr

‘ಕಿರಿಕ್ ಪಾರ್ಟಿ’ ಚಿತ್ರದ ಕರ್ಣನ ಪಾತ್ರವನ್ನು ಯಾರು ತಾನೆ ಮರೆಯಲು ಸಾಧ್ಯ. ರೇಬನ್ ಗ್ಲಾಸ್, ಕುರುಚಲು ಗಡ್ಡ, ಗತ್ತಿನ ನೋಟ…ಒಟ್ಟಾರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಹೊಸ ಇಮೇಜನ್ನು ನೀಡಿದ್ದ ಈ ಪಾತ್ರ ಮತ್ತೊಮ್ಮೆ ತೆರೆ ಮೇಲೆ ರಾರಾಜಿಸಲಿದೆ. ಅದು ಕೂಡ ಇದೇ ಏಪ್ರಿಲ್​ 19 ರಿಂದ.

ನಿರ್ಮಾಪಕ ಕೆ.ಮಂಜು ಅವರ ಸುಪುತ್ರ ಶ್ರೇಯಸ್ ಮಂಜು ಅಭಿನಯಿಸಿರುವ ‘ಪಡ್ಡೆಹುಲಿ’ ಸಿನಿಮಾದಲ್ಲಿ ರಕ್ಷಿತ್​ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಟ್ರೈಲರ್​ ಮೂಲಕ ಬಹಿರಂಗವಾಗಿತ್ತು. ಕಬ್ಬಡಿ ಕೋರ್ಟಿನ ಕಿಂಗ್ ಅವತಾರದಲ್ಲಿ ಮಿಂಚಿದ್ದ ರಕ್ಷಿತ್​ ಶೆಟ್ಟಿಯ ಪಾತ್ರದ ಹೆಸರು ಕೂಡ ಕರ್ಣನಂತೆ.

ಕಿರಿಕ್ ಪಾರ್ಟಿಯ ರಗಡ್​ ಸ್ಟುಡೆಂಟ್ ಆಗಿ ಇಲ್ಲೂ ಕೂಡ ಶೆಟ್ರು ಮಿಂಚು ಹರಿಸಲಿದ್ದಾರೆ. ಇಲ್ಲಿ ‘ಪಡ್ಡೆಹುಲಿ’ ನಾಯಕ ಶ್ರೇಯಸ್​ನ ಸೀನಿಯರ್ ಆಗಿ ರಕ್ಷಿತ್ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಕಾಲೇಜ್​ ಕಬ್ಬಡ್ಡಿ ತಂಡವನ್ನು ಮುನ್ನಡೆಸುವ ಕರ್ಣ ಖದರ್ ತೋರಿಸಲಿದ್ದಾರೆ. ಇದರ ಕೆಲ ಸಣ್ಣ ಝಲಕ್ ಅಷ್ಟೇ ಈ ಹಿಂದಿನ ಟ್ರೇಲರ್​ನಲ್ಲಿ ನೋಡಿದ್ದು.

ನಾಯಕನೊಂದಿಗಿನ ಕಿರಿಕ್ ವೇಳೆ ಎಂಟ್ರಿ ಕೊಡಲಿರುವ ಕರ್ಣ ಅದೇ ಹಳೇ ಗತ್ತಿನಲ್ಲಿ ಎದುರಾಳಿಯೊಂದಿಗೆ ಕಬ್ಬಡಿ ಅಂಗಳದಲ್ಲಿ ತೊಡೆ ತಟ್ಟಲಿದ್ದಾರೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಚಿತ್ರವನ್ನು ‘ರಾಜಾಹುಲಿ’ ಖ್ಯಾತಿ ಗುರುದೇಶಪಾಂಡೆ ನಿರ್ದೇಶಿಸಿದ್ದು, ಬಾಕ್ಸಾಫೀಸ್​ನಲ್ಲಿ ಘರ್ಜಿಸಲು ‘ಪಡ್ಡೆಹುಲಿ’ ಸಕಲ ಸಿದ್ಧತೆಯಲ್ಲಿದೆ. ಒಟ್ಟಾರೆ ಯಂಗ್ ಟೈಗರ್ ಶ್ರೇಯಸ್​ನ ನ್ಯೂ ಎಂಟ್ರಿಗೆ ಕಾಯುತ್ತಿದ್ದ ಸಿನಿಪ್ರಿಯರಿಗೆ ಕರ್ಣನ ರೀಎಂಟ್ರಿಯಂತು ಬೋನಸ್ ಎನ್ನಬಹುದು.

Comments are closed.