ಮನೋರಂಜನೆ

ಜಯಲಲಿತಾ ಪಾತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್!

Pinterest LinkedIn Tumblr


ಮುಂಬೈ: ಮಣಿಕರ್ಣಿಕಾ ಸಿನಿಮಾದ ಯಶಸ್ಸಿನ ಖುಷಿಯಲ್ಲಿರೋ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೀಗ ತಮಿಳುನಾಡಿನ ಮಾಜಿ ಸಿಎಂ, ಪುರುಚ್ಚಿ ತಲೈವಿ ಜಯಲಲಿತಾರ ಜೀವನಾಧಾರಿತ ಸಿನಿಮಾದಲ್ಲಿ ಕಂಗನಾ ನಟಿಸಲಿದ್ದಾರೆ. ಈಗಾಗಲೇ ಜಯಲಲಿತಾರ ಪಾತ್ರದಲ್ಲಿ ನಟಿಸಲು ಕಂಗನಾ ಸಿದ್ಧತೆ ನಡೆಸುತ್ತಿದ್ದಾರೆ.

ಹಿಂದಿ ಮತ್ತು ತಮಿಳು ಭಾಷೆಯಲ್ಲಿ ಸಿನಿಮಾ ತೆರೆಕಾಣಲಿದ್ದು, ತಮಿಳಿನಲ್ಲಿ ‘ತಲೈವಿ’ ಮತ್ತು ಹಿಂದಿಯಲ್ಲಿ ‘ಜಯಾ’ ಎಂದು ಟೈಟಲ್ ಅಂತಿಮಗೊಳಿಸಲಾಗಿದೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ವಿಜಯ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರಲಿದೆ. ಜಯಲಲಿತಾ ಮೇಡಂ ದೇಶ ಕಂಡ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಅಂತಹ ಧೀಮಂತ ನಾಯಕಿಯ ಕಥೆಯನ್ನು ತೆರೆಯ ಮೇಲೆ ತರಲು ಉತ್ಸುಕನಾಗಿದ್ದೇನೆ. ಜಯಲಲಿತಾರ ಸಿನಿಮಾ ಮಾಡಲು ಹೊರಟ ನನ್ನ ಮೇಲೆ ಹಲವು ಜವಾಬ್ದಾರಿಗಳಿದ್ದು, ಪ್ರಾಮಾಣಿಕವಾಗಿ ಚಿತ್ರವನ್ನು ತೆರೆಯ ಮೇಲೆ ತರುತ್ತೇನೆ. ಕಂಗನಾ ರಣಾವತ್ ಅಂತಹ ಟ್ಯಾಲೆಂಟೆಡ್ ನಟಿ ಜೊತೆ ಕೆಲಸ ಮಾಡಲು ಹೆಮ್ಮೆಯಾಗುತ್ತಿದೆ. ಪ್ರಸಿದ್ಧ ನಟಿಯಾಗಿ ರಾಜಕೀಯದಲ್ಲಿ ಇತರರಿಗೆ ಮಾದರಿಯಾದ ಜಯಲಲಿತಾ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ವಿಜಯ್ ಹೇಳಿದ್ದಾರೆ.

ಬಾಹುಬಲಿ ಮತ್ತು ಮಣಿಕರ್ಣಿಕಾ ಸಿನಿಮಾದ ಕಥೆಗಾರ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರ ಲೇಖನಿಯಲ್ಲಿ ತಿರುಚ್ಚಿಯವರ ಕಥೆ ಮೂಡಿಬರಲಿದೆ. ವಿಷ್ಣು ಪ್ರಸಾದ್ ಇಂದೂರಿ ಹಾಗೂ ಶೈಲೇಶ್ ಆರ್. ಸಿಂಗ್ ನಿರ್ಮಾಣದಲ್ಲಿ ವಿಬ್ರಿ ಮತ್ತು ಕರ್ಮಾ ಮೀಡಿಯಾ & ಎಂಟರ್‍ಟೈನ್‍ಮೆಂಟ್ ಬ್ಯಾನರ್ ನಲ್ಲಿ ಸಿನಿಮಾ ತೆರೆಕಾಣಲಿದೆ.

ಕಂಗನಾ ಜೊತೆ ಇದು ನನ್ನ ಐದನೇ ಸಿನಿಮಾವಾಗಿದ್ದು, ಪ್ರತಿಬಾರಿಯೂ ಕಂಗನಾರ ಜೊತೆ ಕೆಲಸ ಮಾಡುವಾಗ ಹೊಸ ಅನುಭವ ಪಡೆಯುತ್ತೇವೆ. ವಿಷ್ಣು ಪ್ರಸಾದ್ ಇಂದೂರಿ ಅವರ ಜೊತೆಯಾಗಿ ನಿರ್ಮಾಣ ಕೆಲಸ ಮಾಡುತ್ತಿರೋದು ಸಂತೋಷ ತಂದಿದೆ ಎಂದು ನಿರ್ಮಾಪಕ ಶೈಲೇಶ್ ಆರ್.ಸಿಂಗ್ ಹೇಳುತ್ತಾರೆ.

ದೇಶ ಕಂಡ ಮಹಿಳಾ ಸಾಧಕಿಯರಲ್ಲಿ ಜಯಲಲಿತಾ ಸಹ ಒಬ್ಬರಾಗಿದ್ದಾರೆ. ಜಯಲಲಿತಾ ಸೂಪರ್ ಸ್ಟಾರ್ ನಟಿಯಾಗೋದರ ಜೊತೆಗೆ ಮಾದರಿಯ ರಾಜಕಾರಣಿಯಾಗಿದ್ದರು. ಇಂತಹ ಸಾಧನೆಯ ಕಥೆಯನ್ನು ಬೆಳ್ಳಿಪರದೆಯ ಮೇಲೆ ತರುವುದು ಸವಾಲಿನ ಕೆಲಸವಾಗಿದೆ. ಜಯಲಲಿತಾರ ಸಿನಿಮಾದಲ್ಲಿ ನಾನು ಒಂದು ಭಾಗವಾಗುತ್ತಿರೋದು ಖುಷಿ ತಂದಿದೆ ಎಂದು ಕಂಗನಾ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

Comments are closed.