ಮನೋರಂಜನೆ

ಮಾದಕ, ಹಾಟ್ ನಟಿಯೊಬ್ಬಳ ತೆರೆಯ ಹಿಂದಿನ ನೋವಿನ ಕಥೆ..

Pinterest LinkedIn Tumblr


ಬೆಳ್ಳಿಪರದೆ ಮೇಲೆ ನಟಿಸುವ ನಟ, ನಟಿಯರ ಅಭಿನಯ, ಹಾಸ್ಯ, ನಗು ಎಲ್ಲವೂ ಪ್ರೇಕ್ಷಕರ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿರುತ್ತದೆ. ಅದರಲ್ಲೂ ಮೋಹಕ, ಮಾದಕ ನಟಿ ಎನ್ನಿಸಿಕೊಂಡಿದ್ದ ಖುಷ್ಬೂ ನಗುವನ್ನು, ವೈಯ್ಯಾರದ ನಟನೆಯನ್ನು ಮರೆಯಲು ಸಾಧ್ಯವೇ? ಆದರೆ ಅಂತಹ ನಗುವಿನ ಹಿಂದೆ ಹಲವಾರು ನೋವಿನ ಕಥೆಗಳು ಇರುತ್ತವೆ..ಅದು ಖಷ್ಬೂ ಬದುಕಿಗೂ ಹೊರತಾಗಿಲ್ಲ. ಅಭಿಮಾನಿಗಳ ಪಾಲಿಗೆ ಆರಾಧ್ಯ ದೇವತೆಯಾಗಿದ್ದ ಆಕೆಯ ಆರಂಭದ ಜೀವನ ಸುಖದ ಸುಪ್ಪತ್ತಿಗೆ ಆಗಿರಲಿಲ್ಲ!

1970ರಲ್ಲಿ ಮುಂಬೈನಲ್ಲಿ ಮುಸ್ಲಿಂ ಕುಟುಂಬದಲ್ಲಿ ಜನಿಸಿದ್ದ ನಖಾತ್ ಖಾನ್ ಬಾಲನಟಿಯಾಗಿ ಬಾಲಿವುಡ್ ಪ್ರವೇಶಿಸಿದ್ದಳು. 1980ರಲ್ಲಿ ಬಿಆರ್ ಚೋಪ್ರಾ ನಿರ್ಮಾಣದ ತೇರಿ ಹೈ ಝಮೀನ್(ದ ಬರ್ನಿಂಗ್ ಟ್ರೈನ್) ಸಿನಿಮಾದಲ್ಲಿ ನಖಾತ್ ನಟಿಸಿದ್ದಳು. 1980-1985ರವರೆಗೆ ಖುಷ್ಬೂ ಬಾಲ ನಟಿಯಾಗಿ ಬಾಲಿವುಡ್ ನ ನಸೀಬ್, ಲಾವಾರೀಸ್, ಕಾಲಿಯಾ, ದರ್ದ್ ಕಾ ರಿಶ್ತಾ ಸೇರಿದಂತೆ ಹಲವು ಸಿನಿಮಾದಲ್ಲಿ ಮಿಂಚಿದ್ದಳು. ಆದರೆ ವಾಣಿಜ್ಯ ನಗರಿ ಮುಂಬೈನಲ್ಲೇ ಇದ್ದಿದ್ದರೆ ಆಕೆ ಬದುಕು ಹೇಗಿರುತ್ತಿತ್ತೋ. 1986ರ ಹೊತ್ತಿಗೆ ತೆಲುಗು ಸಿನಿಮಾದಲ್ಲಿ ಗುರುತಿಸಿಕೊಂಡಿರುವುದು ಆಕೆಯ ಬದುಕಿನ ಟರ್ನಿಂಗ್ ಪಾಯಿಂಟ್ ಆಗಿಬಿಟ್ಟಿತ್ತು!

ಭಿಕ್ಷೆ ಬೇಡಿ ಬದುಕು ಎಂದು ತಂದೆ ಮಗಳಿಗೆ ಬೈದು ಮನೆಯಿಂದ ಹೊರಹಾಕಿದ್ದರು!

ಖುಷ್ಬೂ ತಂದೆ, ತಾಯಿ ಆರ್ಥಿಕವಾಗಿ ಸ್ಥಿತಿವಂತರಾಗಿರಲಿಲ್ಲ. ಆ ಒಂದು ದಿನದ ಘಟನೆಯಲ್ಲಿ ತೆಗೆದುಕೊಂಡ ದೃಢ ನಿರ್ಧಾರಕ್ಕೆ ನಾನು ಇಂದಿಗೂ ಬದಲಾಗಿಲ್ಲ ಎಂಬುದಾಗಿ ಒಮ್ಮೆ ಸಂದರ್ಶನವೊಂದರಲ್ಲಿ ತಮ್ಮ ಮನದಾಳ ಬಿಚ್ಚಿಟ್ಟಿದ್ದರು..ಈ ಕನಸಿನ ಕನ್ಯೆ. ಅದು 1986ರ ಸೆಷ್ಟೆಂಬರ್ 12 ಆ ದಿನ ತಂದೆ ಮಗಳಿಗೆ ವಾಚಾಮಗೋಚರ ಬೈದು..ಮನೆಯಿಂದ ಹೊರ ಹೋಗು..ಭಿಕ್ಷೆ ಬೇಡಿ ಬದುಕು ಅಂತ ಹೇಳಿಬಿಟ್ಟಿದ್ದರಂತೆ! 16 ವರ್ಷದ ಬಾಲಕಿಯಾಗಿದ್ದ ಖುಷ್ಬೂಗೆ ಅದಾಗಲೇ ತಾನು ಹೇಗಾದರೂ ಬದುಕಬಲ್ಲೆ ಎಂಬ ಹುಂಬ ಧೈರ್ಯವಿತ್ತು.

ನಾನು ಇನ್ಮುಂದೆ ಜೀವಮಾನದಲ್ಲಿ ಯಾವತ್ತೂ ನಿಮ್ಮ(ತಂದೆ) ಮುಖ ನೋಡುವುದಿಲ್ಲ ಎಂದು ಹೇಳಿ ತಾಯಿ ಮತ್ತು ಸಹೋದರ ಜತೆ ಮನೆಯಿಂದ ಹೊರನಡೆದಿದ್ದರಂತೆ! ನಿಜಕ್ಕೂ ನಾನು ನನ್ನ ತಾಯಿ ಮತ್ತು ಸಹೋದರ ಸೇರಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿದ್ದೆ. ಆದರೆ ನಾನು ಎಲ್ಲರ ಬಳಿ ಮಾತನಾಡಿದ ಬಳಿಕ ಏನೇ ಆಗಲಿ ಬದುಕಿನಲ್ಲಿ ಸೋಲಬಾರದು..ಎಲ್ಲವನ್ನೂ ಎದುರಿಸಿ ಗೆಲ್ಲಬೇಕೆಂದು ಹಠ ತೊಟ್ಟಿದ್ದರಿಂದಲೇ ಜೀವನದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂಬುದು ಖುಷ್ಬೂ ಮಾತು.

ನಖಾತ್ ಖಾನ್ ಖುಷ್ಬೂ ಆಗಿದ್ದು ಹೇಗೆ?

ನಖಾತ್ ಖಾನ್ ಅಲಿಯಾಸ್ ಖುಷ್ಬೂ ಸುಂದರ್ ಅವರ ನಿಜನಾಮಧೇಯ ನಖಾತ್ ಖಾನ್. ಆದರೆ ಈಕೆ ಚಿಕ್ಕವಳಿದ್ದಾಗ ಎಲ್ಲರೂ ಮನೆಯವರಲ್ಲಿ ನಖಾತ್ ಅಂದರೆ ಅರ್ಥ ಏನು ಅಂತ ಕೇಳುತ್ತಿದ್ದರಂತೆ. ಸುಮಾರು 7 ವರ್ಷದವರೆಗೆ ಮನೆಯವರು, ಶಾಲೆಯ ಸಹಪಾಠಿಗಳು, ಶಿಕ್ಷಕಿಯರು ನಖಾತ್ ಎಂದೇ ಕರೆಯುತ್ತಿದ್ದರಂತೆ. ನಾನು ಸಿನಿಮಾ ರಂಗ ಪ್ರವೇಶಿಸಲು ಬಂದಾಗಲೂ ನಖಾತ್ ಅರ್ಥ ಕೇಳತೊಡಗಿದ್ದರು. ನಿಜಕ್ಕೂ ನಖಾತ್ ಎಂಬುದು ಪರ್ಷಿಯನ್ ಭಾಷೆಯ ಹೆಸರು. ನಖಾತ್ ಎಂದರೆ ಖುಷ್ಬೂ ಅಂತ ಅರ್ಥ..ಅಂದರೆ ಸುವಾಸನೆ, ಸುಗಂಧ ಎಂಬುದಾಗಿ! ಅಂತೂ ಕೊನೆಗೆ ಪೋಷಕರು ಖುಷ್ಬೂ ಎಂದು ಹೆಸರನ್ನು ಬದಲಾಯಿಸಿದ್ದರು. ಆ ಹೆಸರೇ ಸಿನಿಮಾರಂಗದಲ್ಲಿ ಜನಪ್ರಿಯವಾಯಿತು.

ಕನ್ನಡದಲ್ಲೂ ಜನಪ್ರಿಯ, ಅಭಿಮಾನಿಗಳಿಂದ ಗುಡಿ ಕಟ್ಟಿಸಿಕೊಂಡ ಮೊದಲ ನಟಿ!

1988ರಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ, ತಂದೆ ವೀರಸ್ವಾಮಿ ನಿರ್ಮಾಣದ ರಣಧೀರ ಸಿನಿಮಾದಲ್ಲಿ ಖುಷ್ಬೂ ಮೊತ್ತ ಮೊದಲು ನಟಿಸುವ ಮೂಲಕ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು. ತದನಂತರ ಅಂಜದ ಗಂಡು, ಯುಗ ಪುರುಷ, ಪ್ರೇಮಾಗ್ನಿ, ಹೃದಯ ಗೀತೆ, ತಾಳಿಗಾಗಿ, ಗಂಗಾ, ರುದ್ರಾ, ಕಲಿಯುಗ ಭೀಮ, ಒಂಟಿ ಸಲಗ, ಶಾಂತಿ ಕ್ರಾಂತಿ, ಪಾಳೇಗಾರ, ಜೀವನದಿ ಸೇರಿದಂತೆ ಹಲವು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು.

1985ರಲ್ಲಿ ಮೇರಿ ಜಂಗ್ ಎಂಬ ಹಿಂದಿ ಸಿನಿಮಾದಲ್ಲಿ ಜಾವೇದ್ ಜಫ್ರಿ ಜತೆ ಮೊದಲ ಬಾರಿಗೆ ಡ್ಯಾನ್ಸ್ ಪಾತ್ರದಲ್ಲಿ ಕಾಣಿಸಿಕೊಂಡ ಖುಷ್ಬೂ ಹೆಸರು ಮತ್ತಷ್ಟು ಜನಪ್ರಿಯವಾಗತೊಡಗಿತ್ತು. ಹೀಗೆ ಜಾಕಿಶ್ರಾಫ್, ಗೋವಿಂದ್ ಜತೆ ಅಭಿನಯಿಸಿದ್ದರು. 1986ರಲ್ಲಿ ತೆಲುಗಿನ ಕಲಿಯುಗ ಪಾಂಡವಲು ಎಂಬ ಸಿನಿಮಾದಲ್ಲಿ ಖುಷ್ಬೂ ವೆಂಕಟೇಶ್ ಜತೆ ನಟಿಸಿದ್ದರು. ಆ ನಂತರ ಚೆನ್ನೈಗೆ ಸ್ಥಳಾಂತರವಾಗಿ ಅಲ್ಲಿಯೇ ನೆಲೆಸಿ ತಮಿಳು ಸಿನಿಮಾ ಹಾಗೂ ದಕ್ಷಿಣ ಭಾರತ ಚಿತ್ರಗಳಲ್ಲಿ ನಟಿಸುವ ಮೂಲಕ ಅಪಾರ ಜನಮನ್ನಣೆ ಪಡೆದರು. ತಮಿಳಿನಲ್ಲಿ ನೂರಕ್ಕೂ ಅಧಿಕ ಸಿನಿಮಾ, ಹೀಗೆ ಮಲಯಾಳಂ, ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಈ ಕನಸಿನ ಕನ್ಯೆಯ ಅಭಿನಯಕ್ಕೆ ಮನಸೋತಿದ್ದ ಅಭಿಮಾನಿಗಳು ತಮಿಳುನಾಡಿನ ತಿರುಚಿಯಲ್ಲಿ ದೇವಸ್ಥಾನ ಕಟ್ಟಿಸಿದ್ದರು. ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಗುಡಿ ಕಟ್ಟಿಸಿಕೊಂಡಿದ್ದ ಮೊದಲ ನಟಿ ಎಂಬ ಹೆಗ್ಗಳಿಕೆ ಕೂಡಾ ಖುಷ್ಬೂ ಅವರದ್ದು. ನಂತರ ಆಕ್ಷೇಪಾರ್ಹ, ವಿವಾದಿತ ಹೇಳಿಕೆ ನೀಡಿದ್ದ ಖುಷ್ಬೂ ವಿರುದ್ಧ ಆಕ್ರೋಶಗೊಂಡ ಅಭಿಮಾನಿಗಳು ಆಕೆಯ ಗುಡಿಯನ್ನು ಒಡೆದುಹಾಕಿಬಿಟ್ಟಿದ್ದರು!

ಹಿಂದಿ, ತಮಿಳು, ಉರ್ದು, ಪಂಜಾಬಿ, ತೆಲುಗು, ಮರಾಠಿ ಹಾಗೂ ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡಬಲ್ಲ ಖುಷ್ಬೂ ಸುಮಾರು 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದು, ಕೆಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು.

ದೇವಸ್ಥಾನ ಮಾತ್ರವಲ್ಲ, ಊಟ, ತಿಂಡಿಗೂ ಖುಷ್ಬೂ ಹೆಸರು ಇಟ್ಟಿದ್ದರು!

ಅಭಿಮಾನಿಗಳು ಖುಷ್ಬೂ ಹೆಸರಲ್ಲಿ ದೇವಸ್ಥಾನ ಕಟ್ಟಿಸಿದ್ದು, ಆರಾಧಿಸಿದ್ದು, ವಿರೋಧಿಸಿದ್ದು ಈಗ ಹಳೆಯ ಕಥೆಯಾಗಿಬಿಟ್ಟಿದೆ. ಆದರೆ ಖುಷ್ಬೂ ತಮಿಳು ಸಿನಿಮಾರಂಗದಲ್ಲಿ ಸ್ಟಾರ್ ನಟಿ ಆಗಿದ್ದ ಕಾಲದಲ್ಲಿ ದಕ್ಷಿಣ ಭಾರತದ ಹಲವೆಡೆಯ ಮೆನುಗಳಲ್ಲಿ ಖುಷ್ಬೂ ಇಡ್ಲಿ ಹೆಸರು ಸೇರಿಕೊಂಡಿತ್ತು. ಅಷ್ಟೇ ಅಲ್ಲ ಖುಷ್ಬೂ ಜುಮ್ಕಿ, ಖುಷ್ಬೂ ಸೀರೆ, ಖುಷ್ಬೂ ಶರಬತ್, ಖುಷ್ಬೂ ಕಾಫಿ, ಖುಷ್ಬೂ ಕಾಕ್ ಟೈಲ್ಸ್ ಅಂತ ಫೇಮಸ್ ಆಗಿತ್ತು!

ವಿವಾದ, ರಾಜಕೀಯ ಎಂಟ್ರಿ:

2010ರಲ್ಲಿ ನಟಿ ಖುಷ್ಬೂ ಡಿಎಂಕೆ ಪಕ್ಷವನ್ನು ಸೇರಿದ್ದರು. ಆದರೆ 2014ರ ಜೂನ್ ನಲ್ಲಿ ಡಿಎಂಕೆ ತೊರೆದ ಖುಷ್ಬೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ಸದ್ಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತರಾರಾಗಿದ್ದಾರೆ. ಖುಷ್ಬೂ ಹಲವು ಹೇಳಿಕೆಗಳು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದವು.

ಶಿವಾಜಿ ಗಣೇಶನ್ ಪುತ್ರ, ನಟ ಪ್ರಭು ಜೊತೆ ಲವ್ ಅಫೇರ್, ರಹಸ್ಯ ಮದುವೆ!

ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದ ನಟಿ ಖುಷ್ಬೂ ಮತ್ತು ನಟ ಪ್ರಭು ನಡುವೆ ಗಳಸ್ಯ, ಕಂಠಸ್ಯ ಲವ್ ಅಫೇರ್ ಇದ್ದಿತ್ತು. ಅಲ್ಲದೇ ಯಾವುದೇ ಮಾಧ್ಯಮಗಳಿಗೂ ತಿಳಿಯದ ಹಾಗೆ ಇಬ್ಬರು ಗುಟ್ಟಾಗಿ ಮದುವೆಯಾಗಿಬಿಟ್ಟಿದ್ದರಂತೆ! ಆದರೆ ಪ್ರಭು ಅದಾಗಲೇ ಮದುವೆಯಾಗಿತ್ತು. ಹೀಗಾಗಿ ತೀವ್ರ ವಿರೋಧ ವ್ಯಕ್ತವಾಗತೊಡಗಿದ್ದವು. ತಮಿಳು ಸಿನಿಮಾರಂಗದಲ್ಲಿ ದಂತಕಥೆ ಎನ್ನಿಸಿಕೊಂಡಿದ್ದ ಶಿವಾಜಿಗಣೇಶನ್ ಕೊನೆಗೆ ಮಧ್ಯಪ್ರವೇಶಿಸಿ ಮಗ ಪ್ರಭುವನ್ನು ಕರೆದು ಬುದ್ದಿ ಹೇಳಿದ್ದರು!

ಕೊನೆಗೆ ಕೆಲವು ದಿನಗಳ ಬಳಿಕ ಪತ್ರಿಕಾಗೋಷ್ಠಿ ಕರೆದ ಖುಷ್ಬೂ..ಶಿವಾಜಿಗಣೇಶನ್ ಕುಟುಂಬದ ಒತ್ತಡದಿಂದಾಗಿ ನನ್ನ ಮತ್ತು ಪ್ರಭು ನಡುವಿನ ಸಂಬಂಧ ಮುರಿದು ಬಿದ್ದಿದೆ ಎಂದು ಹೇಳಿಕೆ ಕೊಟ್ಟು ಬಿಟ್ಟಿದ್ದಳು! ತೀವ್ರ ಆಘಾತಕ್ಕೊಳಗಾಗಿದ್ದ ಖುಷ್ಬೂ ನಿಧಾನಕ್ಕೆ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಳೆಯ ನೋವನ್ನು ಮರೆಯತೊಡಗಿದ್ದಳು.

2000ನೇ ಇಸವಿಯಲ್ಲಿ ತಮಿಳು ನಿರ್ದೇಶಕ, ನಿರ್ಮಾಪಕ, ನಟ ವಿನಗರ್ ಸುಂದರ್ ವೇಲ್ ಅವರನ್ನು ಖುಷ್ಬೂ ವಿವಾಹವಾಗಿದ್ದರು. ದಂಪತಿಗೆ ಆವಂತಿಕಾ, ಆನಂದಿತಾ ಸೇರಿ ಇಬ್ಬರು ಹೆಣ್ಣು ಮಕ್ಕಳು.

Comments are closed.