ಮನೋರಂಜನೆ

ಪ್ರೇಮಿಗಳ ದಿನಕ್ಕೆ ಕಣ್ಸನ್ನೆ ಹುಡುಗಿ ಚಿತ್ರ

Pinterest LinkedIn Tumblr


ಮಲಯಾಳಂ ಭಾಷೆಯ “ಒರು ಅಢಾರ್‌ ಲವ್‌’ ಚಿತ್ರ ಕನ್ನಡದಲ್ಲಿ “ಕಿರಿಕ್‌ ಲವ್‌ಸ್ಟೋರಿ’ ಹೆಸರಲ್ಲಿ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಬಿಡುಗಡೆಯಾಗುತ್ತಿರುವುದು ಗೊತ್ತೇ ಇದೆ. ಆ ಚಿತ್ರದ ಬಗ್ಗೆ ಈಗಾಗಲೇ ಎಲ್ಲೆಡೆ ಕುತೂಹಲವೂ ಇದೆ. ಕನ್ನಡದಲ್ಲಿ ತೆರೆಗೆ ಬರುತ್ತಿರುವ ಆ ಚಿತ್ರದ ಕುರಿತು ಮಾತನಾಡಲು ತಮ್ಮ ಚಿತ್ರತಂಡದೊಂದಿಗೆ ಪತ್ರಕರ್ತರ ಮುಂದೆ ಆಗಮಿಸಿದ್ದರು ನಿರ್ದೇಶಕ ಒಮರ್‌ ಲುಲು.

ಮೊದಲು ತಮ್ಮ “ಕಿರಿಕ್‌ ಲವ್‌ ಸ್ಟೋರಿ’ ಕುರಿತು ಅವರು ಹೇಳಿದ್ದಿಷ್ಟು. “ಇದೇ ಮೊದಲ ಬಾರಿಗೆ ಮಲಯಾಳಂ ಸಿನಿಮಾವೊಂದು ನಾಲ್ಕು ಭಾಷೆಯಲ್ಲಿ ತೆರೆ ಕಾಣುತ್ತಿದೆ. ಚಿತ್ರದ ನಾಯಕಿ ಪ್ರಿಯಾ ವಾರಿಯರ್‌ ಅವರ ಒಂದೇ ಒಂದು ಕಣ್ಸನ್ನೆ ಮಾಡುವ ಟೀಸರ್‌ ಒಂದು ಜೋರು ಸದ್ದು ಮಾಡಿ, ಸಿನಿಮಾ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿದ್ದು ಗೊತ್ತೇ ಇದೆ. ಇಡೀ ಸಿನಿಮಾ ಕೂಡ ಹಾಗೆಯೇ ಮೂಡಿಬಂದಿದೆ.

ಇದೊಂದು ಟೀನೇಜ್‌ ಲವ್‌ಸ್ಟೋರಿ. ಪಕ್ಕಾ ಮ್ಯೂಸಿಕಲ್‌ ಲವ್‌ಸ್ಟೋರಿಯನ್ನು ಇಲ್ಲಿ ಕಾಣಬಹುದು. ಸಿನಿಮಾ ನೋಡುವ ಪ್ರತಿಯೊಬ್ಬರಿಗೂ ತಮ್ಮ ಶಾಲಾ ದಿನಗಳು ನೆನಪಾಗುವಷ್ಟರ ಮಟ್ಟಿಗೆ ಚಿತ್ರ ಮೂಡಿಬಂದಿದೆ. ಹಾಸ್ಯ, ಪ್ರೀತಿ, ಸೆಂಟಿಮೆಂಟ್‌ನೊಂದಿಗೆ ಒಂದು ಸಂದೇಶವೂ ಇಲ್ಲಿದೆ’ ಎಂಬುದು ನಿರ್ದೇಶಕರ ಮಾತು. ಇನ್ನು, “ಕಿರಿಕ್‌ ಲವ್‌ ಸ್ಟೋರಿ’ ಚಿತ್ರವನ್ನು ಕನ್ನಡದಲ್ಲಿ ದೇವೇಂದ್ರ ರೆಡ್ಡಿ ಅವರು ಬಿಡುಗಡೆ ಮಾಡುತ್ತಿದ್ದಾರೆ.

ಅವರಿಗೆ ಹಿತೇಶ್‌ರೆಡ್ಡಿ ಮತ್ತು ಬಿ.ರಾಮಕೃಷ್ಣ ಸಾಥ್‌ ನೀಡುತ್ತಿದ್ದಾರೆ. ಚಿತ್ರದ ಬಗ್ಗೆ ಹೇಳುವ ದೇವೇಂದ್ರ ರೆಡ್ಡಿ, “ಕನ್ನಡದಲ್ಲಿ ಈ ಚಿತ್ರವನ್ನು ವಿ ಮೂವೀಸ್‌ ಮೂಲಕ ವಿತರಣೆ ಮಾಡುತ್ತಿದ್ದು, ಸುಮಾರು 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಇದೊಂದು ಪಕ್ಕಾ ಮನರಂಜನೆ ಚಿತ್ರ. ಅದರಲ್ಲೂ ಸ್ಟುಡೆಂಟ್ಸ್‌ಗೆ ಇಷ್ಟವಾಗುವ ಸಿನಿಮಾ. ಕಥೆ ಈಗಿನ ಟ್ರೆಂಡ್‌ಗೆ ತಕ್ಕಂತೆ ಇದೆ. ಹಾಡುಗಳು ಸಹ ಹೊಸತನದಿಂದ ಕೂಡಿವೆ.

ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ಸಿಕ್ಕಿದ್ದು, ಚಿತ್ರಕ್ಕೂ ಬೇಡಿಕೆ’ ಇದೆ ಎಂಬುದು ಅವರ ಮಾತು. ಕನ್ನಡದ “ಕಿರಿಕ್‌ ಲವ್‌ ಸ್ಟೋರಿ’ಗೆ ಸಂಭಾಷಣೆ ಬರೆದಿರುವ ಶ್ವೇತಾ ಎನ್‌.ಎ. ಶೆಟ್ಟಿ ಅವರಿಗೆ ಇದು ಗೆಲುವು ತಂದುಕೊಡುತ್ತೆ ಎಂಬ ನಂಬಿಕೆ ಇದೆಯಂತೆ. ಈ ಹಿಂದೆ “1098′ ಎಂಬ ಮಕ್ಕಳ ಚಿತ್ರ ನಿರ್ದೇಶಿಸಿದ್ದ ಅವರಿಗೆ ಇದು ಮೊದಲ ಸಂಭಾಷಣೆ ಬರೆದ ಚಿತ್ರ. ಈ ಬಗ್ಗೆ ಹೇಳುವ ಶ್ವೇತಾ, “ಚಿತ್ರದಲ್ಲಿ ಒಳ್ಳೆಯ ಸಂದೇಶವಿದೆ.

ವಿದ್ಯಾರ್ಥಿಗಳ ಬದುಕಲ್ಲಿ ಪ್ರೀತಿ ಹೇಗೆಲ್ಲಾ ಮುಖ್ಯ ಪಾತ್ರ ವಹಿಸುತ್ತೆ, ಆ ಮೂಲಕ ಎಷ್ಟೆಲ್ಲಾ ಹಾಸ್ಯ ಸಂಗತಿಗಳನ್ನೂ ಹೊರಹಾಕುತ್ತೆ ಎಂಬ ಅಂಶ ಇಲ್ಲಿದೆ. ಇದು ಎಲ್ಲಾ ಭಾಷೆಗೂ ಸಲ್ಲುವಂತಹ ಕಥೆ. ಮಲಯಾಳಂ ಸ್ಕ್ರಿಪ್ಟ್ ಹಿಡಿದು ಕನ್ನಡಕ್ಕೆ ಮಾತುಗಳನ್ನು ಪೋಣಿಸುವಾಗ ನಮ್ಮತನದ ಕಥೆಗೆ ಕೆಲಸ ಮಾಡುತ್ತಿರುವ ಖುಷಿಯಾಯ್ತು. ಸಂಭಾಷಣೆ ಹಿಂದೆ ಸಾಕಷ್ಟು ಜನರ ಸಹಕಾರವಿದೆ. ಚಿತ್ರಕ್ಕೆ ಶಾನ್‌ ರೆಹಮಾನ್‌ ಸಂಗೀತವಿದೆ. ವಿ.ಮನೋಹರ್‌, ನಾಗೇಂದ್ರ ಪ್ರಸಾದ್‌ ಗೀತೆ ರಚಿಸಿದ್ದಾರೆ.

ಅನುರಾಧಭಟ್‌, ಸಂತೋಷ್‌ ವೆಂಕಿ ಇತರರು ಹಾಡಿದ್ದಾರೆ. ಚಿತ್ರದಲ್ಲಿ ಅಂಬರೀಶ್‌ ಸರ್‌ ಅವರನ್ನು ನೆನಪಿಸುವ ಹಾಡೊಂದು ಇರಲಿದೆ. ತೆಲುಗಿನಲ್ಲಿ ಶ್ರೀದೇವಿ ಕುರಿತ ಹಾಡಿದೆ. ಇಲ್ಲಿ ಅಂಬರೀಶ್‌ ಅವರಿಗೊಂದು ಹಾಡಿದೆ. ಅದನ್ನು ಚಿತ್ರದಲ್ಲೇ ನೋಡಬೇಕು’ ಎಂಬುದು ಶ್ವೇತಾ ಮಾತು. ಇನ್ನು, ನಾಯಕಿ ಪ್ರಿಯಾ ವಾರಿಯರ್‌, ನಾಯಕ ರೋಷನ್‌ ತಮ್ಮ ಪಾತ್ರ ಮತ್ತು ಚಿತ್ರದ ಅನುಭವ ಹಂಚಿಕೊಂಡರು. ಉಳಿದಂತೆ ಮ್ಯಾಥುÂ, ಅರುಣ್‌ ಇತರರು ಮಾತನಾಡಿದರು.

Comments are closed.