ಮನೋರಂಜನೆ

ಕೊನೆಗೂ ಅಂತ್ಯಗೊಳ್ಳುವ ಹಂತಕ್ಕೆ ಬಂದ ಮನೆ ಬಾಡಿಗೆ ವಿವಾದ: 23 ಲಕ್ಷ ರೂ ಬಾಡಿಗೆ ಬಾಕಿ ನೀಡಲು ಮುಂದಾದ ನಟ ಯಶ್ ಕುಟುಂಬ

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್ ವುಡ್ ನಟ ಯಶ್ ಕುಟುಂಬದ ವಿರುದ್ಧದ ಮನೆ ಬಾಡಿಗೆ ವಿವಾದ ಕೊನೆಗೂ ಅಂತ್ಯಗೊಳ್ಳುವ ಹಂತಕ್ಕೆ ಬಂದಿದ್ದು, ಹೈಕೋರ್ಟ್‌ ವಿಧಿಸಿದ್ದ ಗಡುವಿನ ಅನುಸಾರ ಚಿತ್ರನಟ ಯಶ್‌ ಅವರ ಕುಟುಂಬ ಸದ್ಯ ವಾಸಿಸುತ್ತಿರುವ ಮನೆಯ ಬಾಡಿಗೆ ಬಾಕಿ ಮೊತ್ತ 23 ಲಕ್ಷ ರೂ ಅನ್ನು ಮಾಲೀಕರಿಗೆ ಪಾವತಿಸಲು ಸಜ್ಜಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಮನೆಯ ವಾರಸುದಾರರ ಪರ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ.ಟಿ.ನಾಣಯ್ಯ ಅವರು, ‘ನಗರದ ಬನಶಂಕರಿ ಮೂರನೇ ಹಂತದ ಮೂರನೇ ಬ್ಲಾಕ್‌ನ 6ನೇ ಕ್ರಾಸ್‌ಲ್ಲಿ 30X40ರ ಅಳತೆಯಲ್ಲಿರುವ ಮನೆಯನ್ನು ಖಾಲಿ ಮಾಡಲು ನಿರಾಕರಿಸಿ ಕೋರ್ಟ್‌ ಮೆಟ್ಟಿಲೇರಿದ್ದ ಯಶ್‌ ಅವರ ತಾಯಿ ಎ.ಪುಷ್ಪಾ, ಬಾಕಿ ಮೊತ್ತದ ಡಿ.ಡಿಯನ್ನು (ಡಿಮ್ಯಾಂಡ್‌ ಡ್ರಾಫ್ಟ್‌) ಕೊಡಲಿದ್ದಾರೆ. ಅಂತೆಯೇ 2019ರ ಮಾರ್ಚ್‌ 31ರೊಳಗೆ ಮನೆಯನ್ನು ಖಾಲಿ ಮಾಡಲಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಕರಣದಲ್ಲಿ ಚಿತ್ರರಂಗದವರ ಕೈವಾಡ, ಮಾತುಕತೆಯಿಂದ ಬಗೆಹರಿಸಿಕೊಳ್ಳುತ್ತೇವೆ: ಯಶ್‌ ಅವರ ತಾಯಿ ಪುಷ್ಪಾ
ಇನ್ನು ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ನಟ ಯಶ್ ಅವರ ತಾಯಿ ಪುಷ್ಪಾ ಅವರು, ‘ನಾವು ಈ ವಿಷಯವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ. ವಿವಾದದ ಹಿಂದೆ ಚಿತ್ರರಂಗದ ಕೆಲವರ ಆಸಕ್ತಿ ಇದೆ. ಈ ವಿಷಯವನ್ನು ಇಷ್ಟು ದೊಡ್ಡದು ಮಾಡುವ ಅಗತ್ಯ ಇರಲಿಲ್ಲ. ಚಿತ್ರರಂಗದಲ್ಲಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುವ ಜನರಿದ್ದಾರಲ್ಲಾ ಎಂಬ ಬೇಸರ ಇದೆ. ಮಾಲೀಕರ ಜೊತೆ ನಾವು ಚೆನ್ನಾಗಿಯೇ ಇದ್ದೇವೆ. ಮಾಲೀಕರು ಮತ್ತು ನಾವು ಕೂತು ಈ ವಿಷಯವನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.

Comments are closed.