ಮನೋರಂಜನೆ

ಯಶ್​ ನಟನೆಯ ‘ಕೆಜಿಎಫ್​’ ವಿಶ್ವಾದ್ಯಂತ ಬರೋಬ್ಬರಿ 2,000 ಚಿತ್ರಮಂದಿರ​ಗಳಲ್ಲಿ ಬಿಡುಗಡೆ; ಮುಂಜಾನೆ 4ರ ಪ್ರದರ್ಶನ ಹೌಸ್ ಫುಲ್

Pinterest LinkedIn Tumblr

ಬೆಂಗಳೂರು: ಕೋರ್ಟ್​ನ ತಡೆಯಾಜ್ಞೆ ನಡುವೆಯೂ ‘ರಾಕಿಂಗ್ ಸ್ಟಾರ್​’ ಯಶ್​ ನಟನೆಯ ‘ಕೆಜಿಎಫ್​’ ವಿಶ್ವಾದ್ಯಂತ ಬರೋಬ್ಬರಿ 2,000 ಚಿತ್ರಮಂದಿರ​ಗಳಲ್ಲಿ ತೆರೆಕಾಣುತ್ತಿದೆ. ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ತೆರೆಕಾಣುತ್ತಿರುವುದು ಚಂದನವನದ ಇತಿಹಾಸದಲ್ಲಿ ಇದೇ ಮೊದಲು.

ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಅನೇಕ ಚಿತ್ರಮಂದಿರಗಳಲ್ಲಿ ‘ಕೆಜಿಎಫ್​’ ಪ್ರದರ್ಶನ ಆರಂಭಗೊಂಡಿತ್ತು. ಅಭಿಮಾನಿಗಳು ಮುಂಜಾನೆಯೇ ಚಿತ್ರಮಂದಿರಕ್ಕೆ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಸಿನಿಮಾ ವೀಕ್ಷಿಸಿದರು. ನೆಚ್ಚಿನ ನಟನಿಗೆ ಜಯಕಾರ ಕೂಗುತ್ತ ‘ಕೆಜಿಎಫ್​’ ಕಣ್ತುಂಬಿಕೊಂಡರು.

ಸಿನೆಮಾ ನೋಡಿದವರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಎಲ್ಲರೂ ಯಶ್ ನಟನೆಯನ್ನು ಕೊಂಡಾಡಿದ್ದಾರೆ. ಕನ್ನಡ ಮಾತ್ರವಲ್ಲದೆ 5 ಭಾಷೆಗಳಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿದೆ. ವಿಶ್ವಾದ್ಯಂತ 2000 ಚಿತ್ರಮಂದಿರಗಳಲ್ಲಿ ಕೆಜಿಎಫ್ ಆರ್ಭಟಿಸಿದೆ. ಇನ್ನು, ಕರ್ನಾಟಕ ಒಂದರಲ್ಲೇ 350 ಚಿತ್ರಮಂದಿರಗಳಲ್ಲಿ ಕೆಜಿಎಫ್ ಪ್ರದರ್ಶನ ಕಾಣುತ್ತಿದ್ದು, ಅದರಲ್ಲಿ 200 ಚಿತ್ರಮಂದಿರಗಳು ಬೆಂಗಳೂರಿನಲ್ಲೇ ಇವೆ. ಆಂಧ್ರ ಹಾಗೂ ತೆಲಂಗಾಣದಲ್ಲಿ 350 ಥೀಯೆಟರ್, ತಮಿಳುನಾಡಿನಲ್ಲಿ 150 ಚಿತ್ರಮಂದಿರ, ಕೇರಳದಲ್ಲಿ 75 ಸ್ಕ್ರೀನ್​​ಗಳಲ್ಲಿ ಕೆಜಿಎಫ್ ಅಬ್ಬರಿಸಲಿದೆ. ಉಳಿದಂತೆ, ವಿದೇಶಗಳಲ್ಲಿ 375 ಚಿತ್ರಮಂದಿರದಲ್ಲಿ ‘ಕೆಜಿಎಫ್’ ಬಿಡುಗಡೆ ಆಗುತ್ತಿರುವುದು ವಿಶೇಷ.

“ಕೆಜಿಎಫ್​​ನ ಕುಖ್ಯಾತ ರೌಡಿ ತಂಗಂ ವ್ಯಕ್ತಿಯ ಜೀವನಾಧಾರಿತ ಕಥೆಯನ್ನು ಸಿನಿಮಾ ಒಳಗೊಂಡಿದೆ. ರೌಡಿ ತಂಗಂ ಸಿನಿಮಾ ಮಾಡಲು ಬೇಕಿರುವ ಹಕ್ಕನ್ನು ನಾನು ಹೊಂದಿದ್ದೇನೆ. ಇದೇ ಕಥೆಯ ಆಧಾರದ ಮೇಲೆ ‘ಕೆಜಿಎಫ್’​​ ಸಿನಿಮಾ ಮಾಡಲಾಗಿದೆ” ಎಂದು ನಿರ್ಮಾಪಕ ವೆಂಕಟೇಶ್​​ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪುರಸ್ಕರಿಸಿ ವಿಚಾರಣೆ ನಡೆಸಿದ ನ್ಯಾಯಾಲಯ 2019 ಜನವರಿ 7ರ ತನಕ ಸಿನಿಮಾ ಬಿಡುಗಡೆ ಮಾಡದಂತೆ ಆದೇಶಿಸಿತ್ತು. ಇನ್ನು ಕೋರ್ಟ್​​ ಆರ್ಡರ್​ ಕೈಗೆ ತಲುಪದ ಕಾರಣ ಚಿತ್ರ ಪ್ರದರ್ಶನ ಕಾಣುತ್ತಿದೆ.

‘ಕೆಜಿಎಫ್​’ ಚಿತ್ರದಲ್ಲಿ ಯಶ್​ ಹಾಗೂ ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ‘ಉಗ್ರಂ’ ಖ್ಯಾತಿಯ ಪ್ರಶಾಂತ್​ ನೀಲ್​ ಚಿತ್ರ ನಿರ್ದೇಶನ ಮಾಡಿದ್ದಾರೆ. ಹೊಂಬಾಳೆ ಫಿಲ್ಮ್ಸ್​​ ಚಿತ್ರಕ್ಕೆ ಬಂಡವಾಳ ಹೂಡಿದೆ. ಅಚ್ಯುತ್ ಕುಮಾರ್​ ಸೇರಿ ಅನೇಕ ಹಿರಿಯ ನಟರು ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

Comments are closed.