
ಮುಂಬೈ: 2018ನೇ ಸಾಲಿನ ಭಾರತೀಯ ಸೆಲೆಬ್ರಿಟಿ ಪಟ್ಟಿಯನ್ನು ಫೋರ್ಬ್ಸ್ ಇಂದು ಬಿಡುಗಡೆ ಮಾಡಿದೆ. ಸತತ ಮೂರನೇ ಬಾರಿ ಸಲ್ಮಾನ್ ಖಾನ್ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ಫೋರ್ಬ್ಸ್ ಪಟ್ಟಿಯಲ್ಲಿರುವ 100 ಭಾರತೀಯ ಗಣ್ಯರ ಪೈಕಿ ಸಲ್ಮಾನ್ ಈ ಬಾರಿ (ಅಕ್ಟೋಬರ್,2017-ಸೆಪ್ಟೆಂಬರ್ 2018) ಸಿನಿಮಾ, ಉತ್ಪನ್ನಗಳ ಪ್ರಚಾರ ಮೊದಲಾದವುಗಳಿಂದ ಒಟ್ಟು 253 ಕೋಟಿ ರೂ. ಆದಾಯ ಗಳಿಕೆ ಮಾಡಿದ್ದಾರೆ. ಈ ಮೂಲಕ ಅವರು ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. 2016,2017ರ ಅವಧಿಯಲ್ಲೂ ಈ ಲಿಸ್ಟ್ನಲ್ಲಿ ಸಲ್ಲು ಅಗ್ರ ಶ್ರೇಯಾಂಕದಲ್ಲಿದ್ದರು. ವಿರಾಟ್ ಕೊಹ್ಲಿ (228 ಕೋಟಿ.ರೂ) ಎರಡನೇ ಸ್ಥಾನ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ (185 ಕೋಟಿ ರೂ.) ಮೂರನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿರುವ 100 ಗಣ್ಯರ ಒಟ್ಟೂ ಆದಾಯ 3,140 ಕೋಟಿ ರೂ. ತಲುಪಿದೆ.
ಅಚ್ಚರಿ ಎಂದರೆ ಈ ಪಟ್ಟಿಯಲ್ಲಿ ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಶಾರುಖ್ ಖಾನ್ ಈ ಬಾರಿ 13ನೇ ಸ್ಥಾನಕ್ಕೆ ಇಳಿದಿದ್ದಾರೆ. ಅದಕ್ಕೆ ಕಾರಣ, ಈ ಅವಧಿಯಲ್ಲಿ ಅವರ ಯಾವ ಚಿತ್ರವೂ ತೆರೆಕಂಡಿಲ್ಲ. ಕಳೆದ ಬಾರಿ ಅವರ ಗಳಿಕೆ 170 ಕೋಟಿ ರೂ. ಆಗಿತ್ತು. ಈ ವರ್ಷ ಅವರ ಆದಾಯ 56 ಕೋಟಿ ರೂ.ಗೆ ಇಳಿಕೆ ಆಗಿದೆ. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ 112 ಕೋಟಿ ರೂ. ಗಳಿಕೆ ಮಾಡಿಕೊಳ್ಳುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ವರ್ಷದ ಆರಂಭದಲ್ಲಿ ಅವರ ನಟನೆಯ ‘ಪದ್ಮಾವತ್’ ಚಿತ್ರ 300 ಕೋಟಿ ರೂ. ಕ್ಲಬ್ ಸೇರಿತ್ತು. ಅಲ್ಲದೆ, ಸಾಕಷ್ಟು ಉತ್ಪನ್ನಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಹಾಗಾಗಿ ಅವರ ಗಳಿಕೆ ಹೆಚ್ಚಿದೆ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ(5), ಬಾಲಿವುಡ್ ನಟ ಅಮೀರ್ ಖಾನ್(6), ಅಮಿತಾಭ್ ಬಚ್ಚನ್ (7), ರಣವೀರ್ ಸಿಂಗ್ (8), ಸಚಿನ್ ತೆಂಡೂಲ್ಕರ್ (9), ಅಜಯ್ ದೇವಗನ್ (10) ಈ ಪಟ್ಟಿಯಲ್ಲಿದ್ದಾರೆ. ಎ.ಆರ್. ರೆಹ್ಮಾನ್, ಆಲಿಯಾ ಭಟ್, ರಜನಿಕಾಂತ್ ಕೂಡ ಈ ಬಾರಿಯ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
Comments are closed.