ಬೆಂಗಳೂರು: ಕನ್ನಡ ಸಿನಿಮಾಗಳು ಯಾರಿಗೂ ಕಡಿಮೆ ಇಲ್ಲ ಎನ್ನುವುದನ್ನು ಆಗಾಗ್ಗೆ ಸಾಬೀತು ಮಾಡುತ್ತಲೇ ಬಂದಿವೆ. ಇದೀಗ ಬಂದಿರುವ ಬಹುನಿರೀಕ್ಷಿತ ಸಿನಿಮಾಗಳ ರೇಟಿಂಗ್ ಪ್ರಕಾರ ಕನ್ನಡದ ಚಿತ್ರವೊಂದು ಈಗ ಭಾರತದಲ್ಲೇ ನಂ. 1 ಬಹುನಿರೀಕ್ಷಿತ ಚಿತ್ರ.
ಹೌದು, ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತದ ನಂ. 1 ಬಹುನಿರೀಕ್ಷಿತ ಚಿತ್ರವಾಗಿದೆ. ಕನ್ನಡ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಗಳನ್ನು ಮೂಡಿಸಿದ್ದ ಕೆಜಿಎಫ್ ಚಿತ್ರದ ಟ್ರೈಲರ್ ಇದೀಗ ಭಾರೀ ಸದ್ದು ಮಾಡುತ್ತಿದೆ. ಅಷ್ಟೇ ಅಲ್ಲದೆ ಸಿನಿಮಾ ರೇಟಿಂಗ್ ವೆಬ್ ಸೈಟ್ ಐಎಂಡಿಬಿಯ ಮೋಸ್ಟ್ ಆ್ಯಂಟಿಸಿಪೇಟೆಡ್ ಗ್ಲೋಬಲ್ ಮೂವಿಸ್ ಹಾಗೂ ಟಿವಿ ಟ್ರೆಂಡಿಂಗ್ ಪಟ್ಟಿಯ ಪ್ರಕಾರ ಅದು ಈಗ ಶಾರುಖ್ ಖಾನ್ ಅಭಿನಯದ Zero, ರಜನಿಕಾಂತ್ ಅಭಿನಯದ 2.0 ಚಿತ್ರಗಳನ್ನೂ ಹಿಂದಿಕ್ಕಿದ್ದು, 59.4% ಮೂಲಕ ಭಾರತದ ನಂ. 1 ಬಹುನಿರೀಕ್ಷಿತ ಚಿತ್ರವಾಗಿದೆ.
ಇನ್ನು ಕೆಜಿಎಫ್ ಚಿತ್ರದ ಟ್ರೈಲರ್ ಇದೀಗ ಭಾರೀ ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಅದಕ್ಕಾಗಿ ಫೇಸ್ ಬುಕ್ ನಲ್ಲಿ ವಿಡಿಯೋ ಮೂಲಕ ಅಭಿಮಾನಿಗಳಿಗೆ ಯಶ್ ಅವರು ಧನ್ಯವಾದಗಳನ್ನು ಹೇಳಿದ್ದಾರೆ.
ಎಲ್ಲಾ ಅಭಿಮಾನಿಗಳಿಗೂ, ಕಲಾಭಿಮಾನಿಗಳಿಗೂ, ಕನ್ನಡಾಭಿಮಾನಿಗಳಿಗೂ ಧನ್ಯವಾದಗಳು. ಕೆಜಿಎಫ್ ಟ್ರೈಲರ್ ಸ್ವೀಕರಿಸಿದ ರೀತಿ ನನಗೆ ತುಂಬಾ ತುಂಬಾ ಖುಷಿಯಾಗಿದೆ. 2 ವರ್ಷದಿಂದ ನಾವು ಪಟ್ಟ ಶ್ರಮವನ್ನು ನಿಮಗೆ ತೋರಿಸಲು ಪ್ರಯತ್ನಿಸಿದ್ದೆವು. ಟ್ರೈಲರ್ ಮೂಲಕ ಅದನ್ನು ಪ್ರಸ್ತುತ ಪಡಿಸಿದ್ದೇವೆ. ಅದನ್ನು ನೀವು ಮೆಚ್ಚಿದ ರೀತಿ ತುಂಬಾ ಖುಷಿಯಾಗಿದೆ. ಅಭಿಮಾನಿಗಳು ಅದನ್ನು ಸಂಭ್ರಮಿಸಿದ ರೀತಿ ಬಹಳ ಸಂತಸ ತಂದಿದೆ. ನಿಮ್ಮ ಸಂತಸ ನಮಗೆ ಸ್ಫೂರ್ತಿ. ನಮ್ಮ ಶ್ರಮಕ್ಕೆ ಜನರ ಪ್ರತಿಕ್ರಿಯೆ ಹಾಗೂ ಅವರ ಮೆಚ್ಚುಗೆ ನೋಡಿ ಸಾರ್ಥಕತೆ ಸಿಕ್ಕಿದೆ ಎಂದೆನಿಸುತ್ತಿದೆ ಎಂದು ಧನ್ಯವಾದ ತಿಳಿಸಿದ್ದಾರೆ.
Comments are closed.