ಮನೋರಂಜನೆ

#MeToo: ತಮ್ಮ ಮಗಳನ್ನು ಅರಿಯುವ ಪ್ರಯತ್ನ ಮಾಡದ ಕಾರಣ ಬೇರೆ ಹೆಣ್ಣುಮಕ್ಕಳ ನೋವು ಅರಿಯುವಲ್ಲಿ ಸೋತಿದ್ದಾರೆ; ಗುರುಪ್ರಸಾದ್​ ಪತ್ನಿ

Pinterest LinkedIn Tumblr


#MeToo ಅಭಿಯಾನದ ಪರವಾಗಿ ಧ್ವನಿಯೆತ್ತಿರುವ ಸಂಗೀತಾ ಭಟ್​ ಮತ್ತು ಶ್ರುತಿ ಹರಿಹರನ್ ತಾವು ಪತಿವ್ರತೆಯರು ಎಂದು ಸಾಬೀತು ಮಾಡಲು ಹೊರಟಿದ್ದಾರೆ. ತಮ್ಮ ಮನೆಯಲ್ಲಿ ಗಂಡ, ಅತ್ತೆ ಹಾಗೂ ಮಾವನ ಮುಂದೆ ತಾವು ಪತಿವ್ರತೆಯರು ಎಂದು ಹೇಳೋಕೆ ಪ್ರಯತ್ನಿಸುತ್ತಿದ್ದಾರೆ ಎಂದು ಅಸಂಬದ್ಧ ಹೇಳಿಕೆ ನೀಡಿ ರಾತ್ರೋರಾತ್ರಿ ಮತ್ತೆ ಸುದ್ದಿಗೆ ಬಂದಿದ್ದರು ‘ಮಠ’ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್​.

ಈ ಹೇಳಿಕೆಗೆ ಹಲವೆಡೆಯಿಂದ ವಿರೋಧ ವ್ಯಕ್ತವಾಗಿದ್ದರೆ ಕೆಲವರು ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದರು. ಆಗಾಗ ವಿವಾದಾತ್ಮಕ ಹೇಳಿಕೆ ನೀಡುವುದರಿಂದಲೇ ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಂಡಿರುವ ಗುರುಪ್ರಸಾದ್​ ಅವರ ಈ ಹೇಳಿಕೆ ತೀರಾ ಆಶ್ಚರ್ಯವನ್ನೇನೂ ಉಂಟುಮಾಡಿರಲಿಲ್ಲ. ಆದರೆ, ಹೀಗೆ ಹೇಳುವ ಮೂಲಕ #MeToo ಅಭಿಯಾನದ ಉದ್ದೇಶವೇ ತಪ್ಪು ಎಂಬಂತೆ ಮಾತುಗಳನ್ನಾಡಿದ್ದು ಹಲವರ ಕೋಪಕ್ಕೆ ಕಾರಣವಾಗಿತ್ತು. ಬೇರೆಯವರ ಕೆಂಗಣ್ಣಿಗೆ ಸಿಲುಕಿ ಗುರುಪ್ರಸಾದ್​ ಅವರಿಗೆ ಆಗಬೇಕಾದ್ದೇನೂ ಇಲ್ಲ. ಆದರೀಗ, ಅವರ ಹೆಂಡತಿಯೇ ಅವರ ವಿರುದ್ಧ ಕಿಡಿಕಾರಿದ್ದಾರೆ.

ಮಾಧ್ಯಮವೊಂದರಲ್ಲಿ ಮಾತನಾಡಿರುವ ಆರತಿ, ‘ನಾನು ಸಾಮಾನ್ಯವಾಗಿ ಟಿವಿ, ಪೇಪರ್ ನೋಡುವುದಿಲ್ಲ. ಹಾಗಾಗಿ, ನಮ್ಮ ಸುತ್ತಲೂ ನಡೆಯುವ ಹಲವು ಬೆಳವಣಿಗೆಗಳು ತಡವಾಗಿ ನನ್ನ ಗಮನಕ್ಕೆ ಬರುತ್ತದೆ. ನಿನ್ನೆ ಮಧ್ಯಾಹ್ನ ಗುರುಪ್ರಸಾದ್​ ಟಿವಿ ವಾಹಿನಿಗಳ ಮುಂದೆ ಮಾತನಾಡಿದ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ನೋಡಿದೆ. ಇನ್ನೊಬ್ಬರ ಬಗ್ಗೆ ಕೀಳಾಗಿ ಮಾತನಾಡಲು ಯಾವ ಮನುಷ್ಯನಿಗೂ ಅಧಿಕಾರವಿಲ್ಲ. ಗುರುಪ್ರಸಾದ್​ ಅವರು ಮಾನವೀಯತೆ ಮರೆತು ಮಾತನಾಡಿದ್ದಾರೆ’ ಎಂದು ಗುರುಪ್ರಸಾದ್​ ಕಿಡಿಕಾರಿದ್ದಾರೆ.

ಮಗಳನ್ನೇ ಮನೆಯಿಂದ ಹೊರಹಾಕಿದ್ದ ಅಪ್ಪ ಆತ:

ನಮಗೆ 14 ವರ್ಷದ ಮಗಳಿದ್ದಾಳೆ. ಆದರೆ, ಗುರುಪ್ರಸಾದ್​ ಎಂದೂ ಆಕೆಯನ್ನು ಅರಿಯುವ ಪ್ರಯತ್ನ ಮಾಡದ ಕಾರಣ ಬೇರೆ ಹೆಣ್ಣುಮಕ್ಕಳ ನೋವು, ಸಂಕಟವನ್ನು ಅರಿಯುವಲ್ಲಿ ಅವರು ಸೋತಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನನ್ನನ್ನು ಮತ್ತು ನನ್ನ ಮಗಳನ್ನು ಮಧ್ಯರಾತ್ರಿ ಮನೆಯಿಂದ ಹೊರಗೆ ಹಾಕಿದ್ದ ಗುರುಪ್ರಸಾದ್​ ಈಗ ಕುಟುಂಬದ ಬಗ್ಗೆ ಮಾತನಾಡುತ್ತಿದ್ದಾರೆ. #MeToo ಅಭಿಯಾನದಲ್ಲಿ ತೊಡಗಿಕೊಂಡ ಹೆಣ್ಣುಮಕ್ಕಳು ಸರಿಯಿಲ್ಲ ಎಂದು ಹೇಳುವ ಮೊದಲು ತಮಗೂ ಮಗಳಿದ್ದಾಳೆ ಎಂಬುದಾದರೂ ನೆನಪಾಗಬೇಕಾಗಿತ್ತು. ಅವರು ಹಾಗೆ ಯೋಚನೆ ಮಾಡಿಲ್ಲ ಎಂದಾದರೆ, ಆತ ತನ್ನ ಮಗಳಿಗೆ ಅಪ್ಪನ ಸ್ಥಾನ ತುಂಬಿಲ್ಲ ಎಂದೇ ಅರ್ಥ ಎನ್ನುವ ಮೂಲಕ ಗುರುಪ್ರಸಾದ್​ ಅವರ ಇನ್ನೊಂದು ಮುಖ ತೆರೆದಿಟ್ಟಿದ್ದಾರೆ ಆರತಿ.

ಬೀದಿ ರಂಪವಾಗಬಾರದು ಎಂದು ಸುಮ್ಮನಿದ್ದೆ:

ಮೂರು ವರ್ಷದ ಹಿಂದೆ ನಮ್ಮನ್ನು ನಡುರಾತ್ರಿ ಮನೆಯಿಂದ ಹೊರಹಾಕಿದಾಗ ಆ ವಿಷಯವನ್ನು ಟಿವಿ ವಾಹಿನಿಗಳ ಮುಂದೆ ಹೇಳಿ ಗಲಾಟೆ ಮಾಡಬಹುದಿತ್ತು. ಆದರೆ, ಇದು ಬೀದಿ ರಂಪ ಆಗುವುದು ಬೇಡ ಎಂದು ನಾನು ಎಲ್ಲವನ್ನೂ ಸಹಿಸಿಕೊಂಡು ನನ್ನ ಮಗಳನ್ನು ಬೆಳೆಸುತ್ತಿದ್ದೇನೆ. ನಮಗಿನ್ನೂ ಡೈವರ್ಸ್​ ಆಗಿಲ್ಲ. ಡೈವರ್ಸ್​ ಪೇಪರ್​ಗೆ ಸಹಿ ಹಾಕುವಂತೆ ಅವರ ಮನೆಯ ಬಳಿ ಹೋದರೂ ಅವರು ಕೈಗೆ ಸಿಗದೆ ಗೋಳಾಡಿಸುತ್ತಿದ್ದಾರೆ. ಈ ನಡುವೆ ಮಗಳನ್ನು ನೋಡಬೇಕೆಂದು ಕೂಡ ಅವರಿಗೆ ಅನಿಸಿಲ್ಲ. ಹೆಣ್ಣು ಮಗಳ ತಂದೆಯಾಗಿ ಕರ್ತವ್ಯ ನಿಭಾಯಿಸಿದ್ದರೆ, ಆಕೆಯ ಜವಾಬ್ದಾರಿ ಹೊತ್ತುಕೊಂಡಿದ್ದರೆ ಬೇರೆ ಹೆಣ್ಣುಮಕ್ಕಳ ಬಗ್ಗೆ ಮಾತನಾಡುವ ನೈತಿಕತೆ ಇರುತ್ತಿತ್ತು ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಆರತಿ ತಮ್ಮ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.

Comments are closed.