ಮನೋರಂಜನೆ

ಪುನೀತ್ ದಂಪತಿ, ಪುತ್ರಿ ನಿವೇದಿತ, ನಿರ್ದೇಶಕ ಪ್ರೇಮ್ ರಿಂದ ಶಿವಣ್ಣ ಆರೋಗ್ಯ ವಿಚಾರಣೆ

Pinterest LinkedIn Tumblr


ಬೆಂಗಳೂರು: ಜ್ವರದಿಂದ ಬಳಲುತ್ತಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಆರೋಗ್ಯವನ್ನು ವಿಚಾರಿಸಲು ಪುತ್ರಿ ನಿವೇದಿತ, ಪುನೀತ್ ರಾಜ್‍ಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಶಿವರಾಜ್‍ಕುಮಾರ್ ಗೆ ಆರೋಗ್ಯದ ಬಗ್ಗೆ ವಿಚಾರಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಪುನೀತ್ ರಾಜ್‍ಕುಮಾರ್, ಶಿವಣ್ಣನಿಗೆ ಏನು ಆಗಿಲ್ಲ. ಸ್ವಲ್ಪ ಜ್ವರ ಹೆಚ್ಚಾಗಿರೋದ್ರಿಂದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈಗ ಜ್ವರ ಕಡಿಮೆಯಾಗಿದೆ. ಡಿಸ್ಚಾರ್ಜ್ ಬಗ್ಗೆ ಇನ್ನು ಆಸ್ಪತ್ರೆಯಲ್ಲಿ ಏನೂ ಹೇಳಿಲ್ಲ. ಸಂಜೆಯೊಳಗೆ ಡಿಸ್ಚಾರ್ಜ್ ಆಗೋ ಸಾಧ್ಯತೆಯಿದೆ ಎಂದು ತಿಳಿಸಿದರು.

ಶಿವಣ್ಣ ಅವರಿಗೆ ಏನೂ ಆಗಿಲ್ಲ. ಅವರಿಗೆ ವೈರಲ್ ಜ್ವರ ಬಂದಿದ್ದು, ಡ್ರಿಪ್ಸ್ ನೀಡುತ್ತಿದ್ದಾರೆ. ಮನೆಯಲ್ಲಿ ಡ್ರಿಪ್ಸ್ ಹಾಕಲು ಆಗದಿರುವ ಕಾರಣ ಅವರು ಆಸ್ಪತ್ರೆಗೆ ಬರುವ ಅನಿವಾರ್ಯ ಬಂತು. ಶಿವಣ್ಣ ಕ್ಷೇಮವಾಗಿದ್ದಾರೆ. ಅವರು ಇಂದು ಸಂಜೆ ಡಿಸ್ಚಾರ್ಜ್ ಆಗುವ ಸಾಧ್ಯತೆಯಿದೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು.

ಚಿಕ್ಕಪ್ಪನ ಆರೋಗ್ಯವನ್ನು ವಿಚಾರಿಸಿ ಪ್ರತಿಕ್ರಿಯಿಸಿದ ವಿನಯ್‍ರಾಜ್, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ಶಿವಣ್ಣನ ಜೊತೆ ಕುಟುಂಬದವರು ಇದ್ದಾರೆ ಎಂದರು.

ಭಾನುವಾರ ಸಂಜೆ ಸಿಎಂ ಕುಮಾರಸ್ವಾಮಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಶಿವರಾಜ್‍ಕುಮಾರ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಅಭ್ಯರ್ಥಿ ಮಧು ಬಂಗಾರಪ್ಪ ಪರ ಚುನಾವಣೆ ಪ್ರಚಾರದಲ್ಲಿ ದಂಪತಿ ಸಮೇತ ಭಾಗಿಯಾಗುತ್ತೇವೆ ಅಂತಾ ಭರವಸೆ ನೀಡಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು.

Comments are closed.