ಬೆಂಗಳೂರು:ಮಾರುತಿ ಗೌಡ ಅಪಹರಣ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಿ ಹಾಗೂ ಸಹಚರರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು 8ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ಜಾಮೀನು ಆದೇಶವನ್ನು ಸೆ.26ಕ್ಕೆ ಕಾಯ್ದಿರಿಸಿದ್ದು, ದುನಿಯಾ ವಿಜಿ ಹಾಗೂ ಆಪ್ತರಿಗೆ ಸದ್ಯ ಜೈಲೇ ಗತಿಯಾಗಿದೆ.
ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನೀಡಬೇಕೆಂದು ಕೋರಿ ವಿಜಯ್ ಹಾಗೂ ಆಪ್ತರು ಜಾಮೀನು ಅರ್ಜಿ ಸಲ್ಲಿಸಿದ್ದರು.ಜಾಮೀನು ನೀಡದಂತೆ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ಮಂಡಿಸಿದ್ದರು. ವಾದ, ಪ್ರತಿವಾದ ಆಲಿಸಿದ ನಂತರ ನ್ಯಾಯಾಧೀಶರು ಜಾಮೀನು ತೀರ್ಪನ್ನು ಕಾಯ್ದಿರಿಸಿದ್ದು, ಸೆ.26ರಂದು ಆದೇಶ ಹೊರಬೀಳಲಿದೆ.
ಜಿಮ್ ತರಬೇತುದಾರ ಮಾರುತಿ ಗೌಡ ಎಂಬುವರನ್ನು ಅಪಹರಿಸಿ ಹಲ್ಲೆ ನಡೆಸಿದ ಆರೋಪ ಪ್ರಕರಣದಲ್ಲಿ ವಿಜಯ್ ಸೇರಿ ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ 8ನೇ ಎಸಿಎಂಎಂ ನ್ಯಾಯಾಲಯ ಭಾನುವಾರ ಆದೇಶ ನೀಡಿತ್ತು. ಪ್ರಕರಣ ಸಂಬಂಧ ವಿಜಯ್, ಪ್ರಸಾದ್, ಮಣಿ, ಕಾರು ಚಾಲಕ ಪ್ರಸಾದ್ ಸೇರಿದಂತೆ ನಾಲ್ವರನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿತ್ತು.
ಶನಿವಾರ ತಡರಾತ್ರಿ ಅಂಬೇಡ್ಕರ್ ಭವನದಲ್ಲಿ ನಡೆದ ಬಾಡಿ ಬಿಲ್ಡಿಂಗ್ ಸ್ಪರ್ಧೆ ವೇಳೆ ಕ್ಷುಲ್ಲಕ ಕಾರಣಕ್ಕೆ ಮಾರುತಿ ಗೌಡನ ಜತೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ನಟ ವಿಜಯ್, ಅವರ ಸ್ನೇಹಿತರಾದ ಪ್ರಸಾದ್, ಮಣಿ ಎಂಬವರು ಸೇರಿ ಮಾರುತಿ ಗೌಡನನ್ನು ಅಪಹರಿಸಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿತ್ತು.
Comments are closed.