ಮನೋರಂಜನೆ

ಸಾಮಾಜಿಕ ಜಾಲತಾಣದಿಂದ ಹೊರನಡೆದ ರಕ್ಷಿತ್ ಶೆಟ್ಟಿ

Pinterest LinkedIn Tumblr


ಬೆಂಗಳೂರು: ಕಿರಿಕ್ ಪಾರ್ಟಿ ಖ್ಯಾತಿಯ ಜೋಡಿ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಮತ್ತೆ ಸುದ್ದಿಯಲ್ಲಿದ್ದಾರೆ. ಹಬ್ಬಿರುವ ಸುದ್ದಿ ಸುಳ್ಳು ಎಂದು ಹೇಳಲಾಗುತ್ತಿದ್ದರೂ ಕೂಡಾ, ವೃತ್ತಿ ಕಾರಣಗಳಿಂದಾಗಿ ಇಬ್ಬರ ನಿಶ್ಚಿತಾರ್ಥ ಮುರಿದು ಬಿದ್ದಿರುವುದಾಗಿ ಆಪ್ತ ಮೂಲಗಳು ಹೇಳಿವೆ.

ತೆಲುಗಿನ ಛಲೋ ಸೇರಿದಂತೆ ಇತ್ತೀಚೆಗೆ ಬಿಡುಗಡೆಯಾಗಿದ್ದ ಪರಶುರಾಮ್ ನಿರ್ದೇಶನದ ಗೀತ ಗೋವಿಂದಂ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜೊತೆ ರಶ್ಮಿಕಾ ನಟಿಸಿದ್ದು, ಈ ಸಿನಿಮಾ ಬ್ಲಾಕ್ ಬಸ್ಟರ್ ಆಗಿದೆ. ಇದೀಗ ರಶ್ಮಿಕಾಗೆ ಕನ್ನಡ ಮತ್ತು ತೆಲುಗು ಚಿತ್ರರಂಗದಿಂದ ಒಂದರ ಮೇಲೊಂದರಂತೆ ಅವಕಾಶಗಳು ಬರತೊಡಗಿದೆ.

ಗೀತ ಗೋವಿಂದಂ ಸಿನಿಮಾದಲ್ಲಿ ರಶ್ಮಿಕಾ ಮತ್ತು ವಿಜಯ್ ಲಿಪ್ ಲಾಕ್ ಮಾಡಿಕೊಂಡಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ರಕ್ಷಿತ್, ರಶ್ಮಿಕಾ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳಲಾರಂಭಿಸಿತ್ತು ಎಂಬ ಗುಸುಗುಸು ಹಬ್ಬಿತ್ತು. ಆದರೆ ಇದು ಸುಳ್ಳು ಎಂದು ಇಬ್ಬರೂ ಹೇಳಿಕೊಂಡಿದ್ದರು.

ಏತನ್ಮಧ್ಯೆಯೂ ರಶ್ಮಿಕಾ, ರಕ್ಷಿತ್ ಶೆಟ್ಟಿ ನಿಶ್ಚಿತಾರ್ಥ ಮುರಿದು ಬಿದ್ದ ಬಗ್ಗೆ ವರದಿಯಾದಾಗ, ಇಬ್ಬರೂ ಅದನ್ನು ಸಾರಸಗಟಾಗಿ ತಳ್ಳಿಹಾಕಿದ್ದರು. ಆದರೆ ಇದೀಗ ಇಬ್ಬರೂ ದೂರಗುತ್ತಿರುವುದು ನಿಜ ಎಂಬುದು ಆಪ್ತ ವಲಯದಿಂದ ಕೇಳಿಬಂದಿದೆ.

ವರದಿಯ ಪ್ರಕಾರ, ಇಬ್ಬರಿಗೂ ಹೊಂದಾಣಿಕೆಯಾಗದ ಕಾರಣದಿಂದಾಗಿ ನಿಶ್ಚಿತಾರ್ಥ ಮುರಿದು ಬಿದ್ದಿದೆಯಂತೆ, ಇಬ್ಬರ ನಡುವೆ ಹಲವು ವಿಷಯಗಳಲ್ಲಿನ ಹೊಂದಾಣಿಕೆ ಸಮಸ್ಯೆ ಬಗೆಹರಿಸಿ ಸಂಬಂಧ ಮುಂದುವರಿಸಲು ಉಭಯ ಕುಟುಂಬಗಳ ಸದಸ್ಯರು ಸಾಕಷ್ಟು ಪ್ರಯತ್ನಿಸಿದ್ದರು ಎಂದು ವಿವರಿಸಿದೆ.

ಈ ನಿಟ್ಟಿನಲ್ಲಿ ತನ್ನ ಪೋಷಕರು, ಕುಟುಂಬದ ಹಿರಿಯರು ಹಾಗೂ ಗೆಳೆಯರ ಜೊತೆ ಚರ್ಚಿಸಿ ರಶ್ಮಿಕಾ ನಿಶ್ಚಿತಾರ್ಥ ಮುರಿದುಕೊಳ್ಳುವ ನಿರ್ಧಾರಕ್ಕೆ ಬಂದಿರುವುದಾಗಿ ವರದಿ ತಿಳಿಸಿದೆ. ಇದು ಕಠಿಣ ನಿರ್ಧಾರವಾದರೂ ರಕ್ಷಿತ್ ಹಾಗೂ ರಶ್ಮಿಕಾ ವೃತ್ತಿ ಜೀವನ ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಲ್ಲದೇ ಇಬ್ಬರೂ ಸ್ನೇಹಿತರಾಗಿ ಉಳಿಯುತ್ತಾರೆ ಎಂಬುದು ಆಪ್ತ ಮೂಲಗಳ ಮಾತಾಗಿದೆ.

ಸಾಮಾಜಿಕ ಜಾಲತಾಣದಿಂದ ಹೊರನಡೆದ ರಕ್ಷಿತ್ ಶೆಟ್ಟಿ:
ಈ ಎಲ್ಲ ಬೆಳವಣಿಗೆಯ ನಡುವೆಯೇ ರಕ್ಷಿತ್ ಶೆಟ್ಟಿ ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಮ್ ಮೂಲಕ ಹರಟುತ್ತಿದ್ದರು. ಆದರೆ ದಿಢೀರ್ ಸಾಮಾಜಿಕ ಜಾಲತಾಣದಿಂದ ಹೊರನಡೆಯುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಅನುಮಾನ ಮೂಡಿಸಿದ್ದಾರೆ. ಈ ನಿರ್ಧಾರ ಯಾಕೆ ಕೈಗೊಂಡರೂ ಎಂಬುದು ತಿಳಿದು ಬಂದಿಲ್ಲ. ರಕ್ಷಿತ್ ಹಾಗೂ ಭಾವಿ ಪತ್ನಿ ರಶ್ಮಿಕಾ ಕುರಿತಾದ ಟ್ರೋಲ್ ಗಳು ಚರ್ಚೆಗೆ ಎಡೆಮಾಡಿಕೊಟ್ಟಿದ್ದವು, ಹಲವರು ವೈಯಕ್ತಿಕ ವಿಷಯಗಳ ಬಗ್ಗೆ ಟ್ರೋಲ್ ಮಾಡಿದ್ದರಿಂದ ಅಸಮಾಧಾನಗೊಂಡು ಸಾಮಾಜಿಕ ಜಾಲತಾಣದಿಂದ ದೂರ ಉಳಿಯಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ರಕ್ಷಿತ್ ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ!

Comments are closed.