ಮನೋರಂಜನೆ

ಹೈದರಾಬಾದ್‌ನಲ್ಲಿ ಸತೀಶ್ ನೀನಾಸಂ ಅಭಿನಯದ ‘ಅಯೋಗ್ಯ’ ಪ್ರದರ್ಶನಕ್ಕೆ ತಕರಾರು!

Pinterest LinkedIn Tumblr


ಸತೀಶ್ ನೀನಾಸಂ ಅಭಿನಯದ ಅಯೋಗ್ಯ ಸಿನಿಮಾ ಬಾಕ್ಸ್ ಆಫೀಸಲ್ಲಿ ಮುನ್ನುಗ್ಗುತ್ತಿದೆ. ಇದೇ ಸಂದರ್ಭದಲ್ಲಿ ಹೈದರಾಬಾದ್‌ನಲ್ಲಿ ಕನ್ನಡ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡದಿರುವ ಘಟನೆಯೂ ಬೆಳಕಿಗೆ ಬಂದಿದೆ. ಈ ಬಗ್ಗೆ ಸತೀಶ್ ಅವರು ಫೇಸ್‌ಬುಕ್‌ನಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿರುವ ಅವರು, “ಹೈದರಾಬಾದ್‌ ಮಲ್ಟಿಫ್ಲೆಕ್ಸ್‌ಗಳಲ್ಲಿ ನಮ್ಮ ಸಿನಿಮಾದ ಎರಡು ಶೋ ಹಾಕಬೇಕಾದರೆ ಅಲ್ಲಿನ ಚೇಂಬರ್‌ನಲಿ ಅನುಮತಿ ತೆಗೆದುಕೊಳ್ಳಬೇಕಂತೆ. ಇಲ್ಲಿ ಅವರ ಸಿನಿಮಾಗಳು ಇನ್ನೂರು, ಮುನ್ನೂರು ಸಾವಿರಾರು ಶೋಗಳು ನಮ್ಮ ಕರ್ನಾಟಕದಲ್ಲಿ ಲೆಕ್ಕವಿಲ್ಲದಷ್ಟು ಪ್ರದರ್ಶನವಾಗುತ್ತಿವೆ.

ಆದರೆ ನಾವು ಅಲ್ಲಿ ಒಂದು, ಎರಡು ಶೋಗಳಿಗೆ ಚೇಂಬರ್ ಪರ್ಮಿಷನ್ ತಗೋಬೇಕು. ಇಲ್ಲಿ ನಮ್ಮ ಚಿತ್ರ ಚೆನ್ನಾಗಿ ಕಲೆಕ್ಷನ್ ಮಾಡುತ್ತಿದ್ದರೂ ನಮ್ಮದಕ್ಕಿಂತ ಅವರದೇ ಸಿನಿಮಾಗಳು ಜಾಸ್ತಿ ತೆರೆಕಂಡಿವೆ. ನಮ್ಮ ಕನ್ನಡಿಗರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಯೋಚಿಸಬೇಕಾದ ಪರಿಸ್ಥಿತಿ ಬಂದಿದೆ.

ಬೇರೆ ರಾಜ್ಯಗಳಲ್ಲಿ ಒಂದೊಂದು ಶೋ ತೆಗೆದುಕೊಳ್ಳಲು ನಾವು ಭಿಕ್ಷೆ ಬೇಡಬೇಕು. ಇಲ್ಲಿ ಸಾವಿರಾರು ಶೋಗಳನ್ನು ಹಾಕಿಕೊಂಡು ನಮ್ಮ ದುಡ್ದನ್ನು ಬಾಚುತ್ತಿದ್ದಾರೆ. ನಾವು ಒಂದು ಶೋಗೆ ಅವರ ಪರ್ಮಿಷನ್ ತಗೋಬೇಕು. ಆದರೆ ಇಲ್ಲಿ ಸಾವಿರಾರು ಶೋಗಳನ್ನು ಹಾಕಿಕೊಂಡು ಕನ್ನಡ ಚಿತ್ರಗಳ ಪ್ರದರ್ಶನಕ್ಕೆ ಆಸ್ಪದ ಇಲ್ಲದಂತಾಗಿದೆ.

ಕನ್ನಡ ಸಿನಿಮಾಗಳಿಗೆ ರೇಟಿಂಗ್ ಸಹ ಕಡಿಮೆ ತೋರಿಸಲಾಗುತ್ತಿದೆ. ಅದೇ ಪರಭಾಷೆಯ ಚಿತ್ರಗಳಿಗೆ ಹೆಚ್ಚು ರೇಟಿಂಗ್ ನೀಡಲಾಗುತ್ತಿದೆ. ಕನ್ನಡ ಸಿನಿಮಾಗಳನ್ನು ತುಳಿಯಲು ಪ್ರಯತ್ನಿಸುತ್ತಿವೆ ಮಲ್ಟಿಫೆಕ್ಸ್ ಚಿತ್ರಮಂದಿರಗಳು. ಅಯೋಗ್ಯ ಸಿನಿಮಾದ ಶೋಗಳ ಸಂಖ್ಯೆಯನ್ನೂ ಕಡಿಮೆ ಮಾಡಿದ್ದಾರೆ” ಎಂದು ಪರಭಾಷೆಯಿಂದ ಕನ್ನಡ ಚಿತ್ರಗಳಿಗೆ ಎದುರಾಗುತ್ತಿರುವ ಸಂಕಷ್ಟಗಳನ್ನು ಬಿಚ್ಚಿಟ್ಟಿದ್ದಾರೆ.

Comments are closed.