ಮನೋರಂಜನೆ

ಸಾವಿನ ಅಂಚಿಗೆ ಹೋಗಿದ್ದ ನಟಿಗೆ ಪುನರ್ಜನ್ಮ ನೀಡಿದ ಸಲ್ಮಾನ್ ಖಾನ್

Pinterest LinkedIn Tumblr

ಕಳೆದ ಐದು ತಿಂಗಳಿಂದ ಕ್ಷಯರೋಗದೊಂದಿಗೆ ಹೋರಾಡುತ್ತಾ ಸಾವು ಬದುಕಿನ ನಡುವೆ ತೊಳಲಾಡುತ್ತಿದ್ದ ಬಾಲಿವುಡ್ ನಟಿ ಪೂಜಾ ದದ್ವಾಲ್ ಈಗ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಲ್ಮಾನ್ ಖಾನ್ ಜತೆಗೆ ‘ವೀರ್‌‍ಗತಿ’ (1995) ಚಿತ್ರದಲ್ಲಿ ಪೂಜಾ ಅಭಿನಯಿಸಿದ್ದಾರೆ.

ಕ್ಷಯರೋಗದಿಂದ ಬಳಲಿ ಮಾರ್ಚ್‌ನಲ್ಲಿ ಆಸ್ಪತ್ರೆಗೆ ದಾಖಲಾದಾಗ ಕೇವಲ 23 ಕೆ.ಜಿಯಷ್ಟಿತ್ತು ಅವರ ತೂಕ. ಇದೀಗ ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಅವರ ಆರೋಗ್ಯ ಸುಧಾರಿಸಿದ್ದು ತೂಕದಲ್ಲೂ 20 ಕೆ.ಜಿಯಷ್ಟು ಹೆಚ್ಚಾಗಿದ್ದಾರೆ. ಪೂಜಾ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲದ ಕಾರಣ ಚಿಕಿತ್ಸೆ ಕೊಡಿಸುವುದು ಕಷ್ಟಕರವಾಗಿತ್ತು.

ನಟ ಸಲ್ಮಾನ್ ಖಾನ್ ಸಹಾಯಕ್ಕೆ ಮುಂದೆ ಬಂದಾಗ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗಿ ಪೂಜಾ ಕರುಣಾಜನಕ ಕಥೆ ಬಹಿರಂಗವಾಯಿತು. ಪೂಜಾ ಅವರ ಎರಡೂ ಶ್ವಾಸಕೋಶಗಳು ಸೋಂಕಿಗೆ ಒಳಗಾಗಿದ್ದ ಕಾರಣ ಉಸಿರಾಟ ಕಷ್ಟವಾಗಿತ್ತು. ಕಳೆದ ಎರಡು ತಿಂಗಳಿಂದ ಆಕ್ಸಿಜನ್ ನೀಡಲಾಗುತ್ತಿತ್ತು.

ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಪ್ರತಿಷ್ಠಾನದ ಮೂಲಕ ಪೂಜಾ ಚಿಕಿತ್ಸೆಗೆ ಆರ್ಥಿಕ ಸಹಾಯ ನೀಡಲಾಯಿತು. ಈಗವರು ಸಂಪೂರ್ಣ ಚೇತರಿಸಿಕೊಂಡು ಮಂಗಳವಾರ (ಆ.7) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈ ಬಗ್ಗೆ ವಿವರ ನೀಡಿರುವ ಡಾ.ಲಲಿತ್ ಆನಂದೆ, “ಮಾರಣಾಂತಿಕ ಬ್ಯಾಕ್ಟೀರಿಯಾ ವಿರುದ್ಧ ಹೋರಾಡಿ ಅವರು ಗೆದ್ದಿದ್ದಾರೆ ಎಂದರೆ ಇದಕ್ಕೆ ಕಾರಣ ಅವರ ಮನೋಬಲ. ಮೊದಲ ಬಾರಿ ಅವರನ್ನು ವಾರ್ಡ್‌ನಲ್ಲಿ ಭೇಟಿಯಾದಾಗ, ನಾನು ಮೊದಲಿನಂತೆ ಓಡಾಡಬೇಕು, ದಯವಿಟ್ಟು ಏನಾದರೂ ಮಾಡಿ, ನನ್ನ ಕಾಲ ಮೇಲೆ ನಾನು ನಿಂತು ನಡೆಯುವಂತಾಗಬೇಕು ಎಂದಿದ್ದರು.

ಸುದೀರ್ಘ ಕ್ಷಯರೋಗ ಚಿಕಿತ್ಸೆ ಹಾಗೂ ಸಮಾಜದಿಂದ ದೂರ ಉಳಿಯುವ ಕಾರಣ ರೋಗಿಗಳು ಮಾನಸಿಕವಾಗಿ ಕುಗ್ಗುತ್ತಾರೆ. ಈ ಹಿಂದೆ ಸಾಕಷ್ಟು ಮಂದಿ ಯುವ ರೋಗಿಗಳು ಇದಕ್ಕೆ ತುತ್ತಾಗಿದ್ದಾರೆ ಎನ್ನುತ್ತಾರೆ ವೈದ್ಯರು. ಇದೇ ಆಸ್ಪತ್ರೆಯಲ್ಲಿ ಸಾಕಷ್ಟು ಮಂದಿ ಕ್ಷಯರೋಗಿಗಳು ಆತ್ಮಹತ್ಯೆಗೂ ಶರಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರೋಗಿಗಳಿಗೆ ಆಪ್ತ ಸಲಹೆ ಸೂಚನೆಗಳನ್ನು ನೀಡಲಾಗುತ್ತಿದೆ.

ಸಲ್ಮಾನ್ ಖಾನ್ ಅವರ ಚಾರಿಟಬಲ್ ಟ್ರಸ್ಟ್ ಮೂಲಕ ಪೂಜಾ ಅವರಿಗೆ ನೀಡಲಾಗುತ್ತಿದ್ದ ಮಲ್ಟಿ ವಿಟಮಿನ್ ಮತ್ತು ಪ್ರೋಟೀನ್ ಸಪ್ಲಿಮೆಂಟ್‌ಗಳಿಂದ ಅವರು ಬೇಗ ಚೇತರಿಸಿಕೊಳ್ಳುವಂತಾಯಿತು. ಇಲ್ಲಿಗೆ ಬರುವವರು ಆರ್ಥಿಕವಾಗಿ ಹಿಂದುಳಿದಿದ್ದು ಮಲ್ಟಿ ವಿಟಮಿನ್ ಮತ್ತು ಪ್ರೋಟೀನ್ ಸಪ್ಲಿಮೆಂಟ್‌ಗಳನ್ನು ಖರೀದಿಸುವುದು ಕಷ್ಟ ಎನ್ನುತ್ತಾರೆ ವೈದ್ಯರು.

ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಪೂಜಾ ಈಗ ಗೋವಾಗೆ ಹೊರಟಿದ್ದು, ಈ ಸಂದರ್ಭದಲ್ಲಿ ಮುಂಬೈ ಮಿರರ್ ಜತೆಗೆ ಮಾತನಾಡುತ್ತಾ, “ಈಗ ಹೇಗಿದ್ದೇನೆ ಎಂಬುದನ್ನು ನನ್ನಿಂದ ವರ್ಣಿಸಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆಗೆ ದಾಖಲಾದಾಗ ಇನ್ನೇನು ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೆ. ನನ್ನ ಗೆಳೆಯರು ಮತ್ತು ಕುಟುಂಬ ದೂರವಾಗಿತ್ತು. ಶ್ವಾಸಕೋಶಗಳು ತೀವ್ರವಾಗಿ ಸೋಂಕಿಗೆ ಒಳಗಾಗಿವೆ ಎಂದಗ ಬದುಕುವ ಆಸೆ ಕಮರಿಹೋಗಿತ್ತು. ನಿರಂತರ ಕೆಮ್ಮು ಮತ್ತು ಉಸಿರಾಟ ಕಷ್ಟಕರವಾದ ಕಾರಣ ತುಂಬಾ ನಿತ್ರಾಣಗೊಂಡಿದ್ದೆ. ನನ್ನಂತೆ ಬಹಳಷ್ಟು ಮಂದಿ ಒಂಟಿಯಾಗಿ ಸಾಯುತ್ತಿದ್ದನ್ನು ನೋಡಿದ್ದೆ. ಆಗ ನಾನು ದೃಢವಾದ ನಿರ್ಧಾರಕ್ಕೆ ಬಂದೆ, ಈ ರೀತಿ ಸಾಯಬಾರದು ಅಂತ. ಕ್ಷಯರೋಗಿಗಳ ಒಂದು ಸಮಸ್ಯೆ ಎಂದರೆ ಸಮಾಜ ಅವರನ್ನು ದೂರ ಇಡುವುದು. ಆದರೆ ನನ್ನ ವಿಚಾರದಲ್ಲಿ ಸಲ್ಮಾನ್ ಖಾನ್ ಮುಂದೆ ಬಂದು ಸಹಾಯ ಹಸ್ತ ಚಾಚಿದರು. ಬಟ್ಟೆಗಳಿಂದ ಹಿಡಿದು ಸೋಪು, ಡಯಪರ್, ಊಟ, ಔಷಧಿಗಳು ಎಲ್ಲವನ್ನೂ ಅವರ ಫೌಂಡೇಷನ್ ನೀಡಿತು. ಇಂದು ನಾನು ಬದುಕಿ ಬಂದಿದ್ದೇನೆ ಎಂದರೆ ಅದಕ್ಕೆ ಕಾರಣ ಅವರೇ” ಎಂದಿದ್ದಾರೆ ಪೂಜಾ.

ಪೂಜಾ ದದ್ವಾಲ್ ಅಂದು ಇಂದು

ಪೂಜಾ ಅವರು ಇನ್ನೂ ಒಂದು ತಿಂಗಳ ಕಾಲ ಔಷಧಿಯನ್ನು ತೆಗೆದುಕೊಳ್ಳಬೇಕಾಗಿದೆ. “ಪೂಜಾ ಅವರ ಲೇಟೆಸ್ಟ್ ಸಿಟಿ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದೆವು. ಎಲ್ಲವೂ ಚೆನ್ನಾಗಿದೆ. ಇನ್ನೊಂದು ತಿಂಗಳಲ್ಲಿ ಕ್ಷಯರೋಗದ ಬ್ಯಾಕ್ಟೀರಿಯಾ ಸಂಪೂರ್ಣ ಅವರಿಂದ ದೂರವಾಗಲಿದೆ” ಎಂದಿದ್ದಾರೆ ವೈದ್ಯರು.

Comments are closed.