ಮನೋರಂಜನೆ

ರಚಿತಾ ರಾಮ್ ಹೊಸ ಚಿತ್ರ “ಏಪ್ರಿಲ್‌’; ಬುಲ್‌ಬುಲ್‌ ಬೆಡಗಿ ನಾಯಕಿ

Pinterest LinkedIn Tumblr


ಕೆಲವು ದಿನಗಳ ಹಿಂದಷ್ಟೇ ನಟಿ ರಚಿತಾ ರಾಮ್‌ “ತಾನೊಂದು ನಾಯಕಿ ಪ್ರಧಾನ ಚಿತ್ರ ಒಪ್ಪಿಕೊಂಡಿದ್ದೇನೆ. ಆ ಬಗ್ಗೆ ಸದ್ಯದಲ್ಲೇ ಹೇಳುತ್ತೇನೆ’ ಎಂದಿದ್ದರು. ಸ್ಟಾರ್‌ಗಳ ಸಿನಿಮಾಗಳಲ್ಲೇ ಬಿಝಿಯಾಗಿರುವ ರಚಿತಾ ಒಪ್ಪಿಕೊಂಡ ನಾಯಕಿ ಪ್ರಧಾನ ಚಿತ್ರ ಯಾವುದು ಎಂದರೆ ಅದಕ್ಕೆ ಉತ್ತರ “ಏಪ್ರಿಲ್‌’. ಹೌದು, “ಏಪ್ರಿಲ್‌’ ಎಂಬ ಚಿತ್ರದಲ್ಲಿ ರಚಿತಾ ನಟಿಸುತ್ತಿದ್ದು, ಬಹುತೇಕ ಸಿನಿಮಾ ಅವರ ಸುತ್ತವೇ ಸುತ್ತಲಿದೆ. ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ರಚಿತಾ ಇಲ್ಲಿ ಡಿ ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸತ್ಯ ರಾಯಲ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಇವರಿಗಿದು ಚೊಚ್ಚಲ ಚಿತ್ರ.

ಚಿತ್ರದ ಬಗ್ಗೆ ಮಾತನಾಡುವ ಸತ್ಯ, “ಇದು ನೈಜ ಘಟನೆಯೊಂದನ್ನು ಆಧರಿಸಿ ಮಾಡಿರುವ ಕಥೆ. ಚಿತ್ರದಲ್ಲಿ ರಚಿತಾ ಅವರು ಏಪ್ರಿಲ್‌ ಡಿಸೋಜಾ ಎನ್ನುವ ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ ಏಪ್ರಿಲ್‌ ಎಂದು ಟೈಟಲ್‌ ಇಡಲು ಒಂದು ಕಾರಣವಿದೆ. ವಸಂತಕಾಲ ಬಂದು ಎರಡು ತಿಂಗಳ ನಂತರ ಏಪ್ರಿಲ್‌ ಬರುತ್ತದೆ. ಅದರಂತೆ ನಾಯಕಿಯ ಬದುಕಿನಲ್ಲೊಂದು ಎರಡನೇ ಛಾನ್ಸ್‌ ಸಿಗುತ್ತದೆ. ಆ ಕಾರಣಕ್ಕಾಗಿ ಆಕೆಯ ತಂದೆ-ತಾಯಿ ಏಪ್ರಿಲ್‌ ಡಿಸೋಜಾ ಎಂದು ಹೆಸರಿಟ್ಟಿರುತ್ತಾರೆ. ಇದೊಂದು ಥ್ರಿಲ್ಲರ್‌ ಕಥೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ ಸತ್ಯ. ಇಡೀ ಚಿತ್ರವನ್ನು ನೈಜವಾಗಿ ಕಟ್ಟಿಕೊಡಲು ಸತ್ಯ ತಯಾರಿ ನಡೆಸಿದ್ದಾರೆ. ಇಲ್ಲಿ ರಚಿತಾ ಕೂಡಾ ಸಾಮಾನ್ಯ ಹುಡುಗಿಯಾಗಿಯೇ ಸಿನಿಮಾದುದ್ದಕ್ಕೂ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವನ್ನು ನಾರಾಯಣ್‌ ಬಾಬು ನಿರ್ಮಿಸುತ್ತಿದ್ದಾರೆ. ಸದ್ಯ ಬಿಡುಗಡೆಗೆ ರೆಡಿಯಾಗಿರುವ ಜಗ್ಗೇಶ್‌ ಅವರ “8ಎಂಎಂ’ ಚಿತ್ರದ ನಿರ್ಮಾಪಕರು ಇವರೇ. ಈಗ “ಏಪ್ರಿಲ್‌’ ಮಾಡುತ್ತಿದ್ದಾರೆ. ಚಿತ್ರಕ್ಕೆ ಉದಿತ್‌ ಹರಿದಾಸ್‌ ಸಂಗೀತ, ಅರ್ಜುನ್‌ ಶೆಟ್ಟಿ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಸಂಕಲನವಿದೆ. ಚಿತ್ರ ಸೆಪ್ಟೆಂಬರ್‌ನಿಂದ ಆರಂಭವಾಗಲಿದೆ

Comments are closed.