ಮನೋರಂಜನೆ

’ಅಮ್ಮ’ಗೆ ರಾಜೀನಾಮೆ ಸಲ್ಲಿಸಿದ ನಾಲ್ವರು ಮಲಯಾಳಂ ನಟಿಯರು

Pinterest LinkedIn Tumblr


ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ವಿವಾದ ತಲೆಯೆತ್ತಿದೆ. ’ಅಪಹರಣ ಮತ್ತು ಅತ್ಯಾಚಾರ’ ಪ್ರಕರಣದ ಸಂತ್ರಸ್ತ ನಟಿ ಸೇರಿದಂತೆ ನಾಲ್ಕು ಮಂದಿ ನಟಿಯರು ಮಲಯಾಳಂ ಸಿನಿಮಾ ಕಲಾವಿದರ ಸಂಘಕ್ಕೆ (AMMA) ರಾಜೀನಾಮೆ ಸಲ್ಲಿಸಿದ್ದಾರೆ. ಅಪಹರಣ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ನಟ ದಿಲೀಪ್‌ರನ್ನು ಮತ್ತೆ ’ಅಮ್ಮ’ ಬಳಗಕ್ಕೆ ಸೇರಿಸಿಕೊಂಡಿರುವುದನ್ನು ವಿರೋಧಿಸಿ ಮಹಿಳಾ ಕಲಾವಿದರು ರಾಜೀನಾಮೆ ಸಲ್ಲಿಸಿದ್ದಾರೆ.

“ನನಗೆ ಅವಕಾಶ ಕೊಡಲ್ಲ ಎಂದಿದ್ದ ಆ ನಟನ ವಿರುದ್ಧ ಹಲವಾರು ಸಲ ದೂರು ನೀಡಿದ್ದೇನೆ. ಆ ನಟನಿಂದ ನನಗೆ ಅತ್ಯಂತ ಕೆಟ್ಟ ಅನುಭವವಾದರೂ AMMA ಯಾವುದೇ ಕ್ರಮಕೈಗೊಳ್ಳಲಿಲ್ಲ. ಆ ನಟನ ರಕ್ಷಣೆಗೆ ನಿಂತಿತು. ಇನ್ನು ಈ ಸಂಘಟನೆಯಲ್ಲಿ ಮುಂದುವರೆಯುವುದರಿಂದ ಯಾವ ಪ್ರಯೋಜನ ಇಲ್ಲ ಅನ್ನಿಸಿತು” ಎಂದು ಫೇಸ್‍ಬುಕ್‌ನಲ್ಲಿ ಬರೆದುಕೊಂಡಿದ್ದಾರೆ ರಾಜೀನಾಮೆ ಸಲ್ಲಿಸಿರುವ ಸಂತ್ರಸ್ತ ನಟಿ.

ಸಂತ್ರಸ್ತ ತಾರೆಗೆ ಬೆಂಬಲ ನೀಡಿರುವ ಮಾಲಿವುಡ್ ನಟಿಯರಾದ ರಿಮಾ ಕಲ್ಲಿಂಗಲ್, ರೆಮ್ಯಾ ನಂಬೀಸನ್ ಮತ್ತು ನಿರ್ದೇಶಕಿ ಗೀಥು ಮೋಹನದಾಸ್ ಸಹ ರಾಜೀನಾಮೆ ನೀಡಿದ್ದಾರೆ. ಒಟ್ಟಾರೆ AMMa ವಿರುದ್ಧ ಮಹಿಳಾ ನಟಿಯರು ತಿರುಗಿಬಿದ್ದಿದ್ದಾರೆ. ಅಲ್ಲಿ ಮಹಿಳೆಯರಿಗೆ ಯಾವುದೇ ಗೌರವ ಇಲ್ಲ. ಮುಂದಿನ ತಲೆಮಾರಿನ ನಟಿಯರಿಗೆ ಈ ರೀತಿ ಆಗಬಾರದು ಎಂಬ ಉದ್ದೇಶದಿಂದ ರಾಜೀನಾಮೆ ನೀಡುತ್ತಿದ್ದೇವೆ ಎಂದಿದ್ದಾರೆ.

ವುಮೆನ್ ಇನ್ ಸಿನಿಮಾ ಕಲೆಕ್ಟೀವ್ (WCC)ನಲ್ಲೂ ಕ್ರಿಯಾಶೀಲವಾಗಿರುವ ಈ ನಟಿಯರು AMMAಗೆ ರಾಜೀನಾಮೆ ನೀಡಿರುವುದು ಮಾಲಿವುಡ್‌ನಲ್ಲಿ ಚರ್ಚೆಯ ವಿಷಯವಾಗಿದೆ. ನಿಯಮಗಳನ್ನು ಯಾರು ಗಾಳಿಗೆ ತೂರುತ್ತಾರೋ ಅವರನ್ನು ಪ್ರಶ್ನಿಸುವ ಗೋಜಿಗೆ AMMA ಹೋಗುತ್ತಿಲ್ಲ. ಅವರ ಬೇಜವಾಬ್ದಾರಿ ಧೋರಣೆಯನ್ನು ಖಂಡಿಸುತ್ತಿದ್ದು ಇದರ ವಿರುದ್ಧ ನಾವು ಹೋರಾಡುತ್ತೇವೆ ಎಂದಿದ್ದಾರೆ ರಾಜೀನಾಮೆ ನೀಡಿರುವ ನಟಿಯರು.

Comments are closed.