ಜೂನ್ 7 ರಂದು ಕರ್ನಾಟಕ ಹೊರತುಪಡಿಸಿ ವಿಶ್ವದಾದ್ಯಂತ ‘ಕಾಲಾ’ ಸಿನಿಮಾ ತೆರೆ ಕಂಡಿದೆ. ಆದರೆ ನಟ ರಜನಿಕಾಂತ್ ಕಾವೇರಿ ಕುರಿತು ನೀಡಿದ ಹೇಳಿಕೆಗೆ ಕರ್ನಾಟಕದಲ್ಲಿ ಚಿತ್ರ ಪ್ರದರ್ಶನಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೇ ‘ಕಾಲಾ’ ಚಿತ್ರ ತೆರೆಕಾಣದಂತೆ ತಡೆಯುವಲ್ಲಿ ಕನ್ನಡ ಪರ ಸಂಘಟನೆಗಳು ಯಶಸ್ವಿಯಾಗಿದ್ದವು. ಆದರೆ ಬೆಂಗಳೂರಿನ ಕೆಲ ಥಿಯೇಟರ್ನಲ್ಲಿ ಪೊಲೀಸ್ ಭದ್ರತೆಯೊಂದಿಗೆ ‘ಕಾಲಾ’ ಪ್ರದರ್ಶನ ಭರ್ಜರಿಯಾಗಿ ನಡೆಯುತ್ತಿದೆ.
ಹೀಗಿರುವಾಗ ಬೆಂಗಳೂರಿನ ಜಾಲಹಳ್ಳಿಯ ಭಾರತಿ ಥಿಯೇಟರ್ನಲ್ಲಿ ‘ಕಾಲಾ’ ಚಿತ್ರವನ್ನು ಪ್ರದರ್ಶಿಸಲಾಗಿದೆ. ಈ ಸುದ್ದಿ ತಿಳಿದ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಚಿತ್ರಮಂದಿರ ಬಳಿ ಧಾವಿಸಿದ್ದರು. ಆದರೆ ಯಾವುದೇ ಪ್ರತಿಭಟನೆ, ಕೂಗಾಟ ಅಲ್ಲಿ ಕೇಳಿ ಬಂದಿರಲಿಲ್ಲ. ಬದಲಾಗಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರನ್ನು ಸಂಘಟನೆಯವರು ಸನ್ಮಾನಿಸಿ ಅಚ್ಚರಿ ಮೂಡಿಸಿದ್ದಾರೆ.
‘ಕಾಲಾ’ ಚಿತ್ರದ ನಿರ್ಮಾಪಕರೆಂದು ಪರಿಚಯಿಸಿಕೊಂಡ ಕನ್ನಡ ಸಂಘಟನೆಯ ಕೆಲ ಕಾರ್ಯಕರ್ತರು, ನಾವು ಬಂದಿರುವುದು ‘ಕಾಲಾ’ ಚಿತ್ರ ನೋಡಿದವರನ್ನು ಸನ್ಮಾನಿಸಲು ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಸಿನಿಮಾ ನೋಡಿ ಹೊರ ಬರುತ್ತಿದ್ದ ಪ್ರೇಕ್ಷಕರಿಗೆ ಮೈಸೂರು ಪೇಟಾ, ಶಾಲು ತೊಡಿಸಿ, ಹೂವಿನ ಹಾರ ಹಾಕಿ ಸನ್ಮಾನಿಸಿದ್ದಾರೆ.
ಸನ್ಮಾನಕ್ಕೆ ಖುಷಿ ಖುಷಿಯಿಂದ ಪೋಸ್ ನೀಡಿದ ವೀಕ್ಷಕರಿಗೆ, ಕೆಲ ನಿಮಿಷದಲ್ಲಿ ಮಂಗಳಾರತಿಯನ್ನೂ ಮಾಡಿದ್ದಾರೆ. ಅದು ಅಂತಿಂಥ ಮಂಗಳಾರತಿ ಆಗಿರಲಿಲ್ಲ, ಬದಲಾಗಿ ಉಗಿದು ಉಪ್ಪಿನಕಾಯಿ ಹಾಕುವ ಮಂಗಳಾರತಿ.
ಹೌದು, ನಾವು ಕರ್ನಾಟಕದಲ್ಲಿರುವ ಕನ್ನಡ ದ್ರೋಹಿಗಳನ್ನು ಹುಡುಕುತ್ತಾ ಇದ್ದೀವಿ, ಅದು ನೀವೇ ಎಂದು ಈಗ ಗೊತ್ತಾಯಿತು ಎಂದು ಕನ್ನಡ ಸಂಘಟನೆಯ ಕಾರ್ಯಕರ್ತರು ಸನ್ಮಾನದ ಬಳಿಕ ಹಿಗ್ಗಾ ಮುಗ್ಗಾ ಜಾಡಿಸಲು ಪ್ರಾರಂಭಿಸಿದ್ದಾರೆ. ಈ ಅನಿರೀಕ್ಷಿತ ಘಟನೆಯಿಂದ ಸಿನಿಮಾ ವೀಕ್ಷಿಸಿ ಸನ್ಮಾನ ಸ್ವೀಕರಿಸಿದ್ದ ಪ್ರೇಕ್ಷಕರು ತಬ್ಬಿಬ್ಬಾಗಿದ್ದಾರೆ
ರಾಜ್ಯದಲ್ಲಿ ಇಷ್ಟೆಲ್ಲಾ ಪ್ರತಿಭಟನೆ ನಡೆಯುತ್ತಿದ್ದರೂ ನೀವು ಚಿತ್ರ ವೀಕ್ಷಿಸಿದ್ದೀರಿ. ನಿಮಗೆ ಸ್ವಾಭಿಮಾನಕ್ಕಿಂತ ಸಿನಿಮಾ ಹೆಚ್ಚಾಯಿತೇ ಎಂದು ಕಾಲಾ ಪ್ರೇಕ್ಷಕರನ್ನು ತರಾಟೆ ತೆಗೆದುಕೊಂಡಿದ್ದಾರೆ. ಥಿಯೇಟರ್ ಬಳಿ ಪೊಲೀಸರು ಇದ್ದರೂ ಸನ್ಮಾನವೆಂದು ಸುಮ್ಮನೆ ನಿಂತಿದ್ದರು. ಆದರೆ ಪರಿಸ್ಥಿತಿ ದಿಡೀರ್ ಆಗಿ ಬದಲಾಗಿ ಕಾರ್ಯಕರ್ತರ ಆಕ್ರೋಶ ನೋಡಿದ ಪೊಲೀಸರು ಕೂಡ ಮೂಕ ಪ್ರೇಕ್ಷಕರಾದರು.
ಹೊಸ ಬಗೆಯ ಸನ್ಮಾನ ಮತ್ತು ಮಂಗಳಾರತಿ ಮಾಡಿಸಿಕೊಂಡ ಪ್ರೇಕ್ಷಕರು ಸಿನಿಮಾ ಚೆನ್ನಾಗಿಲ್ಲ, ಯಾರೂ ಕೂಡ ಚಿತ್ರ ವೀಕ್ಷಿಸಬೇಡಿ, ನಾವು ಮಾಡಿದ ತಪ್ಪಿಗೆ ನಾಚಿಕೆಯಾಗುತ್ತಿದ್ದು, ನಮ್ಮನ್ನು ಕ್ಷಮಿಸಿ ಎಂದು ಅಲ್ಲಿಂದ ತಲೆ ತಗ್ಗಿಸಿ ಕಾಲ್ಕಿತ್ತಿದ್ದಾರೆ.
Comments are closed.