ಹೈದರಾಬಾದ್: ಕೃಷ್ಣಮೃಗ ಭೇಟೆ ಪ್ರಕರಣದ ಅಪರಾಧಿಯಾಗಿರುವ ನಟ ಸಲ್ಮಾನ್ ಖಾನ್ ರನ್ನು ಕೊಲ್ಲಲು ಕುಖ್ಯಾತ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ಸಂಚು ರೂಪಿಸಿದ್ದು, ಸಲ್ಮಾನ್ ಕೊಲೆಗೆಯ್ಯಲು ಆತ ನೇಮಿಸಿದ್ದ ಬಿಷ್ಣೋಯ್ ಗ್ಯಾಂಗ್ ನ ಸದಸ್ಯ ಸಂಪತ್ ನೆಹ್ರಾನನ್ನು ಪೊಲೀಸರು ಬಂಧಿಸಿದ್ದಾರೆ.
ಹರ್ಯಾಣದ ಎಸ್ ಟಿಎಫ್ ಅಧಿಕಾರಿಗಳು ಸಂಪತ್ ನೆಹ್ರಾನನ್ನು ಬಂಧಿಸಿದ್ದು, ಮುಂಬೈಗೆ ತೆರಳಿದ್ದ ಸಂಪತ್ ನೆಹ್ರಾ ನಟ ಸಲ್ಮಾನ್ ಖಾನ್ ಕುರಿತ ಮಾಹಿತಿ ಕಲೆ ಹಾಕುತ್ತಿದ್ದನಂತೆ. ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಬಳಿಯೇ ಅವರನ್ನು ಕೊಂದು ಬಳಿಕ ವಿದೇಶಕ್ಕೆ ಪರಾರಿಯಾಗಲು ಸಂಪತ್ ರಾಜ್ ಸಂಚು ರೂಪಿಸಿದ್ದನಂತೆ. ಇದಕ್ಕೆ ಪಾತಕಿ ಲಾರೆನ್ಸ್ ಬಿಷ್ಣೋಯ್ ನೆರವು ನೀಡುವುದಾಗಿ ಹೇಳಿದ್ದನಂತೆ.
ಇನ್ನು ಪ್ರಸ್ತುತ ಬಂಧನಕ್ಕೀಡಾಗಿರುವ ಸಂಪತ್ ನೆಹ್ರಾ, ಮೂಲತಃ ರಾಜಸ್ಥಾನದ ಚುರು ಜಿಲ್ಲೆಯ ನಿವಾಸಿಯಂತೆ. ಈತ ಶಾರ್ಪ್ ಶೂಟರ್ ಆಗಿದ್ದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪ್ರಮುಖ ಶೂಟರ್ ಈತ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ನೆಹ್ರಾ ಮತ್ತು ಆತನ ತಂಡದ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಐಎನ್ ಎಲ್ ಡಿ ಮುಖಂಡರನ್ನು ಕೊಲ್ಲುವುದಾಗಿ ಹೇಳಿ 3 ಕೋಟಿ ಹಣ ನೀಡಬೇಕು ಎಂದು ಬೆದರಿಕೆ ಹಾಕಿದ್ದರಂತೆ. ಅಂತೆಯೇ ಚಂಡೀಘಡ ಮೂಲದ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಒಡ್ಡಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಅಲ್ಲದೆ ಈ ಹಿಂದೆ ಕುರುಕ್ಷೇತ್ರದಲ್ಲಿ ಪೊಲೀಸರ ವಶದಲ್ಲಿದ್ದ ಇವರ ಗ್ಯಾಂಗ್ ನ ಸದಸ್ಯನನ್ನು ಗುಂಡಿನ ದಾಳಿ ನಡೆಸಿ ಬಿಡಿಸಿಕೊಂಡು ಎಸ್ ಯುವಿ ಕಾರಿನಲ್ಲಿ ಪರಾರಿಯಾಗಿದ್ದರಂತೆ.
ಬಿಷ್ಣೋಯ್ ಸಮುದಾಯದ ಆರಾಧ್ಯ ದೈವವಾಗಿರುವ ಕೃಷ್ಣಮೃಗಗಳನ್ನು ಭೇಟೆಯಾಡುವ ಮೂಲಕ ನಟ ಸಲ್ಮಾನ್ ಖಾನ್ ಆ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ಜನವರಿಯಲ್ಲಿ ನಟ ಸಲ್ಮಾನ್ ಖಾನ್ ವಿರುದ್ಧ ಕೃಷ್ಣ ಮೃಗ ಭೇಟೆ ಪ್ರಕರಣದಲ್ಲಿ ನಟ ಅಪರಾಧಿ ಎಂದು ಜೈಪುರ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ನಟ ಸಲ್ಮಾನ್ ಖಾನ್ ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದನು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Comments are closed.