ನಿರ್ದೇಶಕ ಕಮ್ ನಟ ಜನಾರ್ದನ್ “ನೀನಿಲ್ಲದ ಮಳೆ’ ಚಿತ್ರದ ನಂತರ ಸದ್ದಿಲ್ಲದೆಯೇ ಒಂದು ಸಿನಿಮಾದಲ್ಲಿ ನಟಿಸಿದ್ದಾಗಿದೆ. ಈಗ ಮತ್ತೂಂದು ಹೊಸ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಅಭಿನಯಿಸುತ್ತಿದ್ದಾರೆ. ಆ ಚಿತ್ರಕ್ಕಿನ್ನೂ ನಾಮಕರಣ ಮಾಡಿಲ್ಲ. ಆದರೆ, ಕಥೆಗೆ ಪೂರಕವಾಗಿರುತ್ತೆ ಅಂದುಕೊಂಡಿರುವ ಜನಾರ್ದನ್, ತಮ್ಮ ಹೊಸ ಚಿತ್ರಕ್ಕೆ “ಮೆಂಟಲ್ ವೆಂಕಟ್’ ಎಂಬ ಹೆಸರಿಡಬೇಕು ಎಂಬ ಯೋಚನೆ ಮಾಡಿದ್ದಾರೆ.
ಅಂದಹಾಗೆ, ಈ ಚಿತ್ರಕ್ಕೆ ಪ್ರಜ್ಜು ಪೂವಯ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಕಥೆ ಕೇಳಿರುವ ಪ್ರಜ್ಜು ಪೂವಯ್ಯ, ನಟಿಸಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದು, ಉಳಿದಂತೆ ಇತರೆ ತಾರಾಬಳಗದ ಆಯ್ಕೆ ಮಾಡುಬೇಕಿದೆ. ಚಿತ್ರವನ್ನು ಜನಾರ್ದನ್ ಹಾಗೂ ಅವರ ಗೆಳೆಯರು ಸೇರಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ “ಮೆಂಟಲ್ ವೆಂಕಟ್’ ಎಂಬ ಶೀರ್ಷಿಕೆಯೇ ಬೇಕಾ? ಎಂಬ ಪ್ರಶ್ನೆಗೆ, ಕ್ಲೈಮ್ಯಾಕ್ಸ್‌ನಲ್ಲಿ ಹೀರೋ ಮೆಂಟಲ್‌ನಂತೆ ವರ್ತಿಸುತ್ತಾನೆ.
ಹಾಗಾಗಿ, ಚಿತ್ರಕ್ಕೆ ಇದೇ ಶೀರ್ಷಿಕೆ ಸೂಕ್ತ ಅಂದುಕೊಂಡಿದ್ದೇನೆ. ಶೀರ್ಷಿಕೆಗೆ ಯಾರಾದರೂ ವಿರೋಧ ವ್ಯಕ್ತಪಡಿಸಿದರೆ ಹೇಗೆ? ಈ ಪ್ರಶ್ನೆಗೆ ಉತ್ತರಿಸುವ ಜನಾರ್ದನ್, ಅದರಲ್ಲೇನಿದೆ. ಈಗಾಗಲೇ ಆ ರೀತಿಯ ಶೀರ್ಷಿಕೆಗಳು ಬಂದಿಲ್ಲವೇ? “ಹುಚ್ಚ ವೆಂಕಟ್’, “ತಿಕ್ಲ ಹುಚ್ಚ ವೆಂಕಟ್’ ಸಿನಿಮಾಗಳೇ ಕಣ್ಣ ಮುಂದಿರುವಾಗ, “ಮೆಂಟಲ್ ವೆಂಕಟ್’ ಶೀರ್ಷಿಕೆ ಇಡುವುದರಲ್ಲಿ ತಪ್ಪೇನಿದೆ ಎನ್ನುತ್ತಾರೆ ಜನಾರ್ದನ್.
ಇದೊಂದು ಲವ್‌ಸ್ಟೋರಿಯಾಗಿದ್ದರೂ, ಫ್ಯಾಮಿಲಿ ಡ್ರಾಮಾ ಇದೆ. ಸಾಕಷ್ಟು ಎಮೋಷನಲ್, ಸೆಂಟಿಮೆಂಟ್ ಕೂಡ ಇಲ್ಲಿದೆ. ಪಕ್ಕಾ ರಾ ಸಬ್ಜೆಕ್ಟ್ ಆಗಿರುವುದರಿಂದ ತಯಾರಿ ಜೋರಾಗಿ ನಡೆಯುತ್ತಿದೆ. ಈ ಬಾರಿ ಹೊಸ ತಂಡ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದೇನೆ.
ಚಿತ್ರದಲ್ಲಿ ತಬಲನಾಣಿ, ಸಾಧುಕೋಕಿಲ ಸೇರಿದಂತೆ ಪ್ರಮುಖ ಪಾತ್ರವೊಂದಕ್ಕೆ ಹಿರಿಯ ಕಲಾವಿದರಾದ ಶ್ರೀನಿವಾಸಮೂರ್ತಿ ಅವರನ್ನೂ ಆಯ್ಕೆ ಮಾಡಿಕೊಳ್ಳುವ ಯೋಚನೆ ಇದೆ. ಚಿತ್ರಕ್ಕೆ ಪ್ರದೀಪ್ ವರ್ಮ ಸಂಗೀತ ನೀಡುತ್ತಿದ್ದಾರೆ. ಚಿತ್ರದಲ್ಲಿ ಒಂದೇ ಹಾಡು ಇರಲಿದೆ. ಇನ್ನು, ಮೋಹನ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಜುಲೈ 15 ರಿಂದ ಬೆಂಗಳೂರಿನಲ್ಲಿ ಒಂದೇ ಹಂತದ ಚಿತ್ರೀಕರಣ ಮಾಡುವ ಯೋಚನೆ ಇದೆ ಎಂಬುದು ಜನಾರ್ದನ್ ಮಾತು.
Comments are closed.