ಮನೋರಂಜನೆ

ಸಿನಿ ರಸಿಕರ ಮನಗೆದ್ದ ಅನಂತನಾಗ್-ರಾಧಿಕಾ ಚೇತನ್ ಅಭಿನಯದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ

Pinterest LinkedIn Tumblr

****

ಬೆಂಗಳೂರು: ಕನ್ನಡದ ಹಿರಿಯ ನಟ ಅನಂತನಾಗ್ ಮತ್ತು ರಾಧಿಕಾ ಚೇತನ್ ಕಾಂಬಿನೇಷನ್ನ, ನರೇಂದ್ರ ಬಾಬು ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರ ಸಿನಿ ರಸಿಕರ ಮನಗೆದ್ದಿದೆ.

ವಿಭಿನ್ನ ಕೆಥೆಯ ಜೊತೆ ಅನಂತನಾಗ್ ಮತ್ತು ರಾಧಿಕಾ ಚೇತನ್ ನಟನೆಯ ಮೂಲಕ ಅಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸಿದ್ದಾರೆ.

ಇಡೀ ಚಿತ್ರ ಆವರಿಸಿಕೊಂಡು ಕಾಡುವುದು ಇಬ್ಬರೇ. ಚಿರತರುಣ ಅನಂತನಾಗ್… ಚಿನಕುರುಳಿ ಚಿರಕನ್ಯೆ ರಾಧಿಕಾ ಚೇತನ್.! ಇಬ್ಬರಿಗಾಗಿ ಹೇಳಿ ಮಾಡಿಸಿದ ಸಿನೆಮಾ. ಅನಂತ್ ಅವರ ಲೀಲಾಜಾಲ ಅಭಿನಯ ಕಣ್ಣುತುಂಬಾ ಆವರಿಸಿದರೆ ರಾಧಿಕಾ ಮನಸ್ಸು ತುಂಬುತ್ತಾರೆ. ರಾಧಿಕಾರ ಉಡುಪು, ಕಾಸ್ಟ್ಯೂಮ್ಸ್ ಸಿನಿಮಾದುದ್ದಕ್ಕೂ ಕಣ್ಮನ ಸೆಳೆಯುತ್ತೆ. ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಒಂಥರಾ ಡಿಫರೆಂಟ್ ಸಿನೆಮಾ. ಸಿದ್ಧ ಸೂತ್ರಗಳಿಂದ ಹೊರತಾದ ನೈಜ ಸಮಾಜದ ಚಿತ್ರಣ. ನಾವೇ ಸೃಷ್ಟಿಸಿಕೊಂಡ ಆಧುನಿಕ ಸ್ವರ್ಗದೊಳಗೆ ನರಕದ ನಿಟ್ಟುಸಿರು. ನಿರ್ದೇಶಕ ಸರಳವಾಗಿ ಕಥೆಹೇಳುತ್ತಾ ಹೋಗುತ್ತಾರೆ…ನಿಮ್ಮ ಪಾಡಿಗೆ ನೀವು ಅರ್ಥೈಸಿಕೊಳ್ಳುತ್ತಾ ಹೋದರೆ…ಸಿನೆಮಾ ಸ್ವಾರಸ್ಯ ಉಳಿಸಿಕೊಳ್ಳುತ್ತದೆ.

ಸಿನೆಮಾವನ್ನು ಕಲರ್ಸ್ ಆಫ್ ಆನೇಕಲ್ ಹೆಸರಿನಲ್ಲಿ ಸುದರ್ಶನ್, ರಾಮಮೂರ್ತಿ ಹಾಗು ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಅವರ ಆಕ್ಮೇ ಮೂವೀಸ್ ಇಂಟರ್ನ್ಯಾಷನಲ್ ಬ್ಯಾನರ್ನಡಿಯಲ್ಲಿ ನಿರ್ಮಿಸಲಾಗಿದೆ.

‘ಸಂತೆಯಲ್ಲಿ ನಿಂತ ಕಬೀರ’ ಎಂಬ ಪ್ರಯೋಗಾತ್ಮಕ ಸಿನಿಮಾ ನೀಡಿದ್ದ ನರೇಂದ್ರ ಬಾಬು ಅವರ ಮೂರನೇ ಚಿತ್ರ ಇದಾಗಿದ್ದು, ಈ ಸಿನೆಮಾ ಮೂಲಕ ಮತ್ತೆ ಗೆಲುವಿನ ನಗೆ ಬೀರಿದ್ದಾರೆ.

ಸ್ವಂತ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇಳಿ ವಯಸ್ಸಿನ ವ್ಯಕ್ತಿಗೆ ಅನಿವಾರ್ಯ ಕಾರಣಗಳಿಂದಾಗಿ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಪರಿಸ್ಥಿತಿ ಅನುಗುಣವಾಗಿ ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಬೇರೆ ವ್ಯಕ್ತಿಯ ಕೆಳಗೆ ಕೆಲಸ ಮಾಡಲು ಮುಂದಾಗುತ್ತಾರೆ. ಕಂಪೆನಿಯಲ್ಲಿ ಕೆಲಸ ಮಾಡುವ ಯಂಗ್ ಜನರೇಷನ್ನ್ನು ಎದುರಿಸುವ ಪ್ರಸಂಗ ಬರುತ್ತದೆ. ಈ ಎಲ್ಲ ತಳಮಳ, ಒತ್ತಡ, ಸವಾಲುಗಳನ್ನು ಕಥಾ ನಾಯಕ ಹೇಗೆ ಎದುರಿಸುತ್ತಾನೆ ಎಂಬುವುದು ಚಿತ್ರದ ತಿರುಳು.

ಹಿಂದೂಸ್ಥಾನಿ ಗಾಯಕ ರಾಮಚಂದ್ರ ಹಡಪದ ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿದ್ದು, ಹಾಡುಗಳಂತೂ ಉತ್ತಮವಾಗಿದ್ದು, ಅರ್ಮಾನ್ ಮಲ್ಲಿಕ್ ಹಾಡಿರುವ ಹಾಡು ಮತ್ತೆ ಮತ್ತೆ ಕೇಳುವಂತೆ ಮಾಡುತ್ತದೆ.

ಪಿಕೆಹೆಚ್ ದಾಸ್ ಅವರ ಛಾಯಾಗ್ರಹಣ ಅತುತ್ತಮವಾಗಿ ಮೂಡಿಬಂದಿದೆ. ದುಬೈಯಲ್ಲಿ ನಡೆದ ಚಿತ್ರೀಕರಣವನ್ನು ಪಿಕೆಹೆಚ್ ದಾಸ್ ಅತ್ಯುತ್ತಮವಾಗಿ ಸೆರೆ ಹಿಡಿದಿದ್ದಾರೆ.

ಈ ಸಿನೆಮಾಕ್ಕೆ ಟೈಟಲ್ ನೀಡಿದ್ದ ಅನಂತ್ ನಾಗ್ ಹೇಳಿಕೊಂಡಂತೆಯೇ ಸಿನೆಮಾ ಅಭಿಮಾನಿಗಳನ್ನು ಕಾಡುತ್ತೆ. ಆ ಮೂಲಕ ಯುವ ಹಾಗು ಹಿರಿಯ ತಲೆಮಾರಿನವರು ಒಟ್ಟಿಗೆ ಕುಟುಂಬ ಸಮೇತರಾಗಿ ಕೂತು ನೋಡುವಂಥ ಸಿನೆಮಾ ಇದಾಗಿದೆ.

Comments are closed.