ಮನೋರಂಜನೆ

ಆರ್‌ಎಸ್‍ಎಸ್ ಕುರಿತ ಚಿತ್ರಕ್ಕೆ ಬಾಹುಬಲಿ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಕಥೆ

Pinterest LinkedIn Tumblr

ಬಾಹುಬಲಿ, ಬಜರಂಗಿ ಭಾಯ್‍ಜಾನ್ ಸಿನಿಮಾಗಳಿಂದ ಬಾಲಿವುಡ್ ಗಮನಸೆಳೆದ ಕಥೆಗಾರ ವಿಜಯೇಂದ್ರ ಪ್ರಸಾದ್. ಸದ್ಯಕ್ಕೆ ಸಾಲುಸಾಲು ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಅವರ ಕೈಲಿ ಕಥೆ ಬರೆಸಿದರೆ ಆ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತದೆಂದು ಬಹಳಷ್ಟು ಮಂದಿ ನಿರ್ದೇಶಕ, ನಿರ್ಮಾಪಕರಿಗೆ ಬಲವಾದ ನಂಬಿಕೆ ಇದೆ.

ಮುಖ್ಯವಾಗಿ ಅಂತಹ ಕಥೆಗಾರರ ಜತೆಗೆ ಕೆಲಸ ಮಾಡಬೇಕೆಂದು ಪ್ರತಿಯೊಬ್ಬರೂ ಆಸಕ್ತಿ ತೋರುತ್ತಾರೆ. ಇದೀಗ ಬಿಜೆಪಿ ಸಹ ಅದೇ ರೀತಿ ಯೋಚಿಸಿದೆ. ಆರ್‌ಎಸ್‍ಎಸ್ ಕುರಿತು ಒಳ್ಳೆಯ ಕಥೆ ಬರೆಸಬೇಕೆಂದು ನಿರ್ಧರಿಸಿದೆ. ಸುಮಾರು 100 ಕೋಟಿ ರೂ. ಬಜೆಟ್‌ನಲ್ಲಿ ಅದ್ದೂರಿಯಾಗಿ ಈ ಸಿನಿಮಾ ನಿರ್ಮಿಸಲು ಬಿಜೆಪಿ ಮುಂದಾಗಿದೆ ಎಂದು ಟೈಮ್ಸ್ ಬಳಗದ ಈಐಸಮಯ್ ವರದಿ ಮಾಡಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‍ಎಸ್) ಇದುವರೆಗೆ ಎದುರಿಸಿದ ಸಮಸ್ಯೆಗಳು, ಸಾಧಿಸಿದ ಗೆಲುವು, ಆರ್‌ಎಸ್‍ಎಸ್ ಉದಾತ್ತ ಗುಣಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರೆ. ಇದಕ್ಕೆ ಸಂಬಂಧಿಸಿದ ಕಥೆಯನ್ನು ಹೆಣೆಯುವ ಜವಾಬ್ದಾರಿಯನ್ನು ವಿಜಯೇಂದ್ರ ಪ್ರಸಾದ್ ಅವರಿಗೆ ಒಪ್ಪಿಸಲಾಗಿದೆ. ಈಗಾಗಲೆ ಕಥೆ ರಚನೆಗೆ ಅವರು ಮುಂದಾಗಿದ್ದಾರಂತೆ.

ಈ ಸಿನಿಮಾದಲ್ಲಿ ಬಾಲಿವುಡ್‍ನ ಹಲವು ಜನಪ್ರಿಯ ತಾರೆಗಳು ಅಭಿನಯಿಸಲಿದ್ದಾರೆ ಎಂದು ಗೊತ್ತಾಗುತ್ತದೆ. ಸದ್ಯಕ್ಕೆ ವಿಜಯೇಂದ್ರ ಪ್ರಸಾದ್ ರಾಣಿ ಲಕ್ಷ್ಮಿಬಾಯಿ ಜೀವನ ಕಥೆಯಾಧಾರಿತ ‘ಮಣಿಕರ್ಣಿಕ’ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಂಗನಾ ರನೌತ್ ಮುಖ್ಯಪಾತ್ರ ಪೋಷಿಸುತ್ತಿದ್ದಾರೆ.

(ವಿಜಯ ಕರ್ನಾಟಕ)

Comments are closed.