
ಹೊಸದಿಲ್ಲಿ : ಇಂಟರ್‌ನೆಟ್ ರೋಮಾಂಚನ ಉಂಟುಮಾಡಿ ತನ್ನ ಕಣ್ಣ ಸನ್ನೆಯ ವಿಡಿಯೋದಿಂದ ಮಾಧ್ಯಮಗಳಲ್ಲಿ ಭಾರೀ ಸಂಚಲನ ಉಂಟು ಮಾಡಿದ್ದ ಪ್ರಿಯಾ ಪ್ರಕಾಶ್ ವಾರಿಯರ್ ಇದೀಗ ಬಾಲಿವುಡ್ ಪ್ರವೇಶಿಸಲಿದ್ದಾರೆ.
ರೋಹಿತ್ ಶೆಟ್ಟಿ ನಿರ್ದೇಶನ ಸಿಂಬಾ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ಜತೆಗೆ ಪ್ರಿಯಾ ನಟಿಸಲಿದ್ದಾಳೆ ಎಂದು ಬಾಲಿವುಡ್ ಲೈಫ್ ಡಾಟ್ ಕಾಮ್ ತಿಳಿಸಿದೆ. ಗೋಲ್‌ಮಾಲ್ ಅಗೇನ್ ಖ್ಯಾತಿಯ ರೋಹಿತ್ ಶೆಟ್ಟಿ ನಿರ್ದೇಶನದ ಈ ಹೊಸ ಚಿತ್ರವನ್ನು ನಿರ್ಮಿಸುವವರು ಕರಣ್ ಜೋಹರ್ ಅವರ ಧರ್ಮಾ ಪ್ರೊಕ್ಷನ್ಸ್ ಸಂಸ್ಥೆ. ಡೆಕ್ಕನ್ ಕ್ರಾನಿಕಲ್ ಕೂಡ ಈ ವಿಷಯವನ್ನು ಬಹಿರಂಗಪಡಿಸಿದೆ.
ಸಿಂಬಾ ಚಿತ್ರದಲ್ಲಿ ನಾಯಕಿಯ ಪಾತ್ರ ವಹಿಸುವ ಪ್ರಿಯಾ ವಾರಿಯರ್‌ಗೆ ಅಷ್ಟೇನೂ ಪ್ರಾಮುಖ್ಯ ಇರುವುದಿಲ್ಲ; ಆದರೂ ಆಕೆ ಇಂಟರ್‌ನೆಟ್ ಸೆನ್ಸೇಶನ್ ಆಗಿರುವ ಕಾರಣಕ್ಕೆ ಚಿತ್ರಕ್ಕೆ ತುಂಬಾ ಬೂಸ್ಟ್ ಸಿಗುವ ನಿರೀಕ್ಷೆ ಇದೆ. ಕರಣ್ ಜೋಹರ್ ನಿರ್ಮಾಣದ ಈ ಚಿತ್ರದಲ್ಲಿ ನಟಿಸುವ ಮೂಲಕ ಪ್ರಿಯಾಗೆ ಬಾಲಿವುಡ್‌ನಲ್ಲಿ ದೊಡ್ಡ ಅವಕಾಶಗಳು ಪ್ರಾಪ್ತವಾಗುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
ಅಂದ ಹಾಗೆ “ಸಿಂಬಾ’ ಚಿತ್ರ ತೆಲುಗು ಸೂಪರ್ ಹಿಟ್ ಚಿತ್ರದ ಅಧಿಕೃತ ರೀಮೇಕ್ ಆಗಿರುತ್ತದೆ. ತೆಲುಗು ಚಿತ್ರದಲ್ಲಿ ಎನ್ ಟಿ ರಾಮ ರಾವ್ ಜೂನಿಯರ್ ಮತ್ತು ಕಾಜಲ್ ಅಗ್ರವಾಲ್ ನಟಿಸಿದ್ದರು.
ಸಿಂಬಾ ಚಿತ್ರದ ಮೂಲಕ ರೋಹಿತ್ ಮತ್ತು ರಣವೀರ್ ಇದೇ ಮೊದಲ ಬಾರಿಗೆ ಒಂದಾಗುತ್ತಿರುವುದು ಗಮನಾರ್ಹವಾಗಿದೆ.
-ಉದಯವಾಣಿ
Comments are closed.