ಮನೋರಂಜನೆ

ಶ್ರೀದೇವಿ ಸಾವಿನ ದಿನ ಬೋನಿ ಕಪೂರ್ ದುಬೈಗೆ ಹೋಗಿದ್ದೇಕೆ? ಬಗೆಹರಿಯದೆ ಉಳಿದ ಸಾವಿನ ರಹಸ್ಯ !

Pinterest LinkedIn Tumblr

ಮುಂಬೈ: ಕಳೆದ ವಾರ ಬಾಲಿವುಡ್ ನ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿಯ ಹಠಾತ್ ನಿಧನ ಇಡೀ ಚಿತ್ರರಂಗ ಮತ್ತು ಅವರ ಅಭಿಮಾನಿಗಳಿಗೆ ಆಘಾತವುಂಟುಮಾಡಿತ್ತು. ಅವರ ಪತಿ ಹಾಗೂ ಚಿತ್ರ ನಿರ್ಮಾಪಕ ಶ್ರೀದೇವಿ ಸಾವಿನ ಕೊನೆಯ ದಿನಗಳ ಕುರಿತು ತಮ್ಮ ಸ್ನೇಹಿತ, ಬಾಲಿವುಡ್ ವ್ಯಾಪಾರ ವಿಶ್ಲೇಷಕ ಕೋಮಲ್ ನಹ್ತಾ ಬಳಿ ಬೇಸರದಿಂದ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಪ್ರೀತಿಯ ಮಡದಿಗೆ ಸಪ್ರೈಸ್ ನೀಡಲು ದುಬೈಗೆ ಹೋಗಿದ್ದ ಕ್ಷಣಗಳು, ಹೊಟೇಲ್ ಗೆ ಹೋಗಿದ್ದು, ಪತ್ನಿಯನ್ನು ಕಂಡ ಕೂಡಲೇ ಒಬ್ಬರಿಗೊಬ್ಬರು ಪ್ರೀತಿಯಿಂದ ಅಪ್ಪಿಕೊಂಡು ಮುತ್ತಿಟ್ಟಿದ್ದು ನಂತರ ಸ್ನಾನ ಮಾಡಲು ಬಾತ್ ರೂಂಗೆ ಹೋದ ಶ್ರೀದೇವಿ ಬಾತ್ ಟಬ್ ನಲ್ಲಿ ನಿಶ್ಚಲವಾಗಿ ಮಲಗಿರುವುದನ್ನು ಕಂಡ ಬೋನಿ ಕಪೂರ್ ಗೆ ಆಘಾತವಾಗಿದ್ದನ್ನು ತಮ್ಮ ಗೆಳಯನ ಬಳಿ ಹೇಳಿಕೊಂಡಿದ್ದಾರೆ.

ಫೆಬ್ರವರಿ 24ರ ಕರಾಳ ರಾತ್ರಿಯ ಕುರಿತು 30 ವರ್ಷದ ತಮ್ಮ ಗೆಳೆಯ ವ್ಯಾಪಾರ ವಿಶ್ಲೇಷಕ ಕೋಮಲ್ ನಹ್ತಾಗೆ ವಿವರಿಸಿದ್ದನ್ನು ಕೋಮಲ್ ತಮ್ಮ ಟ್ವಿಟ್ಟರ್ ಪುಟದಲ್ಲಿ ಯಥಾವತ್ತಾಗಿ ಬರೆದು ಹಂಚಿಕೊಂಡಿದ್ದಾರೆ.

ಫೆಬ್ರವರಿ 24ರಂದು ರಾತ್ರಿ 8 ಗಂಟೆ ಸುಮಾರಿಗೆ ಬಾತ್ ರೂಂಗೆ ಹೋದ ಪತ್ನಿ ಎಷ್ಟು ಹೊತ್ತಾದರೂ ಬಾರದಿದ್ದಾಗ ಬೋನಿ ಕಪೂರ್ ಎದ್ದು ಹೋಗಿ ಬಾಗಿಲು ಕರೆ ಮಾಡುತ್ತಾರೆ. ಮಡದಿಯನ್ನು ಕರೆಯುತ್ತಾರೆ, ಆದರೆ ಅಲ್ಲಿಂದ ಉತ್ತರವಿಲ್ಲ. ಬಾಗಿಲು ಒಳಗಿನಿಂದ ಮುಚ್ಚಿರಲಿಲ್ಲ. ಬಾಗಿಲು ತಳ್ಳಿ ಒಳಹೋಗುತ್ತಾರೆ.

ಬೋನಿ ಕಪೂರ್ ಈ ಎಲ್ಲಾ ವಿಷಯಗಳನ್ನು ತಮಗೆ ಮುಂಬೈಯಲ್ಲಿ ಶ್ರೀದೇವಿಯವರ ಅಂತ್ಯಕ್ರಿಯೆಗೆ ಮುನ್ನ ಹೇಳಿದರು ಎನ್ನುತ್ತಾರೆ. ಬೋನಿ ಕಪೂರ್ ಹೊಟೇಲ್ ಗೆ ಹೋಗಿದ್ದು, ಶ್ರೀದೇವಿ ಜೊತೆ ಮಾತನಾಡಿದ್ದು, ನಂತರ ಅವರು ಬಾತ್ ರೂಂನಲ್ಲಿ ಬಿದ್ದಿದ್ದ ಶ್ರೀದೇವಿಯವರನ್ನು ನೋಡಿದ ಸಮಯದ ಬಗ್ಗೆ ಅನೇಕ ಸಂಶಯ, ಊಹಾಪೋಹಗಳು ಕೇಳಿಬರುತ್ತಿವೆ.

ಈ ಬಗ್ಗೆ ಬರೆದಿರುವ ನಹ್ತಾ, ಬೋನಿ ಕಪೂರ್ ಹೊಟೇಲ್ ಗೆ ಹೋಗಿ ಶ್ರೀದೇವಿ ಜೊತೆ ಮಾತನಾಡಿ ಸುಮಾರು ಎರಡು ಗಂಟೆ ಕಳೆದ ನಂತರ ಈ ಘಟನೆ ನಡೆದಿದೆ. ದುಬೈಯ ಜುಮೈರಾ ಎಮಿರೇಟ್ಸ್ ಟವರ್ಸ್ ಹೊಟೇಲ್ ನ ಕೊಠಡಿ ಸಂಖ್ಯೆ 2201ರಲ್ಲಿ ಶ್ರೀದೇವಿ ಕೊನೆಯುಸಿರೆಳೆದಿದ್ದು ಎನ್ನುತ್ತಾರೆ ನಹ್ತಾ.

ಹೀಗೆ ಬೋನಿ ಕಪೂರ್ ಆಶ್ಚರ್ಯವಾಗಿ ಪತ್ನಿಯನ್ನು ಭೇಟಿ ಮಾಡಲು ಹೋಗಿರುವುದನ್ನು ಇಷ್ಟಪಟ್ಟಿರುವ ನಹ್ತಾ 1994ರಲ್ಲಿ ಕೂಡ ಶ್ರೀದೇವಿಯನ್ನು ಬೆಂಗಳೂರಿನಲ್ಲಿ ಭೇಟಿ ಮಾಡಲು ಬೋನಿ ಕಪೂರ್ ಹೀಗೆ ಹೋಗಿದ್ದರು ಎಂದು ಮೆಲುಕು ಹಾಕುತ್ತಾರೆ.

ಬೋನಿಯವರು ನಹ್ತಾಗೆ ತಮ್ಮ ಪತ್ನಿಯ ಅಂತಿಮ ದಿನದ ಬಗ್ಗೆ ವಿವರಿಸಿದ್ದು ಹೀಗೆ: ಫೆಬ್ರವರಿ 24ರಂದು ಬೆಳಗ್ಗೆ ನಾನು ಶ್ರೀದೇವಿಯಲ್ಲಿ ಫೋನ್ ಮೂಲಕ ಮಾತನಾಡಿದ್ದೆ. ಆಗ ಶ್ರೀದೇವಿ, ಪಾಪಾ(ಶ್ರೀದೇವಿ ಪತಿಯನ್ನು ಸಂಬೋಧಿಸುತ್ತಿದ್ದುದು) ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಆಗ ನಾನು ಕೂಡ ಆಕೆಗೆ ನಿನ್ನನ್ನು ಕೂಡ ತುಂಬಾ ಮಿಸ್ ಮಾಡ್ಕೊಳ್ಳುತ್ತಿದ್ದೇನೆ ಜಾನ್(ಶ್ರೀದೇವಿಯನ್ನು ಬೋನಿ ಪ್ರೀತಿಯಿಂದ ಕರೆಯುವುದು) ಎಂದು ಹೇಳಿದ್ದೆ. ಆದರೆ ಸಾಯಂಕಾಲ ದುಬೈಗೆ ಬರುತ್ತೇನೆ ಎಂದು ಹೇಳಿರಲಿಲ್ಲ. ಮಗಳು ಜಾಹ್ನವಿ ನನಗೆ ಹೋಗುವಂತೆ ಪ್ರೇರೇಪಿಸಿದಳು. ಯಾಕೆಂದರೆ ಶ್ರೀದೇವಿ ಒಬ್ಬಳೇ ಇರುವುದು ಬೇಡ ಎಂಬುದು ಅವಳ ಅನಿಸಿಕೆಯಾಗಿತ್ತು. ಪಾಸ್ ಪೋರ್ಟ್ ಮತ್ತು ಇನ್ನಿತರ ಅಗತ್ಯ ದಾಖಲೆಗಳನ್ನು ಶ್ರೀದೇವಿ ಕಳೆದುಕೊಂಡರೆ ಎಂಬ ಭೀತಿ ಅವಳದ್ದು. ಹಾಗಾಗಿ ನನಗೆ ಹೋಗುವಂತೆ ಹೇಳಿದಳು ಎಂದು ಬೋನಿ ಕಪೂರ್ ಹೇಳಿಕೊಂಡಿದ್ದಾರೆ.

ಕಳೆದ 24 ವರ್ಷಗಳಲ್ಲಿ ಇಬ್ಬರೂ ಒಟ್ಟಿಗೆ ವಿದೇಶಕ್ಕೆ ಪ್ರಯಾಣಿಸದಿದ್ದುದು ಎರಡೇ ಸಲವಂತೆ. ಅದು ನ್ಯೂ ಜರ್ಸಿ ಮತ್ತು ವ್ಯಾಂಕೋವರ್ ಗೆ ಚಿತ್ರದ ಶೂಟಿಂಗ್ ಗೆ ಹೋಗಿದ್ದ ಸಂದರ್ಭದಲ್ಲಿ.

ಆ ಸಂದರ್ಭದಲ್ಲಿ ಬೋನಿ ಕಪೂರ್ ಹೋಗದಿದ್ದರೂ ಕೂಡ ಅವರ ಸ್ನೇಹಿತರ ಪತ್ನಿ ಜೊತೆಗಿದ್ದರಂತೆ. ವಿದೇಶದಲ್ಲಿ ಇದೇ ಮೊದಲ ಬಾರಿ ಕಳೆದ ಫೆಬ್ರವರಿ 22 ಮತ್ತು 23ರಂದು ಎರಡು ದಿನಗಳ ಕಾಲ ಒಬ್ಬರೇ ಇದ್ದಿದ್ದು ಮೊದಲ ಸಲವಂತೆ.

ಬೋನಿ, ಶ್ರೀದೇವಿ ಮತ್ತು ಕಿರಿಯ ಮಗಳು ಖುಷಿ ದುಬೈಯಲ್ಲಿ ಸಂಬಂಧಿಕರ ಮದುವೆಗೆಂದು ಹೋಗಿದ್ದರು. ಫೆಬ್ರವರಿ 20ರಂದು ಮದುವೆ ಕಾರ್ಯಕ್ರಮ ಮುಗಿದು ಬೋನಿ ಕಪೂರ್ ಮತ್ತು ಖುಷಿ ಮುಖ್ಯವಾದ ಕೆಲಸವಿದೆಯೆಂದು ಭಾರತಕ್ಕೆ ವಾಪಸಾಗಿದ್ದರು. ಹಿರಿಯ ಮಗಳು ಜಾಹ್ನವಿಗೆ ಸ್ವಲ್ಪ ಶಾಪಿಂಗ್ ಮಾಡಬೇಕೆಂದು ಶ್ರೀದೇವಿ ಅಲ್ಲಿಯೇ ಹೊಟೇಲೊಂದರಲ್ಲಿ ಉಳಿದುಕೊಂಡಿದ್ದರು.

ಫೆಬ್ರವರಿ 24ರಂದು ಅಪರಾಹ್ನ 3.30ರ ವಿಮಾನದಲ್ಲಿ ಬೋನಿ ಕಪೂರ್ ಮುಂಬೈಯಿಂದ ದುಬೈಗೆ ಹೋಗಿದ್ದರು. ಸಾಯಂಕಾಲ 6.20ರ ಸುಮಾರಿಗೆ ದುಬೈ ಕಾಲಮಾನ ಪ್ರಕಾರ ಹೊಟೇಲ್ ಗೆ ತಲುಪಿದ್ದರು. ಹೊಟೇಲ್ ಗೆ ಹೋಗಿ ಸುಮಾರು 15 ನಿಮಿಷಗಳ ಕಾಲ ಮಾತುಕತೆ ನಡೆಸಿದ ನಂತರ ಬೋನಿ ಕಪೂರ್ ಹೋಗಿ ಸ್ನಾನ ಮಾಡಿಕೊಂಡು ಬಂದರು. ಶ್ರೀದೇವಿಗೆ ಸ್ನಾನ ಮಾಡಿಕೊಂಡು ಬರುವಂತೆ ನಂತರ ರಾತ್ರಿಯ ಔತಣಕೂಟಕ್ಕೆ ಹೊರಗೆ ಹೋಗೋಣವೆಂದು ಬೋನಿ ಕಪೂರ್ ಹೇಳಿದ್ದರು.

ಪತಿಯ ಸೂಚನೆಯಂತೆ ಶ್ರೀದೇವಿ ಸ್ನಾನಕ್ಕೆಂದು ಬಾತ್ ರೂಂಗೆ ಹೋದರು. ಆಗ ಬೋನಿ ಕಪೂರ್ ಲಿವಿಂಗ್ ರೂಂನಲ್ಲಿ ಕುಳಿತು ಟಿವಿಯಲ್ಲಿ ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. 15-20 ನಿಮಿಷ ಕಳೆದ ನಂತರ ಬೋನಿ ಕಪೂರ್ ಗೆ ಬಾತ್ ರೂಂಗೆ ಹೋದ ಪತ್ನಿ ಇನ್ನೂ ಏಕೆ ಬಂದಿಲ್ಲ. ಇವತ್ತು ಶನಿವಾರ ಬೇರೆ, ರಾತ್ರಿ ತುಂಬಾ ತಡವಾದರೆ ಹೊಟೇಲ್ ಗಳೆಲ್ಲಾ ಜನರಿಂದ ತುಂಬಿರುತ್ತವೆ ಎಂದು ಭಾವಿಸತೊಡಗಿದರು.

ಲಿವಿಂಗ್ ರೂಂನಲ್ಲಿದ್ದುಕೊಂಡೇ ಜೋರಾಗಿ ಶ್ರೀದೇವಿಯನ್ನು ಎರಡು ಬಾರಿ ಕರೆಯುತ್ತಾರೆ. ಆದರೆ ಪ್ರತಿಕ್ರಿಯೆ ಬರಲಿಲ್ಲ. ಟಿ.ವಿಯ ಶಬ್ದ ಕಡಿಮೆ ಮಾಡಿ ಮತ್ತೆ ಕೂಗುತ್ತಾರೆ, ಊಹುಂ ಉತ್ತರವಿಲ್ಲ. ನಂತರ ಬೆಡ್ ರೂಂಗೆ ಹೋಗಿ ಬಾತ್ ರೂಂ ಬಾಗಿಲು ಬಡಿಯುತ್ತಾರೆ. ಮತ್ತೆ ಶ್ರೀದೇವಿಯನ್ನು ಕರೆಯುತ್ತಾರೆ. ಆದರೆ ಬೋನಿ ಕಪೂರ್ ಗೆ ಸಂಶಯ ಬರುವುದೇ ಇಲ್ಲ, ಒಳಗಿನಿಂದ ನಳ್ಳಿ ನೀರಿನ ಶಬ್ದ ಕೇಳಿಸುತ್ತಿರುತ್ತದೆ. ಮತ್ತೆ ಪತ್ನಿಯನ್ನು ಕರೆಯುತ್ತಾರೆ, ಉತ್ತರವಿಲ್ಲ.

ಆಗ ಬಾಗಿಲನ್ನು ತಳ್ಳಿ ಒಳ ನೋಡುತ್ತಾರೆ. ಅವರು ಊಹಿಸದೇ ಇದ್ದ ದೃಶ್ಯವನ್ನು ನೋಡುತ್ತಾರೆ. ಬಾತ್ ಟಬ್ ನ ತುಂಬ ನೀರು ತುಂಬಿರುತ್ತದೆ. ಒಂದು ಸ್ವಲ್ಪವೂ ನೀರು ಹೊರಬಂದಿರುವುದಿಲ್ಲ. ಅದರಲ್ಲಿ ಶ್ರೀದೇವಿ ಅಲುಗಾಡದೆ ಅಂಗಾತವಾಗಿ ಮಲಗಿದ್ದಾರೆ.

ಬೋನಿ ಕಪೂರ್ ಗೆ ಆಕಾಶವೇ ಕಳಚಿ ಬಿದ್ದಂತಹ ಅನುಭವ. ತನ್ನ ಜೀವ ನಿಶ್ಚಲವಾಗಿ ಮಲಗಿದೆ. ಶ್ರೀದೇವಿ ಬಾತ್ ಟಬ್ ಗೆ ಬಿದ್ದ ಮೇಲೆ ಪ್ರಜ್ಞೆ ಕಳೆದುಕೊಂಡರೇ ಅಥವಾ ಪ್ರಜ್ಞೆ ಕಳೆದುಕೊಂಡು ನಂತರ ಬಿದ್ದರೇ ಎಂದು ಯಾರಿಗೂ ಗೊತ್ತಿಲ್ಲ. ಸ್ವತಃ ಬೋನಿ ಕಪೂರ್ ಗೆ ಕೂಡ. ಆದರೆ ಸಾಯುವ ಮುನ್ನ ಶ್ರೀದೇವಿ ಒಂದು ಚೂರೂ ನೋವು, ಸಂಕಟ ಅನುಭವಿಸಲಿಲ್ಲವೇ ಎಂಬ ಅನುಮಾನವಿದೆ. ಏಕೆಂದರೆ ಪರಿತಪಿಸುತ್ತಿದ್ದರೆ ನೋವಿನಿಂದ ಕೈಕಾಲುಗಳನ್ನು ಅಲ್ಲಾಡಿಸಿ ನೀರು ಬಾತ್ ಟಬ್ ನಿಂದ ಹೊರಗೆ ಸುರಿಯುತ್ತಿತ್ತು. ಆದರೆ ಟಬ್ ನ ಹೊರಗೆ ನೆಲದ ಮೇಲೆ ಒಂದು ಸ್ವಲ್ಪವೂ ನೀರು ಬಿದ್ದಿರಲಿಲ್ಲ ಎನ್ನುತ್ತಾರೆ ಬೋನಿ ಕಪೂರ್.
ಶ್ರೀದೇವಿ ಸಾವಿನ ರಹಸ್ಯ ಬಗೆಹರಿಯದೆ ಉಳಿದಿದೆ.

Comments are closed.