ಮನೋರಂಜನೆ

ಬಾಲಿವುಡ್​ ಖ್ಯಾತ ಹಿರಿಯ ನಟಿ ಶ್ರೀದೇವಿ ಇನ್ನಿಲ್ಲ !

Pinterest LinkedIn Tumblr

ದುಬೈ: ಬಾಲಿವುಡ್’ನ ಖ್ಯಾತ ಹಿರಿಯ ನಟಿ, ಮೋಹಕತಾರೆ ಎಂದೇ ಖ್ಯಾತರಾಗಿದ್ದ ಶ್ರೀದೇವಿ ಶನಿವಾರ ತಡರಾತ್ರಿ ದುಬೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

54 ವರ್ಷದ ಶ್ರೀದೇವಿ ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ ಸಿನೆಮಾಗಳಲ್ಲಿ ನಟಿಸುವ ಮೂಲಕ ಎಲ್ಲರ ಮನೆಮಾತಾಗಿದ್ದರು. ತಮ್ಮ ಸಂಬಂಧಿಕರ ಮದುವೆಯ ಹಿನ್ನೆಲೆಯಲ್ಲಿ ಪತಿ ಬೋನಿ ಕಪೂರ್ ಹಾಗು ಕಿರಿಯ ಮಗಳು ಖುಷಿ ಜೊತೆಗೆ ಯುಎಇಯ ರಾಸಲ್ ಖೈಮಾಗೆ ಆಗಮಿಸಿದ್ದ ಶ್ರೀದೇವಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಶ್ರೀದೇವಿ ಭಾರತ ಚಲನಚಿತ್ರರಂಗ ಕಂಡ ಪ್ರತಿಭಾನ್ವಿತ ನಟಿಯರಲ್ಲೊಬ್ಬರು. ದಕ್ಷಿಣ ಮತ್ತು ಉತ್ತರ ಭಾರತ ಚಿತ್ರರಂಗಗಳೆರಡರಲ್ಲೂ ಪ್ರತಿಭೆ ಮತ್ತು ಜನಪ್ರಿಯತೆ ಗಳಿಸಿದ ಅಪೂರ್ವ ಕಲಾವಿದೆಯಾಗಿ ಮೆರೆದಿದ್ದರು.

ಶ್ರೀದೇವಿ ಆಗಸ್ಟ್ 13, 1963ರಲ್ಲಿ ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದು, ನಾಲ್ಕು ವರ್ಷದವಳಾಗಿದ್ದಾಗಲೇ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ.

ಭಕ್ತ ಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಹಾಗೂ ಹೆಣ್ಣು ಸಂಸಾರದ ಕಣ್ಣು ಎಂಬ ಕನ್ನಡ ಚಿತ್ರಗಳಲ್ಲಿಯೂ ಶ್ರೀದೇವಿ ನಟಿಸಿದ್ದಾರೆ.

‘ಪದ್ಮಶ್ರೀ’ ಸೇರಿ ಹಲವು ಪ್ರಶಸ್ತಿ, ಪುರಸ್ಕಾರಗಳು ಇವರ ಮುಡಿಗೆ ಸೇರಿವೆ. ಬೋನಿ ಕಪೂರ್ ಅವರನ್ನು ವರಿಸಿದ ಶ್ರೀದೇವಿ ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರು.

1975ರ ಸಮಯದಲ್ಲಿ ತೆರೆಕಂಡ ಪ್ರಖ್ಯಾತ ಹಿಂದಿ ಚಲನಚಿತ್ರ ‘ಜೂಲಿ’ಯಲ್ಲಿಯೂ ಅವರು ಬಾಲನಟಿಯಾಗಿ ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿಯೂ ಅವರು ಬಾಲನಟಿಯಾಗಿ ಭಕ್ತ ಕುಂಬಾರ, ಬಾಲಭಾರತ, ಸಂಪೂರ್ಣ ರಾಮಾಯಣ, ಯಶೋಧ ಕೃಷ್ಣ ಚಿತ್ರಗಳಲ್ಲಿ ನಟಿಸಿದ್ದಲ್ಲದೆ ಹೆಣ್ಣು ಸಂಸಾರದ ಕಣ್ಣು ಎಂಬ ಚಿತ್ರದಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ನಟಿಸಿದ್ದರು. ರಜನೀಕಾಂತ್, ಅಂಬರೀಷ್ ಮುಂತಾದವರು ನಟಿಸಿದ್ದ ‘ಪ್ರಿಯಾ’ ಎಂಬ ಕನ್ನಡ ಚಿತ್ರದಲ್ಲಿ ಅವರು ನಾಯಕಿಯಾಗಿಯೂ ಅಭಿನಯಿಸಿದ್ದರು.

ಮುಂದೆ ಶ್ರೀದೇವಿ ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ಚಿತ್ರಗಳಾದ ಮೂಂಡ್ರು ಮುಡಿಚ್ಚು, ಪಡಿನಾರು ವಯದಿನಿಲೆ, ಸಿಗಪ್ಪು ರೋಜಾಕ್ಕಳ್, ಮೀನ್ಡುಂ ಕೋಕಿಲಾ, ಮೂನ್ರಾಂ ಪಿರೈ, ವರುಮಯಿನ್ ನಿರಂ ಸಿವಪ್ಪು, ಪ್ರೆಮಾಭಿಷೇಕಂ, ಆಖರೀ ಪೋರಾಟಂ, ಜಗದೇಕ ವೀರುಡು ಅತಿಲೋಕ ಸುಂದರಿ, ಕ್ಷಣಂ ಕ್ಷಣಂ ಮುಂತಾದ ಅನೇಕ ಚಿತ್ರಗಳಲ್ಲಿ ಅಭಿನಯಿಸಿ ಪ್ರತಿಭೆ ಮತ್ತು ಜನಪ್ರಿಯತೆ ಎರಡರಲ್ಲೂ ತಾವೊಬ್ಬ ಮಹತ್ವದ ನಟಿ ಎಂದು ಸಾಬೀತು ಪಡಿಸಿದ್ದರು.

ಹಿಂದಿ ಚಿತ್ರರಂಗದಲ್ಲಿ ಸೊಲ ಸಾವನ್, ಹಿಮ್ಮತ್ ವಾಲಾ, ಮಾವಾಲಿ, ತೋಹ್ಫ, ಮಾಸ್ಟರ್ಜಿ, ಕರ್ಮ, ಮಿಸ್ಟರ್ ಇಂಡಿಯಾ, ವಕ್ತ್ ಕಿ ಆವಾಜ್, ಚಾಂದನಿ, ಸದ್ಮಾ, ನಗೀನ, ಚಾಲ್ ಬಾಜ್, ಲಮ್ಹೆ, ಖುದಾ ಗವಾಹ್, ಗುಮ್ರಾಹ್, ಲಾಡ್ಲಾ, ಜುದಾಯಿ ಮುಂತಾದ ಹಿಟ್ ಚಿತ್ರಗಳಲ್ಲಿ ತಮ್ಮ ಪ್ರತಿಭೆ, ಯಶಸ್ಸುಗಳಿಂದ ರಾರಾಜಿಸಿದ್ದರು. ಹಿರಿಯ ನಿರ್ಮಾಪಕ ಬೋನಿ ಕಫೂರ್ ಅವರನ್ನು ವರಿಸಿದ ಶ್ರೀದೇವಿ ಅವರು 1997ರ ನಂತರದಲ್ಲಿ ಸುಮಾರು ಹದಿನೈದು ವರ್ಷಗಳ ನಂತರದಲ್ಲಿ 2012ರ ವರ್ಷದಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಎಂಬ ಯಶಸ್ವೀ ಚಿತ್ರದಲ್ಲಿ ತಮ್ಮ ಸುಂದರ ಅಭಿನಯದೊಂದಿಗೆ ಮೋಡಿ ಮಾಡಿ ಮತ್ತೊಮ್ಮೆ ತಾನೆಷ್ಟು ಪ್ರತಿಭಾವಂತೆ ಎಂದು ಸಾಬೀತುಪಡಿಸಿದರು.

ಹಾಸ್ಯ, ಸಂವೇದನೆ, ಭಾವನಾತ್ಮಕ, ಸಾಹಸ, ಪ್ರೇಮ, ಪ್ರಣಯ, ನೃತ್ಯ ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಶ್ರೀದೇವಿ ಅವರಷ್ಟು ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರರಾದ ಕಲಾವಿದೆಯರು ವಿರಳ. ಶ್ರೀದೇವಿ ನಿಧನಕ್ಕೆ ಬಾಲಿವುಡ್ ಕಂಬನಿ ಮಿಡಿದಿದೆ.

Comments are closed.