ಮನೋರಂಜನೆ

ರಿಯಾಲಿಟಿ ಶೋವೊಂದರಲ್ಲಿ ಅಪ್ರಾಪ್ತೆಗೆ ಚುಂಬಿಸಿದ ಹಾಡುಗಾರ ಪಾಪೋನ್‌ ! ಲೈಂಗಿಕ ಕಿರುಕುಳ ಆರೋಪದ ದೂರು ದಾಖಲು

Pinterest LinkedIn Tumblr

ಮುಂಬೈ: ರಿಯಾಲಿಟಿ ಶೋವೊಂದರಲ್ಲಿ ಜಡ್ಜ್‌ ಆಗಿದ್ದ ಖ್ಯಾತ ಸಿಂಗರ್‌ ಮತ್ತು ಕಂಪೋಸರ್‌ ಪಾಪೋನ್‌ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ದೂರು ದಾಖಲಾಗಿದೆ.

ಮ್ಯೂಸಿಕ್‌ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳೊಂದಿಗೆ ಹೋಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವೇಳೆ ಪಾಪೋನ್‌, ಅಪ್ರಾಪ್ತ ಸ್ಪರ್ಧಿಯ ಮುಖಕ್ಕೆ ಬಣ್ಣವನ್ನು ಹಚ್ಚಿ ನಂತರ ಆಕೆಯ ತುಟಿಗೆ ಚುಂಬಿಸಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಸುಪ್ರೀಂ ಕೋರ್ಟ್‌ ವಕೀಲೆ ರುನಾ ಭುಯನ್‌ ಎಂಬವರು ಮಕ್ಕಳ ಹಕ್ಕುಗಳ ರಕ್ಷಣಾ ರಾಷ್ಟ್ರೀಯ ಆಯೋಗಕ್ಕೆ ಪೊಕ್ಸೊ ಅಡಿಯಲ್ಲಿ ಪಾಪೋನ್‌ ವಿರುದ್ಧ ಲೈಂಗಿಕ ದೌರ್ಜನ್ಯದ ದೂರನ್ನು ದಾಖಲಿಸಿದ್ದಾರೆ.

ವಿಡಿಯೋ ನೋಡಿ ಸಿಂಗರ್‌ನ ನಡವಳಿಕೆ ಕುರಿತು ನನಗೆ ಗಾಬರಿಯಾಗಿದೆ. ಅಪ್ರಾಪ್ತೆಯ ಮುಖಕ್ಕೆ ಬಣ್ಣಹಚ್ಚಿ ಈ ರೀತಿ ನಡೆದುಕೊಂಡಿರುವುದು ಸರಿಯಲ್ಲ. ಭಾರತದ ಎಲ್ಲ ರಿಯಾಲಿಟಿ ಶೋ ಗಳಲ್ಲಿಯೂ ಅಪ್ರಾಪ್ತ ಮಕ್ಕಳ ರಕ್ಷಣೆ ಮತ್ತು ಭದ್ರತೆಗೆ ಕೆಲ ಮಾರ್ಗದರ್ಶಿ ಸೂತ್ರಗಳನ್ನು ತರಬೇಕು ಎಂದು ತನ್ನ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಖಾಸಗಿ ಚಾನೆಲ್‌ವೊಂದರ ವಾಯ್ಸ್‌ ಇಂಡಿಯಾ ಕಿಡ್ಸ್‌ ಕಾರ್ಯಕ್ರಮದಲ್ಲಿ ಸಿಂಗರ್‌ ಶಾನ್‌ ಮತ್ತು ಹಿಮ್ಮೇಶ್‌ ರೇಶಾಮಿಯಾ ಜತೆ ಪಾಪೋನ್‌ ಕೂಡ ಜಡ್ಜ್‌ ಆಗಿದ್ದಾರೆ. ಮಂಗಳವಾರ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಲೈವ್‌ ಬಂದಿದ್ದ ಪಾಪೋನ್‌, ಸ್ಟೇಜ್‌ನಲ್ಲಿ ಹೋಲಿಯನ್ನು ಆಚರಿಸುವ ವೇಳೆ ಆಕೆಯ ಮುಖಕ್ಕೆ ಬಣ್ಣ ಹಚ್ಚಿ ಚುಂಬಿಸಿದ್ದರು.

ಬರ್ಫಿ, ಬೆಫಿಕ್ರೆ, ಸುಲ್ತಾನ್‌ ಮತ್ತು ದಮ್‌ ಲಗಾ ಕೇ ಹೈಶಾ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಹಾಡಿರುವ ಪಾಪೋನ್‌ ಪ್ರಕರಣ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಇನ್ನು ಪೊಲೀಸರು ಆತನ ವಿರುದ್ಧ ದೂರನ್ನು ದಾಖಲಿಸಿಕೊಳ್ಳಬೇಕಿದೆ.

ಈ ಕುರಿತು ಬಾಲಕಿಯ ತಂದೆ ಮಾತನಾಡಿ, ಪಾಪೋನ್‌ ನನ್ನ ಮಗಳಿಗೆ ತಂದೆಯ ಸಮಾನ. ಅವಳ ಕನಸುಗಳಿಗೆ ಅವರು ಪ್ರೋತ್ಸಾಹ ನೀಡಿ ಮಾರ್ಗದರ್ಶನ ನೀಡಿದ್ದಾರೆ. ವಿಡಿಯೋದಲ್ಲಿ ನೀವು ನೋಡಿರುವುದು ಕೇವಲ ಆಕಸ್ಮಿಕ. ಉದ್ದೇಶಪೂರ್ವಕವಲ್ಲ. ಮಾಧ್ಯಮಗಳು ಇದನ್ನು ಇಲ್ಲಿಗೆ ಬಿಡಿ, ಮುಂದುವರಿಸಬಾರದು ಎಂದು ಮನವಿ ಮಾಡಿದ್ದಾರೆ.

ಜವಾಬ್ದಾರಿಯುತ ಚಾನಲ್‌ ಆಗಿ ನಾವು ಸಂಕಷ್ಟದಲ್ಲಿರುವವರ ಪರ ನಿಲ್ಲುತ್ತೇವೆ ಎಂದು ಹಿಂದಿ ಖಾಸಗಿ ವಾಹಿನಿ ಹೇಳಿದೆ.

Comments are closed.