ಮನೋರಂಜನೆ

ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ನವರಸ ನಾಯಕ ಜಗ್ಗೇಶ್ ತಿರುಗೇಟು !

Pinterest LinkedIn Tumblr

ಬೆಂಗಳೂರು: ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಕನ್ನಡ ಯೋಗ್ಯ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಇದೀಗ ನಟ, ಬಿಜೆಪಿ ನಾಯಕ ಜಗ್ಗೇಶ್ ಕೂಡ ಟಾಂಗ್ ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜಗ್ಗೇಶ್, `ಅನಂತಕುಮಾರ್ ಹೆಗ್ಡೆ ವ್ಯಾಕರಣಬದ್ಧ ಕನ್ನಡ ಮಾತಾಡುತ್ತಾರೆ ನನಗಿಷ್ಟವಾದರು. ಅಂದಮಾತ್ರಕ್ಕೆ ಬೇರೆ ಭಾಗದವರಿಗೆ ಕನ್ನಡ ಬರೋಲ್ಲಾ ಎಂದು ಭಾವಿಸದಿರಿ! ಕರ್ನಾಟಕದ ಒಂದೊಂದು ಪ್ರಾಂತ್ಯಕ್ಕೂ ಒಂದು ಸೊಗಡಿದೆ. ಆ ಪ್ರಾಂತ್ಯದ ಅನುಸಾರ ಆ ಸೊಗಡು ಅವರ ನಾಲಿಗೆಯಲ್ಲಿರುತ್ತೆ. ಮಾತಾಡುವಷ್ಟೇ ಬರವಣಿಗೆಯು ಕಲಿಯಿರಿ ಎನ್ನಿ. ಹಂಗಿಸಬೇಡಿ. ನೀವು ಮಂತ್ರಿ ಸಾಮಾನ್ಯನಲ್ಲ ಅಂತ ಹೇಳಿದ್ದಾರೆ.

ಅನಂತಕುಮಾರ್ ಹೆಗ್ಡೆ ಅವರೇ ನಾನು ತುಮಕೂರು ಜಿಲ್ಲೆ ಗ್ರಾಮೀಣ ಭಾಗದವನು ನಮ್ಮದು ಗ್ರಾಮೀಣ ಕನ್ನಡ. ಮನೆಯಲ್ಲಿ ಗ್ರಾಮೀಣ ಒಕ್ಕಲಿಗ ಮನೆತನದ ಭಾಷೆಯೇ ನಾನು ಮಾತಾಡೋದು. ನನ್ನ ಕಲಾಕ್ಷೇತ್ರದಲ್ಲಿ ಎಲ್ಲಾ ವರ್ಗದ ಭಾಷೆ ತಪ್ಪಿಲ್ಲದೆ ಬಳಸುವೆ. ಇದಕ್ಕೆ ವ್ಯಾಕರಣದ ತಾಲೀಮು ಬೇಕು ಅದು ಇದೆ.ನಮ್ಮ ಕನ್ನಡದ ಮಕ್ಕಳಿಗೆ ವ್ಯಾಕರಣಬದ್ಧ ಕನ್ನಡ ಕಲಿಯಲು ಪ್ರೇರೆಪಿಸಿ ಅಂತ ತಿಳಿ ಹೇಳಿದ್ದಾರೆ.

ಹೆಗ್ಡೆ ನೀಡಿದ್ದ ಹೇಳಿಕೆಯೇನು?: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ `ಪ್ರಧಾನ ಮಂತ್ರಿ ಕೌಶಲ್ಯ ಯೋಜನೆ’ ಅಡಿಯಲ್ಲಿ ಆರಂಭಿಸಲಾದ ಉಚಿತ ತಾಂತ್ರಿಕ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ್ದ ಹೆಗ್ಡೆಯವರು, ಇಂಗ್ಲಿಷ್ ಅನ್ನು ಶುದ್ಧ ಕನ್ನಡಕ್ಕೆ ಭಾಷಾಂತರ ಮಾಡುವುದೇ ಇಂದಿನ ಸವಾಲು. ಶುದ್ಧ ಕನ್ನಡ ಯಾರಲ್ಲೂ ಇಲ್ಲ. ಎಲ್ಲೋ ಒಂದು ಕಡೆ ದಕ್ಷಿಣ ಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಪ್ರದೇಶದವರನ್ನು ಹೊರತುಪಡಿಸಿದರೆ ಇತರರಿಗೆ ಸರಿಯಾಗಿ ಕನ್ನಡ ಮಾತನಾಡುವ ಯೋಗ್ಯತೆಯೇ ಇಲ್ಲ ಎನ್ನುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಬೆಂಗಳೂರಿನ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಅಲ್ಲಿನ ಸ್ಥಿತಿ ಚಿಂತಾಜನಕವಾಗಿದೆ. ಬೇಸಿಕ್ ಸ್ಕಿಲ್ ಇಲ್ಲದ ಸಿದ್ದಣ್ಣ ಸರಕಾರ ಇದೆ. ರೀಜನಲ್ ಸ್ಕಿಲ್ ಗ್ಯಾಪ್ ಎನಾಲಿಸಿಸ್ ಮಾಡಲು ಕೇಂದ್ರ ಸರಕಾರ ನಮ್ಮ ರಾಜ್ಯ ಸರಕಾರಕ್ಕೆ ಅನುದಾನ ನೀಡಿದೆ. ಅದನ್ನು ನಮ್ಮ ಸಿದ್ದಣ್ಣ ಸರಕಾರ ಹೇಗೆ ಬಳಸುತ್ತದೋ ನೋಡಬೇಕು. ಬೇಸಿಕ್ ಸ್ಕಿಲ್ ಇಲ್ಲದವರು ಏನು ಮಾಡುತ್ತಾರೆ ಎಂದು ಲೇವಡಿ ಮಾಡಿದ್ದರು. ಹೆಗ್ಡೆ ಹೇಳಿಕೆ ಕುರಿತಂತೆ ಶಾಸಕ ಸುರೇಶ್ ಕುಮಾರ್ ಕೂಡ ವಿರೋಧಿಸಿದ್ದು, ಕೂಡಲೇ ಸಚಿವರು ತಮ್ಮ ಹೇಳಿಕೆ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದರು.

Comments are closed.