ಮನೋರಂಜನೆ

ನಟ ಜೆಕೆಗೆ ಜೋಡಿಯಾದ ಈಕೆ ಯಾರು…?

Pinterest LinkedIn Tumblr

ಬೆಂಗಳೂರು: ನಟ ಜಯರಾಮ್ ಕಾರ್ತಿಕ್ ಸದ್ಯ ಸಾಲು ಸಾಲು ಕನ್ನಡ ಚಿತ್ರಗಳ ಶೂಟಿಂಗ್​ನಲ್ಲಿ ಬಿಜಿಯಾಗಿದ್ದಾರೆ. ಅದೆಲ್ಲದರ ನಡುವೆ ಬಾಲಿವುಡ್​ನಲ್ಲೂ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರವೇ. ಇದೀಗ ಆ ಕುರಿತು ಹೊಸ ಸುದ್ದಿಯೊಂದು ತೇಲಿ ಬಂದಿದೆ. ಜೆಕೆ ನಾಯಕತ್ವದ ಹಿಂದಿ ಚಿತ್ರಕ್ಕೆ ನಾಯಕಿ ಫಿಕ್ಸ್ ಆಗಿದ್ದಾರಂತೆ. ಈಗಾಗಲೇ ಹತ್ತು ಹಲವು ಸಿನಿಮಾ ಮಾಡಿರುವ ಗೌಹರ್ ಖಾನ್ ಜೆಕೆಗೆ ನಾಯಕಿ ಎನ್ನಲಾಗುತ್ತಿದೆ.

ಹಿಂದಿ ಚಿತ್ರರಂಗ ಕಂಡ ಹಿರಿಯ ನಿರ್ದೇಶಕರಲ್ಲೊಬ್ಬರಾದ ರಮೇಶ್ ತಲ್ವಾರ್ ಅವರು ಜೆಕೆ ಸಿನಿಮಾಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ನಾಯಕಿಗಾಗಿ ಹುಡುಕಾಟದಲ್ಲಿದ್ದ ನಿರ್ದೇಶಕರಿಗೆ ಗೌಹರ್ ಸಿಕ್ಕಿದ್ದಾರಂತೆ. 10 ಬಾಲಿವುಡ್ ಮತ್ತು ತಲಾ ಒಂದು ಪಂಜಾಬಿ ಹಾಗೂ ತೆಲುಗು ಸಿನಿಮಾದಲ್ಲಿ ಗೌಹರ್ ನಟಿಸಿದ್ದರು. ‘ಇದೊಂದು ಪಕ್ಕಾ ಕಮರ್ಷಿಯಲ್ ಮಾದರಿಯ ಸಿನಿಮಾ. ಚಿತ್ರದಲ್ಲಿ ನಾನೊಬ್ಬ ದೊಡ್ಡ ಉದ್ಯಮಿ. ನನ್ನ ಪತ್ನಿಯಾಗಿ ಗೌಹರ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಚಿತ್ರದಲ್ಲಿ ಚೂರು ನೆಗೆಟಿವ್ ಶೇಡ್ ಇರುವಂತಹ ಪಾತ್ರ ನನ್ನದು’ ಎಂದು ಮಾಹಿತಿ ನೀಡುತ್ತಾರೆ ಜೆಕೆ.

ಬಾಲಿವುಡ್ ಮಂದಿಗೆ ಜೆಕೆಯನ್ನು ಪರಿಚಯಿಸಿದ್ದು, ‘ಸಿಯಾ ಕೆ ರಾಮ್ ಧಾರಾವಾಹಿ. ರಾಮ-ರಾವಣರ ಪೌರಾಣಿಕ ಕಥಾಹಂದರದ ಧಾರಾವಾಹಿಯಲ್ಲಿ ರಾವಣನ ಪಾತ್ರ ಮಾಡಿ ಕಿರುತೆರೆಯಲ್ಲೂ ಕಮಾಲ್ ಮಾಡಿದ್ದರು. ಅದೇ ರೀತಿ ಇದೀಗ ಸಿನಿಮಾದಲ್ಲೂ ನೆಗೆಟಿವ್ ಶೇಡ್​ನಲ್ಲಿ ಕಾಣಿಸಿಕೊಳ್ಳಲು ಕಾತರರಾಗಿದ್ದಾರೆ. ಈಗಾಗಲೇ ಸಿನಿಮಾದ ಕಥೆಯನ್ನು ಗೌಹರ್ ಕೇಳಿದ್ದಾರಂತೆ. ಕಥೆಯೂ ಇಷ್ಟವಾಗಿದೆಯಂತೆ. ಅಂತಿಮವಾಗಿ ಅವರಿಂದ ಗ್ರೀನ್ ಸಿಗ್ನಲ್ ಬರುವುದೊಂದು ಬಾಕಿ ಉಳಿದಿದೆಯಂತೆ. ಇನ್ನುಳಿದ ಪಾತ್ರ ವರ್ಗವನ್ನು ಆಯ್ದುಕೊಳ್ಳುವಲ್ಲಿ ಚಿತ್ರತಂಡ ಬಿಜಿಯಾಗಿದ್ದು, ಏಪ್ರಿಲ್ ವೇಳೆಗೆ ಸಿನಿಮಾ ಶೂಟಿಂಗ್ ಶುರುವಾಗಲಿದೆ ಎನ್ನಲಾಗುತ್ತಿದೆ.

Comments are closed.