*ಹರೀಶ್ ಬಸವರಾಜ್
ದಕ್ಷಿಣ ಭಾರದ ಖ್ಯಾತ ನಟ ಅರ್ಜುನ್ ಸರ್ಜಾ ತಮ್ಮ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸಲು ‘ಪ್ರೇಮ ಬರಹ’ ಚಿತ್ರ ಮಾಡಿದ್ದಾರೆ. ಇದೊಂದು ಅಪ್ಪಟ ಪ್ರೇಮಕತೆಯ ಸಿನಿಮಾ ಎನ್ನುವುದು ವಿಶೇಷ. ಸಾಮಾನ್ಯವಾಗಿ ಪ್ರೇಮಿಗಳ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆ ಎಲ್ಲ ಸಮಸ್ಯೆಗಳನ್ನೂ ತುಂಬಾ ಗಂಭೀರವಾಗಿ ಪರಿಗಣಿಸಿ ಅವುಗಳಿಗೆ ಪರಿಹಾರ ಹುಡುಕುತ್ತಾರೆ. ಪ್ರೇಮ ಬರಹದಲ್ಲೂ ಅಂತಹ ಸಮಸ್ಯೆಗಳಿವೆ. ಆದರೆ ನಿರ್ದೇಶಕ ಅರ್ಜುನ್ ಸರ್ಜಾ ಅವುಗಳನ್ನು ಸೀರಿಯಸ್ ಆಗಿ ತೆಗೆದುಕೊಂಡಂತೆ ಕಾಣುವುದಿಲ್ಲ.
1999ರಲ್ಲಿ ನಡೆಯುವ ಕಥೆ ಸಿನಿಮಾದಲ್ಲಿದೆ. ನಾಯಕ ಸಂಜಯ್ (ಚಂದನ್) ಮತ್ತು ಮಧು (ಐಶ್ವರ್ಯಾ) ಇಬ್ಬರೂ ವಾಹಿನಿಯೊಂದರ ಪತ್ರಕರ್ತರು. ಕಾರ್ಗಿಲ್ ಯುದ್ಧವನ್ನು ಲೈವ್ ಕವರೇಜ್ ಮಾಡಲು ತೆರಳಿದಾಗ ಪ್ರೇಮಾಂಕುರ ಆಗುತ್ತದೆ. ವಿಪರ್ಯಾಸವೆಂದರೆ ಮಧುಗೆ ತಮ್ಮ ತಂದೆಯ ಆತ್ಮೀಯ ಗೆಳಯನ ಮಗನೊಂದಿಗೆ ಎಂಗೇಜ್‌ಮೆಂಟ್ ಆಗಿರುತ್ತದೆ. ಕಾರ್ಗಿಲ್‌ನಿಂದ ಬಂದ ತಕ್ಷಣ ಮದುವೆಗೂ ಸಿದ್ಧತೆ ನಡೆಯುತ್ತದೆ. ಇದು ಗೊತ್ತಾಗಿ ಮಧುವನ್ನು ದೂರವಿಡಲು ಚಂದನ್ ಆರಂಭಿಸುತ್ತಾನೆ. ಈ ಪ್ರೇಮಿಗಳು ಒಂದಾಗುತ್ತಾರಾ ಅಥವಾ ಇಲ್ಲವಾ ಎನ್ನುವುದೇ ಸಿನಿಮಾ.
ತೀರಾ ಸೀದಾ ಸಾದಾ ಸ್ಟೋರಿ ಸಿನಿಮಾದಲ್ಲಿದೆ. ಹಾಗಾಗಿ ಚಿತ್ರಕತೆಯಲ್ಲಿ ಹೆಚ್ಚು ಕೆಲಸವಾಗಬೇಕಿತ್ತು. ಚಿತ್ರದ ಮೇಕಿಂಗ್ ಮತ್ತು ನಿರ್ದೇಶನದಿಂದಾಗಿ ಇಷ್ಟವಾಗುವ ನಿರ್ದೇಶಕರು, ಚಿತ್ರಕಥೆ ಹೆಣೆಯುವಲ್ಲಿ ಸೋತಿದ್ದಾರೆ. ಸಿನಿಮಾ ಎನ್ನವುದು ನಿರ್ದೇಶಕರ ಮಾಧ್ಯಮ. ಹಾಗಾಗಿ, ನಿರ್ದೇಶಕರಾಗಿ ಅರ್ಜುನ್ ಇಷ್ಟವಾಗುತ್ತಾರೆ. ತಮ್ಮ ಹೊಸತನದ ಆಲೋಚನೆಯಿಂದಾಗಿ ತಮ್ಮ ಪುತ್ರಿಯನ್ನು ನಿರ್ದೇಶಕರು ಅದ್ಧೂರಿಯಾಗಿಯೇ ಲಾಂಚ್ ಮಾಡಿದ್ದಾರೆ. ಚಂದನ್‌ನಂತಹ ಚಂದದ ನಟನನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಎಚ್.ಸಿ ವೇಣು ಅವರ ಸಿನಿಮಾಟೋಗ್ರಫಿ ತನ್ನದೇ ಆದ ಕಾರಣದಿಂದಾಗಿ ಕಾಡುತ್ತದೆ. ಸ್ವಿಟ್ಜರ್‌ಲ್ಯಾಂಡ್ ಮತ್ತು ಕೇರಳವನ್ನು ತಮ್ಮ ಕ್ಯಾಮೆರಾದಲ್ಲಿ ಸೊಗಸಾಗಿ ಸೆರೆ ಹಿಡಿದಿದ್ದಾರೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ನಿರ್ಮಾಣವಾಗಿರುವ ಪ್ರೇಮಬರಹಕ್ಕೆ ಇನ್ನೂ ಉತ್ತಮ ಹಾಡುಗಳನ್ನು ಕೊಡಬಹುದಿತ್ತುಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್. ಈ ನಡುವೆಯೂ ಟೈಟಲ್ ಟ್ರ್ಯಾಕ್ ಚೆನ್ನಾಗಿದೆ.
ಅಪ್ಪನ ನಿರ್ದೇಶನದಲ್ಲಿ ಐಶ್ವರ್ಯಾ ಸೊಗಸಾಗಿ ಕಾಣುತ್ತಾರೆ. ನಟನೆ, ಡಾನ್ಸ್, ಎಕ್ಸ್‌ಪ್ರೆಶನ್ಸ್ ಎಲ್ಲದರಲ್ಲೂ ಬೆಸ್ಟ್. ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳನ್ನು ಮಾಡಿರುವ ಚಂದನ್, ಇಷ್ಟು ದಿನ ಒಳ್ಳೆಯ ನಿರ್ದೇಶಕರ ಕಣ್ಣಿಗೇಕೆ ಬಿದ್ದಿಲ್ಲ ಎನ್ನುವಂತೆ ನಟಿಸಿದ್ದಾರೆ. ಫೈಟ್ಸ್, ಡಾನ್ಸ್ ಎಲ್ಲದರಲ್ಲೂ ಉತ್ತಮ ಸ್ಕೋರ್ ಮಾಡಿದ್ದಾರೆ. ಹಿರಿಯ ನಿರ್ದೇಶಕ ಕೆ. ವಿಶ್ವನಾಥ್ ಅವರು ನಿರ್ವಹಿಸಿದ ಪಾತ್ರಕ್ಕೆ ಉತ್ತಮ ಕಂಠದಾನದ ಅವಶ್ಯಕತೆ ಇತ್ತು. ಇನ್ನುಳಿದಂತೆ ಸುಹಾಸಿನಿ, ಸಾಧು ಕೋಕಿಲಾ, ರಂಗಾಯಣ ರಘು, ಜಹಾಂಗೀರ್, ಕುರಿ ಪ್ರತಾಪ್ ಎಲ್ಲರೂ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಸಿನಿಮಾದಲ್ಲಿ ಒಂದಷ್ಟು ನ್ಯೂನ್ಯತೆಗಳಿದ್ದರೂ ವಲ್ಗಾರಿಟಿಗೆ ಅವಕಾಶ ಕೊಡದೆ, ಐಟಂ ಸಾಂಗ್ ತುರುಕದೇ ಒಂದೊಳ್ಳೆ ಫ್ಯಾಮಿಲಿ ಮನರಂಜನೆಯ ಸಿನಿಮಾ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ಒಮ್ಮೆ ನೋಡಲು ಅಡ್ಡಿಯಿಲ್ಲ.