ಮನೋರಂಜನೆ

ನಾನೇ ಶ್ರೀದೇವಿ ನಾನೇ ಪೂಲನ್‌ದೇವಿ!

Pinterest LinkedIn Tumblr


ಹರಿಪ್ರಿಯಾ ಇದೇ ಮೊದಲ ಬಾರಿಗೆ ವಿಲನ್‌ ಆಗಿದ್ದಾರೆ! ಅರೇ, ನಾಯಕಿಯಾಗಿ ನಟಿಸುತ್ತಿದ್ದ ಅವರು ಇದ್ದಕ್ಕಿದ್ದಂತೆಯೇ ಖಳ ನಟಿಯಾಗಿ ಕಾಣಿಸಿಕೊಂಡಿದ್ದಾರಾ ಎಂಬ ಪ್ರಶ್ನೆ ಎದುರಾಗಬಹುದು. ಆದರೆ, ಹರಿಪ್ರಿಯಾ ಅವರಿಗೆ ಆ ಪಾತ್ರ ತುಂಬಾನೇ ಇಷ್ಟವಾಗಿದೆ. ಆ ಕಾರಣಕ್ಕೇ ಅವರು ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಅವರು ವಿಲನ್‌ ಆಗಿರೋದು “ಸಂಹಾರ’ ಚಿತ್ರದಲ್ಲಿ.

ಆ ಚಿತ್ರಕ್ಕೆ ಹರಿಪ್ರಿಯ ನಾಯಕಿಯೂ ಹೌದು, ಖಳನಾಯಕಿಯೂ ಹೌದು. ಅವರಿಗೆ ಎರಡು ಶೇಡ್‌ ಇರುವ ಪಾತ್ರ ಸಿಕ್ಕಿದೆ. ನಾಯಕಿಯಾಗಿಯೂ ಕಾಣಿಸಿಕೊಂಡಿರುವ ಹರಿಪ್ರಿಯಾ, ನೆಗೆಟಿವ್‌ ಶೇಡ್‌ನ‌ಲ್ಲೂ ಮಿಂಚಿದ್ದಾರಂತೆ. ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವಾಗಲೇ, ನೆಗೆಟಿವ್‌ ಶೇಡ್‌ ಇರುವಂತಹ ಪಾತ್ರ ಒಪ್ಪಿಕೊಳ್ಳುವುದು ಕಷ್ಟ.

ಆದರೆ, ಹರಿಪ್ರಿಯಾ ನಾಯಕಿಯಾಗಿ ಬಿಜಿಯಾಗಿರುವುದು ಎಲ್ಲರಿಗೂ ಗೊತ್ತು. ಹೀಗಿರುವಾಗಲೇ, ಅವರು “ಸಂಹಾರ’ ಚಿತ್ರದಲ್ಲೇಕೆ ನೆಗೆಟಿವ್‌ ಶೇಡ್‌ ಪಾತ್ರದಲ್ಲಿ ನಟಿಸಿದರು ಎಂಬ ಪ್ರಶ್ನೆ ಎದುರಾದರೆ, ಅದಕ್ಕೆ ಉತ್ತರ, ಆ ಕಥೆ ಮತ್ತು ಎರಡು ರೀತಿಯಲ್ಲಿರುವ ಪಾತ್ರಗಳಂತೆ. ಯಾಕೆ ಅವರು ವಿಲನ್‌ ಆಗಿದ್ದಾರೆ ಅನ್ನುವುದಕ್ಕೆ ಸಿನಿಮಾ ನೋಡಬೇಕು ಎಂಬುದು ಹರಿಪ್ರಿಯಾ ಮಾತು.

“ಸಂಹಾರ’ ಕುರಿತು ಹೇಳಿಕೊಳ್ಳುವ ಹರಿಪ್ರಿಯಾ, ಅವರಿಗೆ ನಿರ್ದೇಶಕರು ಕಥೆ ಹೇಳಿದಾಗಲೇ, ಪಾತ್ರ ಬಿಡಬಾರದು ಅನಿಸಿತಂತೆ. ಸಿನಿಮಾ ಮುಗಿಸಿ, ಡಬ್ಬಿಂಗ್‌ ಮಾಡುವಾಗ, ಕಥೆ ಹೇಗೆ ಹೇಳಿದ್ದರೋ, ಅದಕ್ಕಿಂತ ಚೆನ್ನಾಗಿಯೇ ಅವರನ್ನು ತೋರಿಸಿದ್ದಾರಂತೆ. ಹಾಗಾಗಿ, ಹರಿಪ್ರಿಯಾ ಅವರಿಗೆ “ಸಂಹಾರ’ ಒಂದು ಹೊಸ ಇಮೇಜ್‌ ತಂದುಕೊಡುವ ಚಿತ್ರ ಆಗುತ್ತೆ ಎಂಬ ನಂಬಿಕೆ. ನಾಯಕಿಯಾಗಿ ನಟಿಸುವಾಗ, ಕ್ಯಾಮೆರಾ ಮುಂದೆ, ಸೆಲ್‌ ಕೊಟ್ಟು ಒಂದಷ್ಟು ಲುಕ್‌ ಕೊಡುವುದು ತುಂಬಾನೇ ಸುಲಭವಂತೆ.

ಆದರೆ, ಅವರಿಲ್ಲಿ ನೆಗೆಟಿವ್‌ ಶೇಡ್‌ ಪಾತ್ರಕ್ಕೆ ಲುಕ್‌ ಕೊಡುವಾಗ ತುಂಬಾನೇ ಕಷ್ಟವಾಯ್ತಂತೆ. ಆದರೂ, ಪಾತ್ರದೊಳಗೆ ಜೀವಿಸಿ, ಪಕ್ಕಾ ಖಳನಟಿ ಎನಿಸುವಷ್ಟರ ಮಟ್ಟಿಗೆ ಕಾಣಿಸಿಕೊಂಡಿದ್ದಾರಂತೆ. ಹಾಗಾದರೆ, ಅವರಿಲ್ಲಿ ಫೈಟ್‌ ಮಾಡಿದ್ದಾರಾ? ಖಂಡಿತವಾಗಿಯೂ ಮಾಡಿದ್ದಾರೆ. ಆದರೆ, ಹೇಗೆಲ್ಲಾ ಮಾಡಿದ್ದಾರೆ, ಯಾರ ಜೊತೆ ಹೊಡೆದಾಡುತ್ತಾರೆ ಅನ್ನುವುದಕ್ಕೆ ಸಿನಿಮಾ ನೋಡಬೇಕು. ಅವರಿಗಿಲ್ಲಿ ಎರಡು ಹಾಡುಗಳಿವೆ.

ಒಂದು ನಾಯಕಿಯಾಗಿರುವಾಗ ಬಂದು ಹೋಗುವ ಹಾಡು, ಇನ್ನೊಂದು ರಾಕ್ಷಸಿ ಹಾಡು. ವಿಲನ್‌ಶೇಡ್‌ನ‌ಲ್ಲಿರುವಾಗ ಬರುವ ಹಾಡು. ಅವರಿಗೆ ಅರ್ಜುನ್‌ ಸರ್ಜಾ, ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರ ಜತೆ ನಟಿಸಿರುವುದು ಖುಷಿ ಕೊಟ್ಟಿದೆ. ಒಂದೇ ಫ್ಯಾಮಿಲಿಯ ಮೂವರು ಸ್ಟಾರ್‌ ಜತೆ ಅಭಿನಯಿಸಿದ ನಟಿ ಎಂಬುದು ಹೆಮ್ಮೆಯಂತೆ. ಎಲ್ಲಾ ಸರಿ, ಅವರಿಗೆ ಅರ್ಜುನ್‌ ಸರ್ಜಾ ಅವರ ಜತೆ ಆ್ಯಕ್ಷನ್‌ ಮಾಡುವ ಆಸೆ ಇತ್ತು. ಆದರೆ, ಅದು ಚಿರಂಜೀವಿ ಸರ್ಜಾ ಅವರ ಜತೆ ಈಡೇರಿದೆ ಎಂಬ ಖುಷಿ ಅವರದು.

-ಉದಯವಾಣಿ

Comments are closed.