ಮನೋರಂಜನೆ

ಫಿಲ್ಮ್‌ ಫೇರ್‌ ಅವಾರ್ಡ್‌ ಪಡೆದ ಕ್ರಿಕೆಟರ್‌‌‌ ಇರ್ಫಾನ್‌ ಪಠಾಣ್‌ ! ಎಡವಟ್ಟು ಮಾಡಿಕೊಂಡ ಫೆಮಿನಾ ಇಂಡಿಯಾ

Pinterest LinkedIn Tumblr

ಮುಂಬೈ: ಬಾಲಿವುಡ್‌ ನಟ ಇರ್ಫಾನ್‌ ಖಾನ್‌ ಅವರು ಜಿಯೋ ಫಿಲ್ಮ್‌ಫೇರ್‌ ಅವಾರ್ಡ್‌–2018ರ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಫೆಮಿನಾ ಇಂಡಿಯಾ ಇರ್ಫಾನ್‌ ಅವರನ್ನು ಅಭಿನಂದಿಸುವ ಅವಸರದಲ್ಲಿ ಕ್ರಿಕೆಟಿಗ ಇರ್ಫಾನ್‌ ಪಠಾಣ್‌ ಅವರ ಟ್ವಿಟರ್‌ ಖಾತೆಯನ್ನು ಟ್ಯಾಗ್‌ ಮಾಡಿ ಶುಭ ಕೋರಿದೆ.

ಹಿಂದಿ ಮೀಡಿಯಂ ಚಿತ್ರದಲ್ಲಿನ ಅಭಿನಯಕ್ಕಾಗಿ ಇರ್ಫಾನ್‌ ಖಾನ್‌ ಅವರಿಗೆ ಭಾನುವಾರ ರಾತ್ರಿ ಈ ಪ್ರಶಸ್ತಿ ಲಭಿಸಿದ್ದು, ಈ ಕುರಿತು ಟ್ವಿಟರ್‌ನಲ್ಲಿ ಶುಭಾಶಯ ಕೋರಲು ಮಂದಾದ ನಿಯತಕಾಲಿಕೆ ಬಾಲಿವುಡ್‌ ನಟನ ಬದಲಿಗೆ ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಅನ್ನು ಟ್ಯಾಗ್‌ ಮಾಡಿ ಯಡವಟ್ಟು ಮಾಡಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪಠಾಣ್‌, ‘ಧನ್ಯವಾದಗಳು ಹಾಗೂ ಕ್ಷಮೆಯಿರಲಿ. ನಾನು ಅಲ್ಲಿಗೆ ಬರಲಾಗದು. ನನಗೆ ನೀಡುವುದಾದರೆ ನೀವು ನನ್ನ ಮನೆಗೆ ಪ್ರಶಸ್ತಿ ಕಳುಹಿಸಿಕೊಡಬಹುದು’ ಎಂದು ಟ್ವೀಟ್‌ ಮಾಡಿದ್ದಾರೆ.

Thank u n sorry I couldn’t make it but u can send the award to me at my home ;);)

— Irfan Pathan (@IrfanPathan) January 21, 2018
2017–18ರ ರಣಜಿ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ತಮ್ಮ ರಾಜ್ಯ(ಬರೋಡಾ) ಕ್ರಿಕೆಟ್‌ ತಂಡದ ಪರ ಕಣಕ್ಕಿಳಿದಿದ್ದ ಪಠಾಣ್‌ ಅವರನ್ನು ಬರೋಡಾ ಕ್ರಿಕೆಟ್‌ ಮಂಡಳಿ ಪಂದ್ಯಾವಳಿ ಮಧ್ಯದಲ್ಲೇ ಕೈಬಿಟ್ಟಿತ್ತು. ಅವರನ್ನು ಪ್ರಸ್ತುತ ನಡೆಯುತ್ತಿರುವ ಸಯ್ಯದ್‌ ಮುಸ್ತಾಕ್‌ ಅಲಿ ಕೂಟದಿಂದಲೂ ಕೈಬಿಡಲಾಗಿದೆ.

ಸದ್ಯ ಮಂಡಳಿಯಿಂದ ನಿರಪೇಕ್ಷಣಾ ಪತ್ರದ ನಿರೀಕ್ಷೆಯಲ್ಲಿರುವ 33 ವರ್ಷದ ಆಲ್ರೌಂಡರ್‌ 2012ರಲ್ಲಿ ಕೊನೆಯದಾಗಿ ಭಾರತ ತಂಡದ ಪರ ಅಂತರರಾಷ್ಟ್ರೀಯ ಪಂದ್ಯವಾಡಿದ್ದರು.

ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪ್ರಮಾದವಾಗುತ್ತಿರವುದು ಇದೇ ಮೊದಲಲ್ಲ. ಈ ಹಿಂದೆ ಬಾಲಿವುಡ್‌ ನಟ ಶಶಿ ಕಪೂರ್‌ ಅವರು ನಿಧನರಾದಾಗಲೂ ಇಂತಹ ಗೊಂದಲ ಉಂಟಾಗಿತ್ತು. ಶ್ವಾಸಕೋಶ ಸಂಬಂಧಿ ಸಮಸ್ಯೆ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಕಪೂರ್‌ ನಿಧನರಾದಾಗ ಕೆಲ ಪತ್ರಕರ್ತರು ರಾಜಕಾರಣಿ ಶಶಿ ತರೂರ್‌ ಕಚೇರಿಗೆ ಕರೆ ಮಾಡಿ ವಿಚಾರಿಸಿದ್ದರು.

Comments are closed.