
ಜೈಪುರ : ಬಾಲಿವುಡ್ ಚಿತ್ರ ನಿರ್ಮಾಪಕ-ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ “ಪದ್ಮಾವತ್’ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ರಾಜಸ್ಥಾನ ಸರಕಾರ ಹೇಳಿದೆ.
ಮಾಧ್ಯಮದೊಂದಿಗೆ ಮಾತನಾಡುತ್ತಿದ್ದ ರಾಜಸ್ಥಾನ ಗೃಹ ಸಚಿವ ಗುಲಾಬ್ ಚಾಂದ್ ಕಟಾರಿಯ ಅವರು “ಮುಖ್ಯಮಂತ್ರಿ ವಸುಂಧರಾ ರಾಜೆ ಅವರ ಈ ಮೊದಲಿನ ಆದೇಶವನ್ನು ಅನುಲಕ್ಷಿಸಿ ಪದ್ಮಾವತ್ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ’ ಎಂದು ಹೇಳಿದರು.
ವಿವಾದಿತ ಐತಿಹಾಸಿಕ ಕಥಾ ಚಿತ್ರ ಪದ್ಮಾವತಿಗೆ ಯಾವುದೇ ಕಟ್ ಇಲ್ಲದೆ ಕೇವಲ ಹೆಸರನ್ನು “ಪದ್ಮಾವತ್’ ಎಂದು ಬದಲಿಸಬೇಕೆಂದು ಸೂಚಿಸುವ ಮೂಲಕ ಕೇಂದ್ರ ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ನೀಡಿತ್ತು. ಅಂತೆಯೇ ಚಿತ್ರ ಜ.25ರಂದು ದೇಶಾದ್ಯಂತ ತೆರೆ ಕಾಣುವುದೆಂದು ಹೇಳಲಾಗಿತ್ತು.
ಕೇಂದ್ರ ಸೆನ್ಸಾರ್ ಮಂಡಳಿ ಚಿತ್ರದ ಹೆಸರು ಬದಲಾಯಿಸಲು ಸೂಚಿಸಿ ಸರ್ಟಿಫಿಕೇಟ್ ನೀಡುವ ಮುನ್ನ ಪದ್ಮಾವತಿ ಚಿತ್ರವನ್ನು ತಮ್ಮ ರಾಜ್ಯದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲವೆಂದು ಈ ಹಿಂದೆ ರಾಜಸ್ಥಾನ, ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ ಸರಕಾರಗಳು ಹೇಳಿದ್ದವು.
-ಉದಯವಾಣಿ
Comments are closed.