ಮನೋರಂಜನೆ

‘ಪದ್ಮಾವತಿ’ಗೆ ಮತ್ತೆ ಸಂಕಷ್ಟ; ಚಿತ್ರ ಬಿಡುಗಡೆ ವಿರೋಧಿಸಿ ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ

Pinterest LinkedIn Tumblr

ಮುಂಬೈ: ಬಾಲಿವುಡ್ ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಬಹು ನಿರೀಕ್ಷಿತ ಚಿತ್ರ ‘ಪದ್ಮಾವತಿ’ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಚಿತ್ರ ಬಿಡುಗಡೆಯನ್ನು ವಿರೋಧಿಸಿ ಗುಜರಾತ್ ಬಿಜೆಪಿ ಘಟಕ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದೆ.

ಪತ್ರದಲ್ಲಿ ಪದ್ಮಾವತಿ ಚಿತ್ರದಲ್ಲಿ ಕ್ಷತ್ರಿಯ ಜನಾಂಗದ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಸನ್ನಿವೇಶಗಳಿವೆ. ಇದು ಕ್ಷತ್ರಿಯ ಭಾವನೆಗಳಿಗೆ ಧಕ್ಕೆ ತರುವ ಸಾಧ್ಯತೆಯಿದ್ದು, ಇದೇ ಕಾರಣಕ್ಕೆ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಅಥವಾ ಚಿತ್ರ ಬಿಡುಗಡೆಗೂ ಮುನ್ನ ರಜಪೂತ ಸಮುದಾಯಕ್ಕೆ ಚಿತ್ರವನ್ನು ತೋರಿಸಬೇಕು ಎಂದು ಆಗ್ರಹಿಸಿದೆ. ಅಂತೆಯೇ ಚಿತ್ರತಂಡ ತಮ್ಮ ಈ ಬೇಡಿಕೆಗೆ ಒಪ್ಪಿದರೆ ಚಿತ್ರ ಬಿಡುಗಡೆ ವೇಳೆ ಅಥವಾ ನಂತರ ಯಾವುದೇ ಗಲಾಟೆ ನಡೆಯುವುದಿಲ್ಲ ಎಂದು ಗುಜರಾತ್ ಬಿಜೆಪಿ ಘಟಕ, ಚುನಾವಣಾ ಆಯೋಗ ಹಾಗೂ ಸೆನ್ಸಾರ್ ಮಂಡಳಿಗೆ ಪತ್ರವೊಂದನ್ನು ಬರೆದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಹಾಗೂ ರಜಪೂತ ನಾಯಕ ಐ.ಕೆ. ಜಡೇಜಾ ಅವರು, “ಚಿತ್ರದ ನಿರ್ದೇಶಕರ ಮುಂದೆ ಎರಡು ಆಯ್ಕೆಗಳನ್ನು ನೀಡಿದ್ದೇವೆ. ಚಿತ್ರವನ್ನು ಬ್ಯಾನ್ ಮಾಡಬೇಕು. ಇಲ್ಲ ಗುಜರಾತ್ ಚುನಾವಣೆ ನಂತರ ಚಿತ್ರ ಬಿಡುಗಡೆಯಾಗಬೇಕು. ಮುಂದಿನ ಚುನಾವಣೆಗೂ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಚಿತ್ರ ಬಿಡುಗಡೆಯಿಂದ ಗುಜರಾತ್ ಚುನಾವಣೆ ವೇಳೆ ಗಲಾಟೆಯಾಗುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಬಹುಕೋಟಿ ವೆಚ್ಚದ ಹಾಗೂ ಬಹು ತಾರಾಗಣದ ಚಿತ್ರ ಪದ್ಮಾವತಿ ವಿವಾದಗಳ ನಡುವೆಯೇ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಅಂತೆಯೇ ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟರಾದ ರಣವೀರ್ ಸಿಂಗ್ ಹಾಗೂ ಶಾಹಿದ್ ಕಪೂರ್ ಅಭಿನಯಿಸಿದ್ದಾರೆ.

Comments are closed.