ಮನೋರಂಜನೆ

“ಹರ್‌ ನೈಟ್ಸ್‌’ ಮಲಯಾಳಂ ಚಿತ್ರ ನಿರ್ದೇಶಕ ಐ ವಿ ಶಶಿ ವಿಧಿವಶ

Pinterest LinkedIn Tumblr


ಚೆನ್ನೈ : ಖ್ಯಾತ ಮಲಯಾಳಂ ಚಿತ್ರ ನಿರ್ದೇಶಕ ಐ ವಿ ಶಶಿ ಇಂದು ಮಂಗಳವಾರ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಮಲಯಾಳಂ ಚಿತ್ರರಂಗದ ಸೂಪರ್‌ ಸ್ಟಾರ್‌ ಮಮ್ಮೂಟ್ಟಿ, ಮೋಹನ್‌ ಲಾಲ್‌ ಮತ್ತು ಜಯನ್‌ ಅವರ ಯಶಸ್ಸಿನಲ್ಲಿ ಐ ವಿ ಶಶಿ ಅವರ ಪಾಲು ಇದೆ. ಮಲಯಾಳಂ, ತಮಿಳ, ಹಿಂದಿ ಸೇರಿದಂತೆ ಸುಮಾರು 150 ಚಿತ್ರಗಳನ್ನು ನಿರ್ದೇಶಿಸಿದ್ದ ಶಶಿ ಅವರು ಈಚೆಗೆ ಕೆಲ ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು. ಅವರು ಪತ್ನಿ ಸೀಮಾ (ಖ್ಯಾತ ಮಾಜಿ ನಟಿ), ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಆಸ್ಟ್ರೇಲಿಯದಲ್ಲಿರುವ ಪುತ್ರಿ ಇಲ್ಲಿಗೆ ತಲುಪಿದೊಡನೆಯೇ ಶಶಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಕುಟುಂಬ ಮೂಲಗಳು ತಿಳಿಸಿವೆ.

ಶಶಿ ಅವರು 1978ರಲ್ಲಿ ನಿರ್ದೇಶಿಸಿದ್ದ ಅವಳುಡೆ ರಾವುಗಳ್‌ (ಹರ್‌ ನೈಟ್ಸ್‌ ಅಥವಾ ಅವಳ ರಾತ್ರಿಗಳು) ಚಿತ್ರ ಅಪಾರ ಯಶಸ್ಸು ಪಡೆದು ಶಶಿ ಅವರಿಗೆ ಹೆಸರು, ಹಣ, ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಈ ಚಿತ್ರದ ಹೀರೋಯಿನ್‌ ಆಗಿ ನಟಿಸಿದ್ದ ಸೀಮಾ, ಕೊನೆಗೆ ಶಶಿ ಅವರ ಪತ್ನಿಯಾದರು. ಶಶಿ ನಿರ್ದೇಶನದ ಸುಮಾರು ಮೂರು ಡಜನ್‌ಗೂ ಹೆಚ್ಚು ಚಿತ್ರಗಳಲ್ಲಿ ಮಮ್ಮೂಟ್ಟಿ ನಟಿಸಿದ್ದಾರೆ.

ಮೋಹನ್‌ಲಾಲ್‌ ಅವರ ಸೂಪರ್‌ಹಿಟ್‌ ದೇವಸುರಮ್‌ ಚಿತ್ರವನ್ನು ಶಶಿ ನಿರ್ದೇಶಿಸಿದ್ದರು. ಶಶಿ ಅವರ ಭಾರೀ ಯಶಸ್ಸು ಕಂಡ ಚಿತ್ರಗಳಲ್ಲಿ 1980ರಲ್ಲಿ ತೆರೆ ಕಂಡಿದ್ದ, ಜಯನ್‌ ನಟನೆಯ ಅಂಗಡಿ ಚಿತ್ರ ಕೂಡ ಮುಖ್ಯವಾದದ್ದು. ಶಶಿ ಮತ್ತು ಜಯನ್‌ ಜೋಡಿ ಆರು ಚಿತ್ರಗಳಲ್ಲಿ ಜತೆಗೂಡಿ ಕೆಲಸ ಮಾಡಿದೆ. ಕಮಲ ಹಾಸನ್‌ ಅವರು ಶಶಿ ಅವರ ಗಳಸ್ಯ ಕಂಠಸ್ಯ ಸ್ನೇಹಿತರಾಗಿದ್ದರು.

2013ರಲ್ಲಿ ಸಾಧಾರಣ ಯಶಸ್ಸು ಕಂಡಿದ್ದ “ಬಲರಾಮ್‌ ವರ್ಸಸ್‌ ತಾರಾದಾಸ್‌’ ಚಿತ್ರದ ಬಳಿಕ ಶಶಿ ಕೇವಲ ಒಂದು ಸಿನೆಮಾ ಮಾತ್ರ ಮಾಡಿದ್ದರು. ಅನಂತರ ಅವರು ಚೆನ್ನೈನಲ್ಲಿ ವಿರಮಿಸಿದ್ದರು. ಅವರ ಪತ್ನಿ ಸೀಮಾ ಆಗ ಬೆಳ್ಳಿ ಪರದೆಗಿಂತಲೂ ಟಿವಿ ಪರದೆಯಲ್ಲಿ ಹೆಚ್ಚು ಮಿಂಚಿದ್ದರು.

ಚಿತ್ರರಂಗದ ಅನೇಕ ದಿಗ್ಗಜರು, ನಟ, ನಿರ್ದೇಶಕರು ಶಶಿ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

-ಉದಯವಾಣಿ

Comments are closed.