ಮನೋರಂಜನೆ

‘ಸಿನಿಮಾ ಮಾಡದೇ ಹೋದರೆ ಪತಿ ವಿಚ್ಚೇಧನ ಕೊಡುವುದಾಗಿ ಬೆದರಿಕೆ: ಬೃಂದಾ ಮುರಳೀಧರ್

Pinterest LinkedIn Tumblr


“ನಾನು ಕನ್ನಡದವಳು, ಕೆನಡಾದವಳಲ್ಲ” ಅಂತ ನಕ್ಕರು. ಅವರ ಹೆಸರು ಬೃಂದಾ ಮುರಳೀಧರ್. ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ‘Knot Not’ ಸಿನಿಮಾದ ನಿರ್ದೇಶಕಿ. ಅವರು ಮೂಲತಃ ಮೈಸೂರಿನವರು. ಸದ್ಯ ಕೆನಡಾದಲ್ಲಿ ವಾಸಿಸುತ್ತಿದ್ದಾರೆ. ಚಿತ್ರೋತ್ಸವದಲ್ಲಿ ಅಡ್ಡಾಡುತ್ತಾ ಸಾಗುತ್ತಿದ್ದಾಗ ಮಾತಿಗೆ ಸಿಕ್ಕರು. ಸಿನಿಮಾ ನಿರ್ದೇಶಕರಾಗಬೇಕು ಅಂತ ಆಸೆ ಇಟ್ಟುಕೊಂಡಿರುವ ತರುಣ ಸಿನಿಮಾ ಪ್ರೇಮಿಗಳಿಗೆ ಸ್ಫೂರ್ತಿಯಾಗಬಹುದಾದ ಇವರ ಕತೆ ಇಲ್ಲಿದೆ…
ನಾನು ಮೈಸೂರಿನವಳು. ರಂಗಭೂಮಿ ಹಿನ್ನೆಲೆಯಿಂದ ಬಂದವಳು. ನಮ್ಮ ಮನೆಯಲ್ಲೆಲ್ಲಾ ರಂಗಕರ್ಮಿಗಳೇ ಇದ್ದಿದ್ದರಿಂದ ರಂಗಭೂಮಿ ನನ್ನನ್ನೂ ಆಕರ್ಷಿಸಿತು. ಹಾಗಾಗಿ ಸಮುದಾಯ ರಂಗತಂಡದಲ್ಲಿ ನಾನು ಕೆಲಸ ಮಾಡಿದ್ದೆ. ಹಿರಿಯ ರಂಗಕರ್ಮಿಗಳಾದ ಸಿಜಿಕೆ ಮತ್ತು ಲಿಂಗದೇವರು ಹಳೇಮನೆ ಅವರ ಜೊತೆಗೆಲ್ಲಾ ಕೆಲಸ ಮಾಡಿದ್ದೇನೆ. ಆಮೇಲೆ ನನಗೆ ಮದುವೆಯಾದ ಮೇಲೆ ನಾನು ಮೈಸೂರಿನಿಂದ ಹೊರಡಬೇಕಾಯಿತು. ನನ್ನ ಗಂಡ ಗುನ್ನಿ ಮುರಳೀಧರ್‌ ಐಟಿ ಕೆಲಸದಲ್ಲಿದ್ದರು. ಕೆಲಸದ ಸಲುವಾಗಿ ನಾವು ದುಬೈಗೆ ತೆರಳಬೇಕಾಯಿತು.
ದುಬೈಯಲ್ಲಿದ್ದಷ್ಟು ದಿನ ಅಲ್ಲಿನ ಮರುಭೂಮಿಯಂತೆ ನಾನೂ ಒಣಒಣ ಜೀವನ ಸಾಗಿಸಿದೆ. ರಂಗಭೂಮಿ ಇಲ್ಲ, ನಾಟಕಗಳಿಲ್ಲ. ಒಂದು ಸಮಯದಲ್ಲಂತೂ ನಾನು ಮೈಸೂರಿಗೆ ವಾಪಸ್‌ ಬರಬೇಕು ಅಂದುಕೊಂಡೆ. ಆದರೆ ಆಗಲೇ ಮುರಳೀಧರ್‌ ಅವರು ಕೆಲಸದ ಸಲುವಾಗಿ ಮತ್ತೆ ಬೇರೆ ದೇಶಕ್ಕೆ ತೆರಳಬೇಕಾಯಿತು. ನನಗೆ ಬೇರೆ ದೇಶಕ್ಕೆ ಹೋಗುವ ಬದಲು, ಮೈಸೂರಿಗೆ ಹೋಗಿ ರಂಗಭೂಮಿ ಸೇರಿಕೊಳ್ಳಬೇಕು ಅನ್ನೋ ಆಸೆ ಇತ್ತು. ಆದರೆ ಮುರಳೀಧರ್‌ ನಾವು ಕೆನಡಾಗೆ ಹೋಗೋಣ, ಅಲ್ಲಿ ರಂಗಭೂಮಿ ಇದೆ, ನೀನು ನಾಟಕ ಮಾಡಿಕೊಂಡು ಸುಖವಾಗಿರಬಹುದು ಅಂತ ಐಡಿಯಾ ಕೊಟ್ಟರು.
ಬದುಕು ಸರಿದಾರಿಗೆ ಬಂತು:
ತುಂಬಾ ಯೋಚಿಸಿದ ನಾನು ಕಡೆಗೆ ಕೆನಡಾಗೆ ಹೋಗಲು ನಿರ್ಧರಿಸಿದೆ. ಅಲ್ಲಿ ಹೋದ ಮೇಲೆ ಬದುಕು ಮತ್ತೆ ಸರಿದಾರಿಗೆ ಬಂತು. ಮೊದಲಿಗೆ ಥಿಯೇಟರ್‌ ವರ್ಕ್’ಶಾಪ್‌ ಮಾಡಿದೆ. ಈ ವರ್ಕ್’ಶಾಪ್‌’ಗಳನ್ನು ಆಯೋಜಿಸಿದ್ದರಿಂದ ನನಗೆ ತಮಿಳು, ಬೆಂಗಾಲಿ, ತೆಲುಗು ಹೀಗೆ ಎಲ್ಲಾ ಕಡೆಯ ನಟರು, ತಂತ್ರಜ್ಞರು ಸಿಕ್ಕರು. ಆಮೇಲೆ ಆಸಕ್ತಿ ಇರುವವರನ್ನೆಲ್ಲಾ ಒಂದೆಡೆ ಒಟ್ಟುಗೂಡಿಸಿ ರಂಗತಂಡ ಕಟ್ಟಿದೆ. ನಾನು ಇದುವರೆಗೆ 12 ನಾಟಕ ರಚನೆ ಮಾಡಿದ್ದೇನೆ. ಅವೆಲ್ಲಕ್ಕೂ ಜನ ಮೆಚ್ಚುಗೆ ಸಿಕ್ಕಿದೆ.
ಇವೆಲ್ಲದರಿಂದ ನನಗೆ ಪ್ರತಿಭಾವಂತ ತಂಡವೊಂದು ಸಿಕ್ಕಿತು. ಹೀಗೆ ಎಲ್ಲರೂ ಖುಷಿಯಾಗಿ ಇರುವಾಗಲೇ ನನ್ನ ಗಂಡ ಒಂದು ಐಡಿಯಾ ಕೊಟ್ಟರು. ನೀನ್ಯಾಕೆ ಒಂದು ಸಿನಿಮಾ ಮಾಡಬಾರದು?
ಗಂಡ ಬೆದರಿಸಿದರು
ನನಗೆ ಮೊದಲಿಂದಲೂ ಸಿನಿಮಾ ಅಂದ್ರೆ ಸೆಕೆಂಡ್‌ ಗ್ರೇಡ್‌ ಎಂಟರ್‌ಟೇನ್‌ಮೆಂಟ್‌ ಅನ್ನೋದು ತಲೆಯಲ್ಲಿತ್ತು. ರಂಗಭೂಮಿಯೇ ಶ್ರೇಷ್ಠ ಅಂತ ನಂಬಿಕೊಂಡಿದ್ದೆ. ಆದರೆ ನನ್ನ ಗಂಡನಿಗೆ ನಾನು ಸಿನಿಮಾ ಮಾಡಬೇಕು ಅನ್ನೋ ಆಸೆ ಇತ್ತು. ಅವರು ನನಗೆ ಸಿನಿಮಾ ಮಾಡಲು ಒತ್ತಾಯಿಸಿದರು. ಆದರೆ ನಾನು ಕೇಳಲಿಲ್ಲ. ಸಿನಿಮಾ ಮಾಡುವ ಮನಸ್ಸು ಮಾಡಲಿಲ್ಲ. ಕಡೆಗೆ ನನ್ನ ಗಂಡ ನನ್ನನ್ನು ದಾರಿಗೆ ಸಲುವಾಗಿ ಬೆದರಿಕೆ ಹಾಕಿದರು. ನೀನು ಸಿನಿಮಾ ಮಾಡದೇ ಇದ್ದರೆ ನನ್ನ ಜೊತೆ ಇರುವ ಅಗತ್ಯವಿಲ್ಲ ಎಂದರು. ಈಗ ನಾನು ಸಿನಿಮಾ ಮಾಡದೇ ಇದ್ದರೆ ವಿಚ್ಛೇದನ ಕೊಡಬೇಕು ಅಂತ ಅವರು ಹೇಳಿದ್ದರಿಂದ ನಾನು ದೊಡ್ಡ ಮನಸ್ಸು ಮಾಡಿ ಸಿನಿಮಾ ನಿರ್ಮಾಣಕ್ಕೆ ಮುಂದಾದೆ.
ಸಿನಿಮಾ ಮಾಡಬೇಕು ಅನ್ನೋ ಐಡಿಯಾ ಇರಲಿಲ್ಲ
ಅಷ್ಟೆಲ್ಲಾ ಆದ ಮೇಲೂ ಸಿನಿಮಾ ಮಾಡುವ ಐಡಿಯಾ ಏನೂ ನನಗಿರಲಿಲ್ಲ. ಅದರ ಬದಲು ಒಂದು ಶಾರ್ಟ್‌ಫಿಲ್ಮ್‌ ಮಾಡಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿದ್ದದ್ದು. ನಮ್ಮ ಜೊತೆ ಪ್ರೊಫೆಷನಲ್‌ ನಟರಾರೂ ಇರಲಿಲ್ಲ. ರಂಗತಂಡದಲ್ಲಿದ್ದವರನ್ನೇ ಒಟ್ಟು ಗೂಡಿಸಿದೆ. ದುಡ್ಡು ಹಾಕುವವರು ಸಿಗದೇ ಇದ್ದಾಗ ನಾನೇ ದುಡ್ಡು ಹಾಕಲು ಮುಂದಾದೆ. ಒಟ್ಟು ಐದು ಜನ ಸೇರಿಕೊಂಡು ಕೆಲಸ ಶುರು ಮಾಡಿದ್ವಿ. ಆರು ವಾರ ಕೆಲ್ಸ ಮಾಡಿದ್ರೆ ಸಾಕು 20 ನಿಮಿಷದ ಶಾರ್ಟ್‌ಫಿಲ್ಮ್‌ ರೆಡಿ ಮಾಡಬಹುದು ಅಂದುಕೊಂಡೆ. ಆದರೆ ಸ್ಕಿ್ರಪ್ಟ್‌ ರೆಡಿ ಮಾಡ್ತಾ ಮಾಡ್ತಾ ಮುಂದೆ ಎರಡೂವರೆ ಗಂಟೆಯ ಸಿನಿಮಾನೇ ಆಗಿ ಹೋಯ್ತು.
ನಮ್ಮೂರಿನ ಕತೆಯೇ
ನಮ್ಮದು ಅವಿಭಕ್ತ ಕುಟುಂಬ ಇರುವ ಸಮಾಜ. ಈಗೀಗ ಎಲ್ಲಾ ಕಡೆ ವಿಭಕ್ತ ಕುಟುಂಬಗಳಿವೆ. ಆದರೆ ಹಿಂದೆ ಎಲ್ಲಾ ಕಡೆ ತುಂಬು ಕುಟುಂಬಗಳೇ ಇದ್ದವು. ಅಲ್ಲಿ ಗಂಡ ಹೆಂಡತಿ ಸಂಬಂಧ ಹೇಗಿರತ್ತೆ ಅನ್ನೋ ಒಂದು ಸಾಲಿಟ್ಟುಕೊಂಡು ಕತೆ ಬರೆದೆ. ಗಂಡ ಹೆಂಡತಿ ಬೇರೆಯವರ ಜೊತೆಗೆಲ್ಲಾ ಚೆನ್ನಾಗಿರುತ್ತಾರೆ. ಆದರೆ ಗಂಡತಿ ಹೆಂಡತಿ ಒಟ್ಟಿಗೆ ಸುಖವಾಗಿ ನೂರ್ಕಾಲ ಬಾಳೋದಕ್ಕೆ ಯಾಕೆ ಸಾಧ್ಯವಾಗುವುದಿಲ್ಲ ಅಂತ ಯೋಚಿಸುತ್ತಾ ಚಿತ್ರಕತೆ ಬರೆದೆ. ನನ್ನ ಗಮನದಲ್ಲಿ ಊರಿನ ಕುಟುಂಬವೂ ಇತ್ತು. ಇಲ್ಲಿಂದ ಕೆನಡಾಗೆ ಹೋಗಿ ಸೆಟಲ್‌ ಆದ ಕುಟುಂಬಗಳೂ ಇದ್ದವು. ಎಲ್ಲರಿಗೂ ನೋಡಿಸಿಕೊಂಡು ಹೋಗಬೇಕು ಅನ್ನೋ ಕಾರಣಕ್ಕೆ ಸ್ವಲ್ಪ ತಮಾಷೆಯಾಗಿ ಕತೆ ಹೇಳಿದ್ದೇನೆ. ಜಗತ್ತು ಸುತ್ತಿ ಈಗ ನಮ್ಮ ಊರಿನ ಜನರ ಎದುರಿಗೆ ಬಂದು ನಿಂತಿದ್ದೇನೆ. ಇಲ್ಲಿ ನಮ್ಮವರು ನನ್ನ ಸಿನಿಮಾ ನೋಡಿ ಮೆಚ್ಚಿದಾಗ ತುಂಬಾ ಖುಷಿಯಾಯಿತು.

Comments are closed.