ಮನೋರಂಜನೆ

ಇರಾನ್ ಚಿತ್ರ ‘ಡ್ಯುಯೆಟ್‌’ ಸಿನಿಮಾ ವಿಮರ್ಶೆ

Pinterest LinkedIn Tumblr

ಸಿನಿಮಾ: ಡ್ಯುಯೆಟ್‌
ದೇಶ: ಇರಾನ್‌
ನಿರ್ದೇಶಕರು : ನವೀದ್‌ ದಾನೇಶ್‌
ಅವಧಿ: 103
ಬಿಡುಗಡೆಯಾದ ವರ್ಷ: 2016

ಇರಾನ್‌ ಸಿನಿಮಾಗಳು ಜಗತ್ತಿನ ಗಮನ ಸೆಳೆದಿದ್ದು ಯುದ್ಧದ ಕ್ರೌರ್ಯವನ್ನು ಬಿಂಬಿಸುವ ಕಥಾನಕಗಳು ಮತ್ತು ಧರ್ಮ–ಸಂಪ್ರದಾಯದ ಹೆಸರಿನಲ್ಲಿ ಕುಟುಂಬ ವ್ಯವಸ್ಥೆಯೊಳಗೆ ನಡೆಯುವ ಬೆಚ್ಚಿಬೀಳಿಸುವ ದೌರ್ಜನ್ಯದ ಕಥಾನಕಗಳ ಮೂಲಕ.

ಈ ಎಳೆಯನ್ನು ಇಟ್ಟುಕೊಂಡು ಬಂದ ಸಿನಿಮಾಗಳು ಜಗತ್ತಿನ ಗಮನ ಸೆಳೆದದ್ದೂ ಅಲ್ಲದೇ ಸಾಕಷ್ಟು ಚರ್ಚೆಗೂ ಗ್ರಾಸವಾಗಿವೆ. ಸಾಮಾನ್ಯವಾಗಿ ಒಂದು ದೇಶ–ಭಾಷೆಯ ಚಿತ್ರಗಳಿಗೆ ಇಂಥ ‘ಗುರ್ತು’ ಸಿಕ್ಕಿದಾಗ ತನ್ನ ಗುರ್ತಿಗೆ ತಾನೇ ಮರುಳಾಗಿ ಅಲ್ಲಲ್ಲೇ ಸುತ್ತಿ ನಿಂತುಬಿಡುವ ಸಾಧ್ಯತೆ ಇರುತ್ತದೆ.
ಈ ಕಾರಣಕ್ಕಾಗಿಯೇ ಇರಾನಿ ಸಿನಿಮಾಗಳು ತಮ್ಮ ಈ ಚೌಕಟ್ಟನ್ನು ಮೀರಿಕೊಂಡು ಬೆಳೆಯಬಲ್ಲವೇ ಎಂಬ ಅನುಮಾನವೂ, ಅದು ಸಾಧ್ಯವಾದರೆ ಆ ಬೆಳವಣಿಗೆಯ ದೆಸೆ ಎಂತಿರಬಹುದು? ಎಂಬ ಕುತೂಹಲವೂ ಇತ್ತು.

ಕ್ರಿಯಾಶೀಲ ಮನಸ್ಸುಗಳು ತಮ್ಮನ್ನು ತಾವು ಚೌಕಟ್ಟಿಗೆ ಸೀಮಿತಗೊಳಿಸಿಕೊಳ್ಳಲು ಇಷ್ಟಪಡುವುದಿಲ್ಲ. ಅಂತೆಯೇ ಇರಾನ್‌ ಸಿನಿಮಾಗಳು ಯುದ್ಧ ಮತ್ತು ಧರ್ಮದ ಕ್ರೌರ್ಯ ಕಥನಗಳಿಂದ ಮಧ್ಯಮ ವರ್ಗದ ಕುಟುಂಬ ವ್ಯವಸ್ಥೆಯತ್ತ ಹೊರಳಿರುವಂತಿದೆ. ಇತ್ತೀಚೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ‘ಅ ಸೆಪೆರೇಷನ್‌’, ‘ದ ಫಾಸ್ಟ್‌’, ನಂತರ ಸಿನಿಮಾಗಳನ್ನು ನೆನಪಿಸಿಕೊಂಡರೆ ಈ ಮಾತು ಇನ್ನಷ್ಟು ಸ್ಪಷ್ಟವಾದೀತು.

ಈ ಸಲದ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶಿತವಾದ ನವೀದ್‌ ದಾನೇಶ್‌ ನಿರ್ದೇಶನದ ಸಿನಿಮಾ ‘ಡ್ಯುಯೆಟ್’, ಇರಾನ್‌ ಸಿನಿಮಾಗಳ ಈ ಹೊರಳುವಿಕೆಗೆ ಇನ್ನೊಂದು ಉದಾಹರಣೆ.

ಎರಡು ದಂಪತಿ, ಅವರ ಬದುಕಿನ ಭೂತ ಅವರನ್ನು ಕಾಡುವ ರೀತಿ, ಅದು ಸಂಬಂಧದ ಮೇಲೆ ಬೀರುವ ಪರಿಣಾಮಗಳನ್ನು ಇಟ್ಟುಕೊಂಡು ಸೂಕ್ಷ್ಮವಾಗಿ ಕಥೆ ಹೆಣೆದಿದ್ದಾರೆ ನವೀದ್‌.

ನಮ್ಮ ಭೂತ, ಅದರ ನೆನಪುಗಳನ್ನು ವರ್ತಮಾನದ ಬದುಕಿನಲ್ಲಿ ಹೇಗೆ ಗ್ರಹಿಸಬೇಕು? ನಮ್ಮ ಹಿಂದಿನ ಬದುಕಿನ ಭಾಗವಾದ ವ್ಯಕ್ತಿಗಳು ಒಮ್ಮಿಂದೊಮ್ಮೆಲೇ ಎದುರಾದರೆ ಅವರನ್ನು ಹೇಗೆ ಮುಖಾಮುಖಿಯಾಗಬೇಕು? ನಮ್ಮ ಇಂದಿನ ಬದುಕಿನಲ್ಲಿ ಭೂತಕ್ಕಿರುವ ಸ್ಥಾನ ಎಂಥದ್ದು? ಭೂತದಿಂದ ಪಾರಾಗುವುದೆಂದರೆ ಅದನ್ನು ಒಪ್ಪಿಕೊಳ್ಳುವುದೇ ಅಥವಾ ಮರೆತಂತೆ ನಟಿಸಿ ಮನಸಲ್ಲಿ ಮುಚ್ಚಿಡುವುದೇ? ಹೀಗೆ ಹಲವು ಪ್ರಶ್ನೆಗಳನ್ನು ‘ಡ್ಯೂಯೆಟ್‌’ ಎತ್ತುತ್ತದೆ. ನಿಧಾನಗತಿಯಲ್ಲಿ ಆರಂಭಗೊಂಡು ಅದು ತ್ರಿಕೋನಾಕಾರದಲ್ಲಿ ಏರುತ್ತ ಹೋಗಿ ಆವೇಶದ ತುತ್ತತುದಿಗೆ ಕರೆದೊಯ್ದು ಒಮ್ಮೆಲೇ ನಿಲ್ಲಿಸಿಬಿಡುವ ಈ ಸಿನಿಮಾದ ನಿರೂಪಣಾ ತಂತ್ರವೂ ಗಮನಾರ್ಹವಾದದ್ದು.

ಪಾತ್ರಗಳ ಸಂಭಾಷಣೆ, ಮುಖದ ಅಭಿವ್ಯಕ್ತಿಯನ್ನು ಪ್ರೇಕ್ಷಕರ ಕಣ್ಣಿಗೆ ಒಗೆಯುವುದೇ ಒಂದು ದೃಶ್ಯದ ಅಂತಿಮ ಉದ್ದೇಶ ಎಂಬ ಜನಪ್ರಿಯ ನಂಬಿಕೆಯನ್ನೂ ನಿರ್ದೇಶಕರು ಮೀರಲು ಯತ್ನಿಸಿದ್ದಾರೆ. ಒಂದು ಈ ಮೇಲಿನ ಮಾನದಂಡಗಳಲ್ಲಿ ಮುಗಿದ ಮೇಲೆಯೂ ಕೆಲ ಕ್ಷಣಗಳ ಕಾಲ ಸ್ತಬ್ಧವಾಗಿಟ್ಟು ನಂತರ ನಿಧಾನಕ್ಕೆ ಸ್ಟಡಿ ಕ್ಯಾಮೆರಾವನ್ನು ಜೂಮ್‌ ಮಾಡುವುದರ ಮೂಲಕ ಪ್ರೇಕ್ಷಕರ ಮನಸನ್ನು ತಾನು ಹೇಳುತ್ತಿರುವುದಕ್ಕೆ ಹದಗೊಳಿಸುವ ತಂತ್ರ ಇಲ್ಲಿ ತುಂಬ ಯಶಸ್ವಿಯಾಗಿದೆ.

ಸೀಡಿ ಅಂಗಡಿಯೊಂದರಲ್ಲಿ ಸಫೀದಾ ತನ್ನ ಹಳೆಯ ಪ್ರೇಮಿಯನ್ನು ಹಮೀದ್‌ನನ್ನು ಭೇಟಿಯಾಗುತ್ತಾಳೆ. ಅವಳೀಗ ಮಾಸೂದ್‌ ಎಂಬಾತನನ್ನು ಮದುವೆಯಾಗಿದ್ದಾಳೆ. ಹಮೀದ್‌ ಕೂಡ ಮಿನೂ ಎಂಬವಳನ್ನು ಮದುವೆಯಾಗಿ ಮಗಳೂ ಇದ್ದಾಳೆ.

ಈ ಒಂದು ಭೇಟಿ ಎರಡೂ ಸಂಸಾರಗಳಲ್ಲಿ ತಲ್ಲಣದ ಅಲೆಗಳನ್ನು ಎಬ್ಬಿಸುತ್ತದೆ. ಈ ಅಲೆಗಳಿಗೆ ಕಾರಣ ಒಂದು ಭೇಟಿ ಎಂದು ಮೇಲ್ನೋಟಕ್ಕೆ ಅನಿಸಿದರೂ ಆಳವಾದ ಬೇರೆ ಬೇರೆ ಕಾರಣಗಳೇ ಇವೆ.

ಮೇಲ್ನೋಟಕ್ಕೆ ಸುಖಿಯಂತೆ ಕಾಣುವ ಸಫೀದೆ ತನ್ನ ಸಂಸಾರಕ್ಕೆ ಮಾನಸಿಕವಾಗಿ ಒಗ್ಗಿಕೊಂಡಿಲ್ಲ. ಹೆಂಡತಿಗೆ ಏನೆಲ್ಲ ಸೌಕರ್ಯಗಳನ್ನು ನೀಡಿಯೂ ಅವಳು ಸಂತೋಷವಾಗಿಲ್ಲ ಎಂಬ ಕೊರಗು ಮಾಸೂದ್‌ನದು. ಗಂಡನ ಜತೆಗೆ ಎಷ್ಟೆಲ್ಲ ವರ್ಷ ಬದುಕಿಯೂ ಅವನೊಂದಿಗೆ ಮುಕ್ತವಾಗಿ ಮಾತನಾಡಲಾಗದ ಸಂಕಟ ಸಫೀದೆಯದು.

‘ನಿನಗೆ ಏನನ್ನೂ ಕಡಿಮೆ ಮಾಡಿಲ್ಲ. ನೀನು ಹೇಳಿದ ಯಾವುದನ್ನೂ ನಿರಾಕರಿಸಿಲ್ಲ. ಆದರೂ ನೀನು ಯಾಕೆ ಸಂತೋಷವಾಗಿಲ್ಲ? ಯಾಕೆ ನಿನ್ನ ಮನಸ್ಸಿನಲ್ಲಿರುವುದನ್ನು ನನ್ನೊಂದಿಗೆ ಹಂಚಿಕೊಳ್ಳುವುದಿಲ್ಲ. ಗಂಡನಲ್ಲದೇ ಇನ್ಯಾರ ಜತೆಗೆ ಮನಸ್ಸು ಬಿಚ್ಚಿ ಮಾತನಾಡಲು ಸಾಧ್ಯ?’ ಎಂಬ ಪ್ರಶ್ನೆಗೆ ಸಫೀದೆಯ ಬಳಿ ಉತ್ತರವಿಲ್ಲ.

ಅತ್ತ ಹಮೀದ್‌ ಮತ್ತು ಮಿನೂ ಕೂಡ ಹಲವು ಅಸಮಧಾನಗಳನ್ನು ಮುಚ್ಚಿಕೊಂಡೇ ಸಂಸಾರ ನಡೆಸುತ್ತಿದ್ದಾರೆ.

ಆಧುನಿಕ ಬದುಕಿನಲ್ಲಿ ಸಂಸಾರ ಎಂಬ ವ್ಯವಸ್ಥೆಯ ಮೂಲತತ್ವಗಳ ಕುರಿತಾಗಿಯೇ ‘ಡ್ಯುಯೆಟ್‌’ ಸಿನಿಮಾ ಪ್ರಶ್ನೆಗಳನ್ನು ಎತ್ತುತ್ತದೆ.
ಈ ಸಿನಿಮಾದಲ್ಲಿ ಹೆಣ್ಣಿಗೆ ಸಂಪ್ರದಾಯದ ಕಟ್ಟುನಿಟ್ಟಿನ ಸೆರೆಮನೆಯಿಲ್ಲ. ಅವಳು ಬುರ್ಖಾ ಧರಿಸಿಕೊಳ್ಳದೆ ಹೊರಗೆ ಅಲೆದಾಡಬಲ್ಲಳು. ಗಂಡನ ಕೆಲಸಕ್ಕೆ ಕೈಜೋಡಿಸಬಲ್ಲಳು. ಹರೆಯದ ಹುಡುಗಿ ಅಣ್ಣನ ಎದುರಿಗೇ ಮೊಬೈಲಲ್ಲಿ ಯಾರೊಂದಿಗೋ ಚಾಟ್‌ ಮಾಡುತ್ತಾ ತನ್ನಲ್ಲಿ ತಾನೇ ನಗಬಲ್ಲಳು. ಆದರೆ ಈ ಆಧುನಿಕತೆ ಅವಳಿಗೆ ಪೂರ್ಣಸ್ವಾತಂತ್ರ್ಯವನ್ನೇನೂ ನೀಡಿಲ್ಲ.

ಇಲ್ಲಿನ ಸಂಕಟಗಳ ಸುಳಿಯೇ ಬೇರೆ ಬಗೆಯವು. ಅವು ಬರೀ ಹೆಣ್ಣಿಗಷ್ಟೇ ಸೀಮಿತವಾದದ್ದಲ್ಲ. ಈ ವಿಷಚಕ್ರದೊಳಕ್ಕೆ ಗಂಡೂ ಇದ್ದಾನೆ. ಇಲ್ಲಿ ಯಾರ ಪಾಲಿಗೆ ಯಾರೂ ಖಳರಲ್ಲ. ಪರಿಸ್ಥಿತಿ ಎಲ್ಲರನ್ನೂ ಆಡಿಸುತ್ತಿದೆ. ಹೈರಾಣಾಗಿಸಿ ಮಜ ನೋಡುತ್ತಿದೆ.

‘ಡ್ಯುಯೆಟ್‌’ ಸಿನಿಮಾದ ಕೊನೆಯ ದೃಶ್ಯದಲ್ಲಿ ಹಮೀದ್‌ ಮನೆಯ ಕಳೆಗೆಟ್ಟ ಗೋಡೆಯಿಂದ ಒಸರುವ ನೀರು ಮನೆಯನ್ನೆಲ್ಲ ತುಂಬಿ, ಸೋಲೋ, ದಿಗ್ಭ್ರಮೆಯೋ, ಆವೇಶವೋ ತಿಳಿಯದ ಸ್ಥಿತಿಯಲ್ಲಿ ಮೆಟ್ಟಿಲುಗಳ ಮೇಲೆ ಕುಸಿದು ಕೂತ ಮಿನೂ ಅಸಹಾಯಕ ಮನುಷ್ಯನ ಮನಸ್ಥಿತಿಯ ಮೂರ್ತರೂಪದಂತೆ ಭಾಸವಾಗುತ್ತದೆ.

ಸಮಸ್ಯೆಗಳನ್ನು ಬಗೆಹರಿಸಿ ಸುಖ ಸಮೃದ್ಧಿ ನೆಲೆಸುವುದನ್ನು ತೋರಿಸಿ ಪ್ರೇಕ್ಷಕರನ್ನು ಕಂಫರ್ಟ್‌ ಜೋನ್‌ಗೆ ತಲುಪಿಸುವ ಜನಪ್ರಿಯ ಸೂತ್ರ ಬಿಟ್ಟು, ಬದುಕಿನ ಸಂಕೀರ್ಣತೆಯನ್ನು ಹಾಗ್ಹಾಗೆಯೇ ಉಳಿಸಿ ‘ಓಪನ್‌ ಎಂಡಿಂಗ್‌’ ನೀಡಿರುವುದು ಸಿನಿಮಾದ ಘನತೆಯನ್ನು ಹೆಚ್ಚಿಸಿದೆ. ಪರದೆಯ ಮೇಲೆ ಅರ್ಧದಲ್ಲೇ ಕೊನೆಗೊಳ್ಳುವ ಕಥನ ನೋಡಿದವರ ಮನಸಲ್ಲಿ ಮುಂದುವರಿದು ಅಸ್ವಸ್ಥಗೊಳಿಸುತ್ತವೆ.
ಹೀಗೆ ಅಸ್ವಸ್ಥಗೊಳಿಸುವುದು– ತನ್ಮೂಲಕ ಚಿಂತನೆಗೆ ಹಚ್ಚುವುದು ಒಂದು ಸಿನಿಮಾ ಯಶಸ್ವಿಯಾಗಿದೆ ಎನ್ನುವುದರ ಪುರಾವೆಯೂ ಹೌದು.

ಮರುಪ್ರದರ್ಶನದ ವಿವರಗಳು

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ‘ಡ್ಯುಯೆಟ್‌’ ಸಿನಿಮಾ ಫೆ.7 ಮಂಗಳವಾರ ಪರದೆ ನಂ. 5ರಲ್ಲಿ ಬೆಳಿಗ್ಗೆ 9.40ಕ್ಕೆ ಮರುಪ್ರದರ್ಶನವಾಗಲಿದೆ.
ಸ್ಥಳ: ಒರಾಯನ್‌ ಮಾಲ್‌, ರಾಜಕುಮಾರ್‌ ರಸ್ತೆ.

Comments are closed.