ಮನೋರಂಜನೆ

ಚಿತ್ರ ಸೋತರೂ ಖುಷಿಯಾಗಿರುವ ಸುನೀಲ್ ಶೆಟ್ಟಿ ಮಗಳು ಅತಿಯಾ

Pinterest LinkedIn Tumblr


ಬಣ್ಣದ ಲೋಕದ ನಂಟನ್ನು ಹೊಂದಿರುವ ಕುಡಿಗಳು ಸಾಮಾನ್ಯವಾಗಿ ಸಿನಿಮಾ ಕ್ಷೇತ್ರದ ಒಳಹೊರಗನ್ನು ಆಳವಾಗಿ ಬಲ್ಲವರಾಗಿರುತ್ತಾರೆ. ಆದರೆ ನಟ ಸುನಿಲ್‌ ಶೆಟ್ಟಿ ಮಗಳು ಅತಿಯಾ ಶೆಟ್ಟಿಗೆ ‘ಹೀರೊ’ ಸಿನಿಮಾದಲ್ಲಿ ನಟಿಸುವ ಮೊದಲು ಈ ಕ್ಷೇತ್ರದ ಬಗ್ಗೆ ಎಳ್ಳಷ್ಟೂ ಜ್ಞಾನವಿರಲಿಲ್ಲವಂತೆ.

ಹೀಗೆಂದು ಅವರೇ ಹೇಳಿಕೊಂಡಿದ್ದಾರೆ. ‘ಬಣ್ಣದ ಲೋಕದಲ್ಲಿ ಎಲ್ಲವೂ ಹೊಸತು ನನಗೆ. ನಾನು ಒಮ್ಮೆಯೂ ಅಪ್ಪನೊಂದಿಗೆ ಚಿತ್ರೀಕರಣದ ಸ್ಥಳಕ್ಕೆ ಹೋಗಿಲ್ಲ. ನನ್ನ ಅಪ್ಪ ನಟ ಎನ್ನುವುದನ್ನು ಹೊರತು ಪಡಿಸಿದರೆ ನನಗೆ ಇಲ್ಲಿ ಯಾರ ಸಂಪರ್ಕವೂ ಇರಲಿಲ್ಲ’ ಎಂದಿದ್ದಾರೆ ಅತಿಯಾ. ಸಿನಿಮಾ ಕ್ಷೇತ್ರ ಇವರಿಗೆ ಹಲವು ಹೊಸ ವಿಷಯಗಳನ್ನು ಕಲಿಸಿದೆ.

ಜೊತೆಗೆ ಜೀವನದಲ್ಲಿ ಎಷ್ಟೊಂದು ವಿಷಯಗಳನ್ನು ಕಲಿಯುವುದು ಇದೆ ಎಂದೂ ಅನಿಸಿದೆಯಂತೆ. ‘ಹೀರೊ’ ಸಿನಿಮಾ ಅಂದುಕೊಂಡಷ್ಟು ಯಶಸ್ಸನ್ನು ಗಳಿಸಿಲ್ಲ. ಇದರ ಬಗ್ಗೆ ಅತಿಯಾಗೆ ಬೇಸರವಿದೆ. ಹಾಗೆಂದು ಸೋಲಿನ ನೆನಪಿನಲ್ಲಿಯೇ ಕೊರಗುವ ಮನಸ್ಥಿತಿ ಅವರದ್ದಲ್ಲ. ‘ಮೊದಲ ಸಿನಿಮಾ ‘ಹೀರೊ’ ನನಗೆ ಸಂತೋಷದ ಗುಚ್ಛವನ್ನೇ ನೀಡಿದೆ.

ಸಿನಿಮಾ ನಿರೀಕ್ಷೆಯ ಗುರಿಯನ್ನು ತಲುಪದಿದ್ದಾಗ ಅಸಮಾಧಾನಗೊಂಡಿದ್ದು ನಿಜ. ಹಾಗೆಂದು ನಾನು ಅದನ್ನೇ ನೆನೆಯುತ್ತ ಕೂರುವವಳಲ್ಲ. ಈ ಸಿನಿಮಾದಿಂದ ನನಗೆ ಸಾಕಷ್ಟು ಜನರ ಪ್ರೀತಿಯೂ ದೊರಕಿದೆ. ಜೀವನದ ಕೊನೆಯ ಗಳಿಗೆಯವರೆಗೂ ನಾನು ಸಿನಿಮಾ ರಂಗದಲ್ಲಿಯೇ ಮುಂದುವರೆಯಲು ಇಚ್ಚಿಸುತ್ತೇನೆ ಎಂದಿದ್ದಾರೆ’ ಅತಿಯಾ.

Comments are closed.