ಮನೋರಂಜನೆ

ಈ ಎರಡು ರಾಜ್ಯದಲ್ಲಿ “ದಂಗಲ್” ಚಿತ್ರಕ್ಕೆ ತೆರಿಗೆ ವಿನಾಯಿತಿ!

Pinterest LinkedIn Tumblr

dangale
ಮುಂಬೈ: ಖ್ಯಾತ ನಟ ಅಮೀರ್ ಖಾನ್ ಅವರ ಬಹು ನಿರೀಕ್ಷಿತ ಚಿತ್ರ ದಂಗಲ್ ತೆರೆಕಂಡು ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿರುವುಗಾಲೇ, ಉತ್ತಮ ಚಿತ್ರ ಎಂದು ಅಭಿಪ್ರಾಯಪಟ್ಟಿರುವ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ಸರ್ಕಾರಗಳು ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿವೆ.
ಚಿತ್ರದಲ್ಲಿನ ಉತ್ತಮ ಅಂಶಗಳನ್ನು ಗಮನಿಸಿದ್ದ ಹರ್ಯಾಣ ಸರ್ಕಾರ ಈ ಹಿಂದೆ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿತ್ತು. ಹರ್ಯಾಣ ಸರ್ಕಾರದ ನಡೆಯನ್ನೇ ಹಿಂಬಾಲಿಸಿರುವ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ಸರ್ಕಾರಗಳೂ ಕೂಡ ಇದೀಗ ದಂಗಲ್ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವೋ ಬೇಟಿ ಪಡಾವೋ (ಹೆಣ್ಣು ಮಕ್ಕಳನ್ನು ರಕ್ಷಿಸಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ) ಆಶಯಕ್ಕೆ ದಂಗಲ್ ಚಿತ್ರ ಪೂರಕವಾಗಿದ್ದು, ಇದೇ ಕಾರಣಕ್ಕೆ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
“ದಂಗಲ್” ಖ್ಯಾತ ಕುಸ್ತಿ ಪಟು ಮಹಾವೀರ್ ಫೋಗಟ್ ಅವರ ಜೀವನ ಚರಿತ್ರೆಯಾಧಾರಿತ ಚಿತ್ರವಾಗಿದ್ದು, ಚಿತ್ರವನ್ನು ನಿತೀಶ್ ತಿವಾರಿ ನಿರ್ದೇಶಿಸಿದ್ದಾರೆ. ಕಳೆದ ವಾರ ತೆರೆಕಂಡಿದ್ದ ಈ ಚಿತ್ರ ಕೇವಲ 3 ದಿನಗಳೊಳಗೆ 100 ಕೋಟಿ ಹಣ ಬಾಚಿದ್ದು, ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಉತ್ತರ ಪ್ರದೇಶ, ಹರ್ಯಾಣ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿದ್ದು, ಹೆಣ್ಣು ಭ್ರೂಣ ಹತ್ಯೆ ತಡೆಯಲು ಸ್ಥಳೀಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ.

Comments are closed.