ಮನೋರಂಜನೆ

ರೀಲೋಡ್ ಆಗುತ್ತಿದೆ ಬಾಲಿವುಡ್ ಚಿತ್ರ ಬ್ಯಾಂಗ್ ಬ್ಯಾಂಗ್

Pinterest LinkedIn Tumblr

bang-bangಹೃತಿಕ್ ರೋಷನ್ ಮತ್ತು ಕತ್ರಿನಾ ಕೈಫ್ ಜತೆಯಾಗಿ ನಟಿಸಿದ್ದ ‘ಬ್ಯಾಂಗ್ ಬ್ಯಾಂಗ್’ ಚಿತ್ರ ಸೂಪರ್ಹಿಟ್ ಆಗಿತ್ತು. ಅದರ ಸೀಕ್ವೆಲ್ನಲ್ಲಿ ನಟಿಸಲು ಈ ಜೋಡಿಗೆ ಅವಕಾಶವಿಲ್ಲ. ಅವರ ಬದಲಿಗೆ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ಜಾಕ್ಲೀನ್ ಫರ್ನಾಂಡಿಸ್ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಲೇ ಇತ್ತು. ಆದರೆ ಆ ಚಿತ್ರಕ್ಕೆ ಏನು ಶೀರ್ಷಿಕೆ ಇಡುತ್ತಾರೆ ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿತ್ತು. ಸೀಕ್ವೆಲ್ ಆಗಿರುವುದರಿಂದ ‘ಬ್ಯಾಂಗ್ ಬ್ಯಾಂಗ್ 2’ ಎಂದೇ ಟೈಟಲ್ ಅಂತಿಮವಾಗಬಹುದು ಎಂಬುದು ಹಲವರ ಅಭಿಪ್ರಾಯವಾಗಿತ್ತು. ಆದರೆ ಇದೀಗ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರುವ ಚಿತ್ರತಂಡ ‘ರೀಲೋಡ್’ ಎಂಬ ಶೀರ್ಷಿಕೆಯನ್ನು ಫಿಕ್ಸ್ ಮಾಡಿದೆ.

ಇದುವರೆಗೂ ಟೈಟಲ್ ಬಗ್ಗೆ ಗಾಳಿಸುದ್ದಿ ಹಬ್ಬಿಸುತ್ತಿದ್ದವರಿಗೆ ಉತ್ತರ ನೀಡುವ ಸಲುವಾಗಿಯೇ ಜಾಕ್ಲೀನ್ ಮತ್ತು ಸಿದ್ಧಾರ್ಥ್ ಟ್ವಿಟರ್ನಲ್ಲಿ ಪೋಟೋವೊಂದನ್ನು ಶೇರ್ ಮಾಡಿಕೊಂಡಿದ್ದು, ‘ನಮ್ಮ ಸಿನಿಮಾದ ಶೀರ್ಷಿಕೆ ಬ್ಯಾಂಗ್ ಬ್ಯಾಂಗ್ 2 ಅಲ್ಲ’ ಎಂಬುದನ್ನು ಒತ್ತಿ ಹೇಳುವ ಪ್ರಯತ್ನ ಮಾಡಿದ್ದಾರೆ. ಮೊದಲ ಚಿತ್ರಕ್ಕೆ ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದರು. ಈ ಬಾರಿ ‘ರೀಲೋಡ್’ಗೆ ರಾಜ್ ನಿಧಿಮೋರ್- ಕೃಷ್ಣ ಡಿ.ಕೆ. ಜೋಡಿ ಆಕ್ಷನ್-ಕಟ್ ಹೇಳಲಿದೆ. ಈ ಹಿಂದೆ ‘ಬ್ರದರ್ಸ್’ ಚಿತ್ರದಲ್ಲಿ ಸಿದ್ದಾರ್ಥ್ ಮತ್ತು ಜಾಕ್ಲೀನ್ ಒಟ್ಟಾಗಿ ನಟಿಸಿದ್ದರು. ಇದೀಗ ‘ರೀಲೋಡ್’ಗಾಗಿ ಇವರಿಬ್ಬರು ಮತ್ತೆ ಒಂದಾಗುತ್ತಿದ್ದು, ಸದ್ಯ ಶೂಟಿಂಗ್ನ ತಯಾರಿಯಲ್ಲಿದ್ದಾರೆ. ಉಳಿದಂತೆ ಕೆಲವು ಮಾಂಟಾಜ್ ದೃಶ್ಯಗಳನ್ನು ಚಿತ್ರಿಸಿಕೊಳ್ಳುವ ಸಲುವಾಗಿ ನಿರ್ದೇಶಕರು ಬ್ಯಾಂಕಾಕ್ನಲ್ಲಿ ಬೀಡುಬಿಟ್ಟಿದ್ದಾರೆ.

‘ಬ್ಯಾಂಗ್ ಬ್ಯಾಂಗ್’ ರೀತಿಯೇ ‘ರೀಲೋಡ್’ ಕೂಡ ಭರ್ಜರಿ ಆಕ್ಷನ್ ದೃಶ್ಯಗಳನ್ನು ಹೊಂದಿರಲಿದೆಯಂತೆ. ಅದಕ್ಕಾಗಿ ಸಿದ್ದಾರ್ಥ್ ಈಗಾಗಲೇ ರಿಹರ್ಸಲ್ ನಡೆಸುತ್ತಿದ್ದಾರೆ. ಚಿತ್ರದ ಪ್ರಮುಖ ಘಟ್ಟದಲ್ಲಿ ಒಂದು ಬೈಕ್ ಚೇಸಿಂಗ್ ಸನ್ನಿವೇಶ ಇರಲಿದ್ದು, ಅದಕ್ಕೋಸ್ಕರ ಅವರು ತರಬೇತಿ ಪಡೆಯುತ್ತಿದ್ದಾರೆ. ಈ ಹಿಂದೆ ಕತ್ರಿನಾ ಕೈಫ್ ಜತೆ ಅವರು ತೆರೆಹಂಚಿಕೊಂಡಿದ್ದ ‘ಬಾರ್ ಬಾರ್ ದೋಖೊ’ ಚಿತ್ರ ಬಾಕ್ಸ್ಆಫೀಸ್ನಲ್ಲಿ ನೆಲಕಚ್ಚಿದ್ದರಿಂದ ಮುಂದಿನ ಚಿತ್ರಗಳಲ್ಲಿ ಗೆಲುವು ಪಡೆಯಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. ಪರಿಣಾಮ, ಇಷ್ಟೆಲ್ಲ ತಯಾರಿಯೊಂದಿಗೆ ಕ್ಯಾಮರಾ ಎದುರಿಸಲು ಅವರು ಸಜ್ಜಾಗುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ 2017ರ ಆಗಸ್ಟ್ 25ರಂದು ಈ ಚಿತ್ರ ತೆರೆಕಾಣಲಿದೆ.

Comments are closed.