ಮನೋರಂಜನೆ

‘ನನ್ ಮಗಳೇ ಹೀರೊಯಿನ್‌’

Pinterest LinkedIn Tumblr

nanna-final‘ನನ್ ಮಗಳೇ ಹೀರೊಯಿನ್‌’ – ‘ಆಗ್ಲಿ ಬಿಡಿ…’ ಎಂದು ಸುಮ್ಮನಾಗುವಂತಿಲ್ಲ. ಇನ್ನಷ್ಟು ಆಸಕ್ತಿ ತಳೆದು ‘ಯಾವ ಸಿನಿಮಾಕ್ಕೆ?’ ಎಂದು ಪ್ರಶ್ನಿಸುವ ಹಾಗೆಯೂ ಇಲ್ಲ. ಯಾಕೆಂದರೆ ಸಿನಿಮಾ ಹೆಸರೇ ‘ನನ್ ಮಗಳೇ ಹೀರೊಯಿನ್‌!’.

ಯಾರ್ರೀ ಈ ವಿಚಿತ್ರ ಹೆಸರಿಟ್ಟುಕೊಂಡು ಸಿನಿಮಾ ಮಾಡ್ತಿರೋರು ಎಂದು ಹೇಳಿದರೆ ಸಿಗುವ ಉತ್ತರವೂ ಅಷ್ಟೇ ವಿಚಿತ್ರವಾಗಿರುತ್ತದೆ. ಈ ಸಿನಿಮಾದ ನಿರ್ದೇಶಕ ಬಾಹುಬಲಿ! ಈ ಸಿನಿಮಾಕ್ಕೆ ‘ಹೀರೊ ಒಪ್ಕೊಂಡ್ರೆ…!’ ಎಂಬ ಟ್ಯಾಗ್‌ಲೈನ್‌ ಸಹ ಇದೆ.

ಹೆಸರಿನಲ್ಲಿಯೇ ಇಂಥ ಫನ್ನಿತನ ಇಟ್ಟುಕೊಂಡಿರುವ ಇದು ಸಂಪೂರ್ಣ ಹಾಸ್ಯಮಯ ಚಿತ್ರ. ಸಂಚಾರಿ ವಿಜಯ್‌ ಮತ್ತು ಅಮೃತಾ ರಾವ್‌ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ.

‘ಸಿನಿಮಾದೊಳಗೊಂದು ಸಿನಿಮಾ ನಡೆಯುವ ಕಥೆ ಇದರಲ್ಲಿದೆ. ಹಾಗೆಂದು ಚಿತ್ರರಂಗವನ್ನು ಲೇವಡಿ ಮಾಡುವ ಯಾವ ಉದ್ದೇಶವೂ ಇಲ್ಲ’ ಎಂದು ಮೊದಲೇ ಸ್ಪಷ್ಟಪಡಿಸಿದರು ಬಾಹುಬಲಿ. ‘ಹೀರೊಯಿನ್‌ ಎಂದರೆ ಸಿನಿಮಾಕ್ಕೆ ಮಾತ್ರ ಅಂತಲ್ಲ, ಸಮಾಜಕ್ಕೂ ಹೀರೊಯಿನ್‌ ಆಗಬಹುದು’ ಎಂಬ ವಿವರಣೆಯನ್ನೂ ಅವರು ಸೇರಿಸಿದರು.

ಸುಮಾರು 120 ಶೀರ್ಷಿಕೆಯನ್ನು ಪರಿಶೀಲಿಸಿ, ಕೊನೆಗೊಂದು ದಿನ ಚಿತ್ರಕಥೆಯ ಬಗ್ಗೆ ಮಾತನಾಡುತ್ತಿದ್ದಾಗ ಆಕಸ್ಮಿಕವಾಗಿ ಹೊಳೆದ ಈ ಸಾಲನ್ನೇ ಅವರು ಹೆಸರನ್ನಾಗಿಸಿದ್ದಾರೆ.

ತಬಲಾನಾಣಿ ಈ ಚಿತ್ರ ಪ್ರಾರಂಭವಾಗಲು ಹಿನ್ನೆಲೆಯಲ್ಲಿ ಸೂತ್ರಧಾರನಂತೆ ಕೆಲಸ ಮಾಡಿದ್ದಾರೆ. ಸಿನಿಮಾದಲ್ಲಿ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವುದೂ ಅಲ್ಲದೆ ಸಂಭಾಷಣೆ ಬರೆಯುವ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ. ‘ಮಜಾ ಟಾಕೀಸ್‌’ನ ಪವನ್‌, ಬಿ.ಸಿ. ಪಾಟೀಲ್‌, ಬುಲೆಟ್‌ ಪ್ರಕಾಶ್‌ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ತಮಿಳಿನ ಅಶ್ವಮಿತ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಇರುವ ಮೂರು ಹಾಡುಗಳಲ್ಲಿ ಎರಡನ್ನು ವಿದೇಶದಲ್ಲಿ ಚಿತ್ರೀಕರಿಸುವ ಯೋಚನೆ ನಿರ್ದೇಶಕರದ್ದು.

‘ಈ ಸಿನಿಮಾದಲ್ಲಿ ಹಾಸ್ಯ–ಮನರಂಜನೆ ಎಲ್ಲವೂ ಇದೆ. ನೋಡಿದವರಿಗೆ ಸ್ಫೂರ್ತಿ ಕೊಡುವ ಪಾತ್ರ ನನ್ನದು. ಇದರಲ್ಲಿ ಅನುಭವಿ ಕಲಾವಿದರ ದಂಡೇ ಇದೆ. ಅವರ ಜತೆ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ. ರಾಷ್ಟ್ರಪ್ರಶಸ್ತಿ ವಿಜೇತ ವಿಜಯ್‌ ಜತೆ ಕೆಲಸ ಮಾಡುತ್ತಿರುವುದೂ ಹೆಮ್ಮೆ ತಂದಿದೆ’ ಎಂದರು ಅಮೃತಾ.

‘ಈ ದೇಶದಲ್ಲಿ ಮಕ್ಕಳ ಹುಟ್ಟಿಸೋದು ಸುಲಭ. ನಗು ಹುಟ್ಟಿಸುವುದು ಕಷ್ಟ. ನಾವು ಈ ಸಿನಮಾದ ಮೂಲಕ ನಗು ಹುಟ್ಟಿಸುವ ಕೆಲಸ ಮಾಡುತ್ತಿದ್ದೇವೆ’ ಎಂದರು ಪವನ್‌. ಮೊದಲ ಬಾರಿಗೆ ಪೂರ್ಣಪ್ರಮಾಣದ ಹಾಸ್ಯಸಿನಿಮಾವೊಂದರಲ್ಲಿ ನಟಿಸುತ್ತಿರುವ ಖುಷಿಯಲ್ಲಿ ಸಂಚಾರಿ ವಿಜಯ್‌ ಇದ್ದರು.

‘ನಮ್ಮ ಸಿನಿಮಾದಲ್ಲಿ ನಾನೊಬ್ಬಕನೇ ನಾಯಕ ಅಲ್ಲ, ಈ ಸಿನಿಮಾದಲ್ಲಿ ಎಲ್ಲರೂ ನಾಯಕರೇ’ ಎಂದರು ವಿಜಯ್‌. ‘ಇದೊಂದು ಸದಭಿರುಚಿಯ ಚಿತ್ರವಾಗಲಿದೆ’ ಎನ್ನುವ ನಂಬಿಕೆ ಅವರದು.

Comments are closed.