ಮನೋರಂಜನೆ

‘ಮಾಸ್ತಿಗು‌ಡಿ’ ದುರಂತದಲ್ಲಿ ಮೃತಪಟ್ಟ ನಟರಿಬ್ಬರ ಕುಟುಂಬಕ್ಕೆ ಪರಿಹಾರ ನೀಡಲು ಆಗ್ರಹ

Pinterest LinkedIn Tumblr

uday

ಬೆಂಗಳೂರು: ಮಾಸ್ತಿಗು‌ಡಿ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣ ವೇಳೆ ನಡೆದ ಅವಘಡದಲ್ಲಿ ಖಳ ನಟರಾದ ಅನಿಲ್ ಹಾಗೂ ಉದಯ್ ಸಾವಿಗೆ ಚಿತ್ರದ ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಬೆಲೆತೆರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮೃತ ನಟರ ಎರಡೂ ಕುಟುಂಬಗಳಿಗೆ ಈ ಇಬ್ಬರೂ ಪರಿಹಾರ ನೀಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಇಂದಿಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಚಿತ್ರೀಕರಣದ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅನಿಲ್ ಹಾಗೂ ಉದಯ್ ಪ್ರಾಣ ಕಳೆದುಕೊಳ್ಳುವಂತಾಯಿತು. ಅಜಾಗರೂಕತೆ ಹಾಗೂ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ನಾಗಶೇಖರ್ ಹಾಗೂ ರವಿವರ್ಮ ಅವರಿಗೆ ಚಿತ್ರರಂಗದಿಂದ ಮುಂದಿನ ಆದೇಶದವರೆಗೂ ನಿಷೇಧ ಹೇರಲಾಗಿದೆ. ಈ ಇಬ್ಬರೂ ಮೃತ ನಟರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಪರಿಹಾರ ನೀ‌ಡದಿದ್ದರೆ ಚಿತ್ರರಂಗದಲ್ಲಿ ಕೆಲಸ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಮಾತನಾಡಿದ ಅವರು, ಪರಿಹಾರವನ್ನು ಎಷ್ಟು ಕೊಡಬೇಕು ಎನ್ನುವುದನ್ನು ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ತೀರ್ಮಾನಿಸಬೇಕು. ಆನಂತರ ವಾಣಿಜ್ಯ ಮಂಡಳಿ ಚರ್ಚಿಸಿ ಇಂತಿಷ್ಟು ಪರಿಹಾರ ಕೊಡುವಂತೆ ಸೂಚನೆ ನೀಡುತ್ತೇವೆ. ನಟರಿಬ್ಬರ ಸಾವಿಗೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದರು.

ನಿರ್ಮಾಪಕರು ಕೇಳಿದ ವಸ್ತುಗಳನ್ನೆಲ್ಲ ನೀಡಲಿಲ್ಲ ಎನ್ನುವ ಸಬೂಬು ಸಮಜಾಯಿಷಿ ನೀಡಬಹುದು. ಸಾಹಸ ನಿರ್ದೇಶಕನಾಗಿ ಯಾವುದೇ ಅಗತ್ಯ ಮುನ್ನಚ್ಚರಿಕೆ ಕ್ರಮಗಳಿಲ್ಲದಿದ್ದರೆ ಚಿತ್ರೀಕರಣವನ್ನು ಮಾಡುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಬೇಕಾಗಿತ್ತು. ತರಾತುರಿಯಲ್ಲಿ ಚಿತ್ರೀಕರಣ ಮಾಡಿ ಎರಡು ಜೀವಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಇಂತಹವುದಕ್ಕೆ ಚಿತ್ರದ ನಿರ್ದೇಶಕರಾದ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಬೆಲೆತೆರಬೇಕು ಎಂದರು.

ನಿರ್ದೇಶಕ ನಾಗಶೇಖರ್ ಹಾಗೂ ಸಾಹಸ ನಿರ್ದೇಶಕ ರವಿವರ್ಮ ಮೃತ ನಟರ ಕುಟಂಬಗಳಿಗೆ ಪರಿಹಾರ ನೀಡಲೇಬೇಕು. ಪರಿಹಾರ ನೀಡಿಯೂ ಕೂಡ ಅವರ ಮೇಲಿರುವ ನಿಷೇಧವನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.

ಘಟನೆಯ ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರಿಗೆ ಶರಣಾಗುವ ಬದಲು ಈ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಅವರು, ರಾಮನಗರ ಜೈಲಿನಲ್ಲಿರುವ ನಿರ್ಮಾಪಕ ಸುಂದರ್ ಅವರನ್ನು ಸಂಜೆ ಭೇಟಿಯಾಗುವುದಾಗಿ ಹೇಳಿದರು.

ದುರಂತಕ್ಕೆ ಚಿತ್ರತಂಡ ಕಾರಣ ಆಗಿದ್ದರೂ ನಟ ದುನಿಯಾ ವಿಜಯ್ ಕಳೆದ ನಾಲ್ಕೈದು ದಿನಗಳಿಂದ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಶವಗಳಿಗಾಗಿ ಹುಡುಕಾಟ ನಡೆಸಿ, ಮೃತ ದೇಹಗಳು ಸಿಕ್ಕ ನಂತರ ಶವ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಎಂದರು. ನಿರ್ಲಕ್ಷ್ಯದ ಆರೋಪದ ಮೇಲೆ ದುನಿಯಾ ವಿಜಯ್ ಅವರಿಗೂ ನಿಷೇಧ ಹೇರಲಾಗಿದ್ದು, ಮುಂದಿನ ದಿನಗಳಲ್ಲಿ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

Comments are closed.