ಮನೋರಂಜನೆ

ದುನಿಯಾ ವಿಜಿಗೆ ನಮಸ್ಕರಿಸಿ ಶೂಟಿಂಗ್ ಆರಂಭಿಸಿದ್ದ ಅನಿಲ್, ಉದಯ್

Pinterest LinkedIn Tumblr

duniyaಬೆಂಗಳೂರು: ಕನ್ನಡ ಚಿತ್ರರಂಗದ ಪಾಲಿಗೆ ನಿನ್ನೆ ಕರಾಳ ದಿನ. ನಟ ದುನಿಯಾ ವಿಜಿ ನಟನೆಯ ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ದುರಂತ ಅಂತ್ಯ ಕಂಡಿದೆ. ಶೂಟಿಂಗ್ ವೇಳೆ ಹೆಲಿಕಾಪ್ಟರ್‍ನಿಂದ ಜಂಪ್ ಮಾಡಿದ್ದ ಖಳನಟರಾದ ಉದಯ್ ಮತ್ತು ಅನಿಲ್ ಜಲಸಮಾಧಿಯಾಗಿದ್ದಾರೆ. ಸೋಮವಾರದಂದು ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಚಿತ್ರೀಕರಣ ದುರಂತ ಹೇಗೆಲ್ಲಾ ಆಯ್ತು ಅನ್ನೋದರ ವರದಿ ಇಲ್ಲಿದೆ.

ಬೆಳಗ್ಗೆ 9 ಗಂಟೆ 30 ನಿಮಿಷಕ್ಕೆ ಚಿತ್ರ ತಂಡ ಶೂಟಿಂಗ್ ಸ್ಪಾಟ್‍ಗೆ ಆಗಮಿಸಿತು. ಮೊದಲಿಗೆ ಚಿತ್ರೀಕರಣಕ್ಕೆ ತಯಾರಿಯನ್ನು ಚಿತ್ರತಂಡ ಮಾಡಿಕೊಂಡಿತು.

ಬೆಳಗ್ಗೆ 11 ಗಂಟೆಗೆ ಚಿತ್ರತಂಡದ ಜೊತೆಗೆ ಪಬ್ಲಿಕ್ ಟಿವಿ ಸಂದರ್ಶನ ನಡೆಸ್ತು. ಈ ವೇಳೆ ಮಾತಾಡಿದ ನಿರ್ದೇಶಕ ನಾಗಶೇಖರ್, ಖಳನಟರಾದ ಉದಯ್ ಮತ್ತು ವಿಜಯ್ ಪದೇ-ಪದೇ ಹೇಳಿದ್ದು ಸಾವಿನ ಭೀತಿಯ ಬಗ್ಗೆ. ನಿರ್ದೇಶಕರಿಗೆ ದಕ್ಷಿಣ ಭಾರತದ ಸಿನಿಮಾದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡೋ ಆಸೆ. ಆದ್ರೆ ಜೊತೆಗೆ ಜೀವಭಯ. ಖಳನಟ ಉದಯ್ ಎಲ್ಲವನ್ನೂ ಭಗವಂತನಿಗೆ ಬಿಟ್ರಿದ್ರು. ಅವನು ಕೈ ಹಿಡಿದ್ರೆ ಬದುಕಿ ಬರ್ತಿವಿ ಅಂದ್ರು. ಇತ್ತ ಅನಿಲ್ ನನಗೆ ಈಜು ಬರಲ್ಲ, ಹುಷಾರಿಲ್ಲ. ಆದ್ರೆ ರಾತ್ರಿ ಸಾಹಸ ನಿರ್ದೇಶಕ ರವಿವರ್ಮಾ ಡೂಪ್ ಬೇಡ ಅಂದಿದ್ದಾರೆ. ಮಾಡ್ಲೇಬೇಕಲ್ಲ ಅಂದ್ರು.

ಬೆಳಗ್ಗೆ 11.15ಕ್ಕೆ ಸರಿಯಾಗಿ ಶೂಟಿಂಗ್ ಸ್ಪಾಟ್‍ಗೆ ಹೆಲಿಕಾಪ್ಟರ್ ಬಂದಿಳಿಯಿತು.

ಬೆಳಗ್ಗೆ 11.30ಕ್ಕೆ ಪೂಜೆ ಸಲ್ಲಿಸಿದ ಬಳಿಕ ಚಿತ್ರೀಕರಣ ಶುರುವಾಯಿತು. ಖಳನಟರಿಬ್ಬರು ದುನಿಯಾ ವಿಜಿಗೆ ನಮಸ್ಕಾರ ಮಾಡಿದ್ರು. ಹೀರೋ ದುನಿಯಾ ವಿಜಿ ವಿಲನ್‍ಗಳಾದ ಉದಯ್ ಮತ್ತು ಅನಿಲ್‍ರನ್ನು ಬೆನ್ನತ್ತಿ ಹೋಗುವುದು, ಅವರು ತಪ್ಪಿಸಿಕೊಳ್ಳಲು ಓಡಿಹೋಗಿ ಹೆಲಿಕಾಪ್ಟರ್‍ನಲ್ಲಿ ಹಾರಲು ಯತ್ನಿಸುವುದು. ಈ ವೇಳೆ ಹೆಲಿಪ್ಯಾಡ್‍ನಲ್ಲಿ ನಿಂತಿದ್ದ ಹೆಲಿಕಾಪ್ಟರ್‍ನಲ್ಲೇ ಹೀರೋಗೂ ವಿಲನ್‍ಗಳಿಗೂ ಫೈಟಿಂಗ್ ಆಗೋದು, ನಂತರ ದುನಿಯಾ ವಿಜಿ ಹೆಲಿಕಾಪ್ಟರ್‍ವೊಳಗೆ ಸೇರಿಕೊಳ್ಳುವ ದೃಶ್ಯಾವಳಿಗಳನ್ನ ಚಿತ್ರೀಕರಿಸಲಾಯ್ತು. ಈ ಶೂಟಿಂಗ್ ಮಧ್ಯಾಹ್ನ 2.30ರವರೆಗೂ ನಡೆಯಿತು.

ಮಧ್ಯಾಹ್ನ 2.47ರ ವೇಳೆಗೆ ಶುರುವಾಗಿದ್ದೇ ಹೆಲಿಕಾಪ್ಟರ್ ಹಾರಾಟದ ಶೂಟಿಂಗ್. ಹೀರೋ, ವಿಲನ್‍ಗಳಿಬ್ಬರು ಹೆಲಿಕಾಪ್ಟರ್‍ನಲ್ಲಿ ಬಡಿದಾಡ್ತಿಬೇಕಾದ್ರೆ ಕಾಪ್ಟರ್ ಅಷ್ಟೇ ವೇಗದಲ್ಲಿ ಜಲಾಶಯದ ಮೇಲೆ ಹಾರಾಡುತ್ತೆ. ಫೈಟಿಂಗ್ ವೇಳೆ ಹೀರೋ ದುನಿಯಾ ವಿಜಿ ವಿಲನ್‍ಗಳಿಬ್ಬರನ್ನೂ ನದಿಗೆ ತಳ್ಳುವ ದೃಶ್ಯದ ಶೂಟಿಂಗ್ ನಡೆಯಿತು. ದುನಿಯಾ ವಿಜಯ್, ಉದಯ್, ಅನಿಲ್ ಮೂವರು ನೀರಿಗೆ ಡೈವ್ ಹೊಡೆದರು.

100 ಅಡಿ ಎತ್ತರದಿಂದ ಕೆರೆಗೆ ಜಿಗಿದ ತಕ್ಷಣ ವಿಜಯ್ ಅವರನ್ನು ಈಜುಗಾರ ಬಂದು ರಕ್ಷಣೆ ಮಾಡ್ತಾರೆ. ಅವರ ಹಿಂದೆ ಇದ್ದ ಉದಯ್ ಮತ್ತು ಅನಿಲ್ ಬರ್ತೇನೆ, ನೀವು ಹೋಗ್ರಣ್ಣಾ ಅಂತಾ ಈಜು ಹೊಡ್ಕೊಂಡು ದಡ ಸೇರೋ ಸರ್ಕಸ್ ಮಾಡ್ತಾರೆ. ಆದ್ರೆ ಅವರಿಗೆ ಗೊತ್ತಿಲ್ಲದ್ದಂತೆ ಸಾವು ಅವರಿಬ್ಬರನ್ನು ಎಳೆದೊಯ್ತು. ಎರಡು ಬಾರಿ ಮೇಲೆ-ಕೆಳಗಾದ ಇಬ್ಬರೂ ಕಣ್ಣಮುಂದೆಯೇ ಜಲಸಮಾಧಿಯಾದ್ರು.

ಆಘಾತಕಾರಿ ಸಂಗತಿ ಅಂದ್ರೆ ಜಲಸಮಾಧಿಯಾಗ್ತಿದ್ದಂತೆ ದಡದ ಬದಿಯಲ್ಲಿ ನಿಂತಿದ್ದವರೆಲ್ಲಾ ರಕ್ಷಣೆ ಮಾಡುವಂತೆ ಕೂಗಿಕೊಂಡ್ರು. ಆದ್ರೆ ಡೀಸೆಲ್ ಬೋಟ್ ಕೆಟ್ಟು ಹೋಗಿ ಸಕಾಲಕ್ಕೆ ಧಾವಿಸಲೇ ಇಲ್ಲ.
ಜಲಸುಳಿಯಲ್ಲಿ ಸಿಕ್ಕ ಆ ಇಬ್ಬರು ಉದಯನ್ಮೋಖ ಖಳನಟರು ಕಣ್ಮರೆಯಾದರು. ಈ ಮೂಲಕ ಯಾರೂ ನಿರೀಕ್ಷಿಸದ, ದುರಂತವೊಂದು ನಡೆದೇಬಿಡ್ತು.

Comments are closed.