ಮನೋರಂಜನೆ

ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ವಿಮರ್ಶೆ

Pinterest LinkedIn Tumblr

ಗಣೇಶ ವೈದ್ಯ

santuನಾಲ್ಕೆಂಟು ಆ್ಯಕ್ಷನ್, ಲವ್ ಸಬ್ಜೆಕ್ಟ್ ಇರುವ ಕಮರ್ಷಿಯಲ್ ಸಿನಿಮಾಗಳ ಆಯ್ದ ಭಾಗಗಳನ್ನು ಒಂದೇ ಸಿನಿಮಾದಲ್ಲಿ ಪ್ಯಾಕೇಜ್ ರೀತಿ ಕೊಟ್ಟರೆ ಹೇಗಿರುತ್ತದೆ ಎಂದು ಗೊತ್ತಾಗಬೇಕಿದ್ದರೆ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಸಿನಿಮಾ ನೋಡಬಹುದು
ಸಂತು ಸ್ಟ್ರೈಟ್ ಫಾರ್ವರ್ಡ್
ನಿರ್ಮಾಪಕ: ಕೆ. ಮಂಜು
ನಿರ್ದೇಶನ: ಮಹೇಶ್ ರಾವ್
ತಾರಾಗಣ: ಯಶ್, ರಾಧಿಕಾ ಪಂಡಿತ್‌, ರವಿಶಂಕರ್, ಅನಂತನಾಗ್

ನಾಲ್ಕೆಂಟು ಆ್ಯಕ್ಷನ್, ಲವ್ ಸಬ್ಜೆಕ್ಟ್ ಇರುವ ಕಮರ್ಷಿಯಲ್ ಸಿನಿಮಾಗಳ ಆಯ್ದ ಭಾಗಗಳನ್ನು ಒಂದೇ ಸಿನಿಮಾದಲ್ಲಿ ಪ್ಯಾಕೇಜ್ ರೀತಿ ಕೊಟ್ಟರೆ ಹೇಗಿರುತ್ತದೆ ಎಂದು ಗೊತ್ತಾಗಬೇಕಿದ್ದರೆ ‘ಸಂತೂ ಸ್ಟ್ರೈಟ್ ಫಾರ್ವರ್ಡ್’ ಸಿನಿಮಾ ನೋಡಬಹುದು. ಯಾವ ದೃಶ್ಯ ನೋಡಿದರೂ ಇದನ್ನು ಎಲ್ಲೋ ನೋಡಿದ್ದೇವೆ ಎನ್ನಿಸುತ್ತದೆ, ಸಂಭಾಷಣೆಗಳು ಎಲ್ಲೋ ಕೇಳಿದ್ದೇವೆ ಎನ್ನಿಸುತ್ತದೆ. ಅಷ್ಟರ ಮಟ್ಟಿಗೆ ನಿರ್ದೇಶಕ ಮಹೇಶ್ ರಾವ್ ಕಮರ್ಷಿಯಲ್ ಸಿನಿಮಾಗಳಲ್ಲಿ ಇರಲೇಬೇಕಾದ ಸೂತ್ರಕ್ಕೆ ಗಂಟುಬಿದ್ದಿದ್ದಾರೆ. ಸಿನಿಮಾ ಆರಂಭವಾಗುವಾಗ ಭೂಗತ ಜಗತ್ತಿನ ಹಿನ್ನೆಲೆ ಕಾಣಿಸಿದರೂ ಇಡೀ ಸಿನಿಮಾದಲ್ಲಿ ಆ ಎಳೆಯೇ ಇಲ್ಲ.

ನಾಯಕ ಸಂತು (ಯಶ್) ನಿರ್ದಿಷ್ಟ ಕೆಲಸ ಕಾರ್ಯಗಳಿಲ್ಲದಿದ್ದರೂ ತನ್ನದೇ ಇಮೇಜ್ ಬೆಳೆಸಿಕೊಂಡಾತ, ಎಲ್ಲರಿಗೂ ಸ್ನೇಹ–ಪ್ರೀತಿ ಹಂಚುವವ, ಒಳ್ಳೆಯದನ್ನೇ ಮಾಡುವವನು. ಹೆತ್ತವರನ್ನು ತುಂಬಾ ಹಚ್ಚಿಕೊಂಡವನು. ಅಂಥ ನಾಯಕನಿಗೂ ಪ್ರೀತಿಯಾಗುತ್ತದೆ. ಪ್ರೀತಿಯಲ್ಲೂ ಆತ ಸೋಲುವವನೇನಲ್ಲ. ಆದರೆ ಸಂತು ಪ್ರೀತಿಸಿದ ನಾಯಕಿ ಅನನ್ಯ (ರಾಧಿಕಾ ಪಂಡಿತ್) ಒಲ್ಲದ ಮನಸಿನಿಂದ ಬೇರೆಯವರನ್ನು ಮದುವೆ ಆಗಲು ಸಿದ್ಧಳಾದವಳು. ಆಕೆಯನ್ನು ಮದುವೆಯಾಗುವುದೇ ಸಿನಿಮಾ ಮುಗಿಯುವವರೆಗೂ ನಾಯಕನ ಏಕೈಕ ಉದ್ದೇಶ (ನಾಯಕ ನಾಯಕಿಯನ್ನು ಮದುವೆ ಆದರಷ್ಟೇ ಸಿನಿಮಾ ಮುಗಿಯುವುದು ತಾನೆ). ‘ಊರಲ್ಲೆಲ್ಲ ಇವನಿಗೆ ಕೊಡುವ ಬಿಲ್ಡಪ್ಪೇ ತಡೆಯೋಕಾಗ್ತಿಲ್ಲ’ ಎಂದು ಸಂತುವಿನ ಬಗೆಗೆ ಅವನ ತಂಗಿ ಆಡುವ ಮಾತು ಪ್ರೇಕ್ಷಕನ ಪಾಲಿಗೂ ಸತ್ಯ. ರಿಲೀಫ್ ಎಂಬಂತೆ ಒಂದಷ್ಟು ನಗುವಿನ ಕಚಗುಳಿಯೂ ಉಂಟು.

ಯಶ್ ಸಾಹಸ ದೃಶ್ಯ ಮತ್ತು ಹಾಡುಗಳಲ್ಲಿ ಮೆಚ್ಚುಗೆಯಾಗುತ್ತಾರೆ. ರಾಧಿಕಾ ಪಂಡಿತ್‌ಗೆ ದ್ವಿತೀಯಾರ್ಧದಲ್ಲಿ ಸಂಭಾಷಣೆಯೇ ಇಲ್ಲ. ನಾಯಕ ಮತ್ತು ಖಳನ ಗುದ್ದಾಟವನ್ನು ನೋಡುವ ಮೂಕ ಪ್ರೇಕ್ಷಕಿ. ಕೊನೇ ಐದು ನಿಮಿಷ ಬಂದುಹೋಗುವ ರವಿಶಂಕರ್ ನಿಜಕ್ಕೂ ರಂಜಿಸುತ್ತಾರೆ. ಉಳಿದ ಪಾತ್ರಗಳೆಲ್ಲ ನಾಯಕನ ಶ್ರೇಷ್ಠತೆಯನ್ನು ಎತ್ತರಿಸಲು ಬದ್ಧರಾದಂತೆಯೇ ವರ್ತಿಸುತ್ತವೆ. ಈ ನಿಟ್ಟಿನಲ್ಲಿ ನಾಯಕನಿಂದ ಹೊಡೆತ ತಿಂದು ಓಡುವ ಪುಡಿ ರೌಡಿಗಳಿಗೂ, ಆತನ ಅಪ್ಪ–ಅಮ್ಮ, ತಂಗಿಯ ಪಾತ್ರಗಳಿಗೂ ಹೆಚ್ಚಿನ ವ್ಯತ್ಯಾಸವೇನೂ ಕಾಣಿಸುವುದಿಲ್ಲ. ಸಿನಿಮಾ ಇಷ್ಟೊಂದು ನಾಯಕ ಕೇಂದ್ರಿತವಾಗುವುದನ್ನು ಗಮನಿಸಿದರೆ ತೆರೆಯ ಮೇಲೆ ಯಶ್ ಹೇಳುವ ‘ಕಥೆ ಮಾತ್ರ ನಿಮ್ದು, ಚಿತ್ರಕಥೆ ನಮ್ದೇ’ ಎಂಬ ಮಾತು ತೆರೆಯ ಹಿಂದೆಯೂ ಕೆಲಸ ಮಾಡಿದಂತಿದೆ.

ವಿ. ಹರಿಕೃಷ್ಣ ಸಂಗೀತದ ಹಾಡುಗಳು ತೀರಾ ಅಸಹನೀಯವಲ್ಲ. ಆಂಡ್ರೂ ಅವರ ಛಾಯಾಗ್ರಹಣ ನಾರ್ವೆ ದೇಶದ ಸೌಂದರ್ಯ ಸೆರೆಹಿಡಿಯುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಕೆ. ಎಂ. ಪ್ರಕಾಶ್ ಅವರ ಸಂಕಲನ ಚಿತ್ರಕಥೆಗೆ ಇನ್ನಷ್ಟು ವೇಗ ನೀಡಬಹುದಿತ್ತು.

Comments are closed.