ಮುಂಬೈ: ಪಾಕಿಸ್ತಾನಿ ನಟ ಫವಾದ್ ಖಾನ್ ನಟಿಸಿರುವ ‘ಏ ದಿಲ್ ಹೈ ಮುಷ್ಕಿಲ್’ ಸಿನೆಮಾವನ್ನು ಪ್ರದರ್ಶನ ಮಾಡುವ ನಗರದ ಚಿತ್ರಮಂದಿರಗಳಿಗೆ ಅಗತ್ಯ ಭದ್ರತೆ ನೀಡುವಂತೆ ಭಾರತದ ಸಿನೆಮಾ ಮತ್ತು ಟೆಲಿವಿಷನ್ ನಿರ್ಮಾಪಕರ ಸಂಘದ ಅಧ್ಯಕ್ಷ, ನಿರ್ದೇಶಕ ಮುಖೇಶ್ ಭಟ್ ಮುಂಬೈ ಪೊಲೀಸ್ ಪ್ರತಿನಿಧಿಯನ್ನು ಭೇಟಿ ಮಾಡಿ ಆಗ್ರಹಿಸಿದ್ದಾರೆ. ಎಂ ಎನ್ ಎಸ್ ಪಕ್ಷ ಹಾಕಿರುವ ಬೆದರಿಕೆ ಹಿನ್ನಲೆಯಲ್ಲಿ ಮುಖೇಶ್ ಭಟ್ ಈ ಕ್ರಮ ತೆಗೆದುಕೊಂಡಿದ್ದಾರೆ.
ಶಾಂತಿ ಕಾಪಾಡುವಂತೆ ಮಹಾರಾಷ್ಟ್ರ ನವನಿರ್ಮಾಣ ಸೇನೆಗೂ (ಎಂ ಎನ್ ಎಸ್) ಭಟ್ ಮನವಿ ಮಾಡಿದ್ದಾರೆ.
“ನನಗೆ ಎಂ ಎನ್ ಎಸ್ ಜೊತೆಗೆ ಹಲವು ಭಿನ್ನಾಭಿಪ್ರಾಯಗಳಿವೆ ಅವರಿಗೂ ನನ್ನ ಜೊತೆಗೆ. ಆದರೆ ಕೊನೆಗೆ ನಾವೆಲ್ಲರೂ ಸಹೋದರರಂತೆ. ನಾನು ನನ್ನ ಸಹೋದರರಿಗೆ ಶಾಂತಿಯಿಂದಿರಲು ಮನವಿ ಮಾಡಿಕೊಳ್ಳುತ್ತೇನೆ” ಎಂದು ಭಟ್ ಹೇಳಿದ್ದಾರೆ.
ಪಾಕಿಸ್ತಾನಿ ನಟ ಇರುವುದರಿಂದ ಈ ಸಿನೆಮಾದ ಬಿಡುಗಡೆಗೆ ಎಂ ಎನ್ ಎಸ್ ವಿರೋಧಿಸಿ ಬಿಡುಗಡೆ ಮಾಡದಂತೆ ಬೆದರಿಕೆ ಹಾಕಿದೆ. ಇದಕ್ಕೂ ಮುಂಚೆ ಭಾರತೀಯ ಸಿನೆಮಾ ಮಾಲೀಕರ ಮತ್ತು ವಿತರಕರ ಸಂಘ ಮಹಾರಾಷ್ಟ್ರ, ಗುಜರಾತ್ ಮತ್ತು ಗೋವಾದ ಸ್ವತಂತ್ರ ಚಿತ್ರಮಂದಿರಗಳಲ್ಲಿ ಈ ಸಿನೆಮಾ ಬಿಡುಗಡೆ ಮಾಡದಿರಲು ನಿರ್ಧರಿಸಿತ್ತು. ಹೀಗಿದ್ದರೂ ನಿಗದಿಯಾದಂತೆ ಅಕ್ಟೋಬರ್ 28 ರಂದು ಕರಣ್ ಜೋಹರ್ ನಿರ್ದೇಶನದ ಸಿನೆಮಾ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದರು.
ಈ ಸಿನೆಮಾ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಅಗತ್ಯ ಭದ್ರತೆ ನೀಡುವುದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ.
ಈ ಸಿನೆಮಾದಲ್ಲಿ ರಣಬೀರ್ ಕಪೂರ್, ಐಶ್ವರ್ಯ ರೈ ಬಚ್ಚನ್ ಮತ್ತು ಅನುಷ್ಕಾ ಶರ್ಮ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಮನೋರಂಜನೆ
Comments are closed.